ಆನೇಕಲ್ : ವಿವಿಧ ರಾಜ್ಯಗಳಲ್ಲಿ ಹಕ್ಕಿಜ್ವರ ಲಕ್ಷಣಗಳು ಕಾಣಿಸಿಕೊಂಡಿರುವ ಹಿನ್ನೆಲೆಯಲ್ಲಿ ಬನ್ನೇರುಘಟ್ಟ ಜೈವಿಕ ಉದ್ಯಾನದಲ್ಲಿ ಮುನ್ನೆಚ್ಚರಿಕೆ ಕ್ರಮಕೈಗೊಳ್ಳಲಾಗಿದೆ ಎಂದು ಬನ್ನೇರುಘಟ್ಟ ಜೈವಿಕ ಉದ್ಯಾನದ ಕಾರ್ಯನಿರ್ವಹಣಾಧಿಕಾರಿ ವನಶ್ರೀ ವಿಪಿನ್ ಸಿಂಗ್ ತಿಳಿಸಿದರು.
ಉದ್ಯಾನದಲ್ಲಿ ಸ್ವಚ್ಛತೆಗೆ ಹೆಚ್ಚಿನ ಒತ್ತು ನೀಡಲಾಗಿದೆ. ಪ್ರವೇಶ ದ್ವಾರ ಸೇರಿದಂತೆ ಆಯಕಟ್ಟಿನ ಸ್ಥಳಗಳಲ್ಲಿ ಔಷಧ ಸಿಂಪಡಣೆ ಮಾಡಲಾಗಿದೆ. ರಾಸಾಯನಿಕ ದ್ರಾವಣದ್ವಾರದಲ್ಲಿ ತುಂಬಲಾಗಿದ್ದು ಪ್ರವಾಸಿಗರು ಇದರ ಮೇಲೆ ನಡೆದುಕೊಂಡು ಹೋಗಲು ವ್ಯವಸ್ಥೆ ಮಾಡಲಾಗಿದೆ. ವಾಹನಗಳಿಗೆ ಪ್ರತಿದಿನ ಸ್ಯಾನಿಟೈಸ್ ಮಾಡಲಾಗುತ್ತಿದ್ದು ಉದ್ಯಾನದ ಹೊರಭಾಗ ಮತ್ತು ಒಳಭಾಗದಲ್ಲಿ ಬ್ಲೀಚಿಂಗ್ ಪೌಡರ್ ಹಾಕಿ ಸ್ವಚ್ಛತೆ ಕಾಪಾಡಿಕೊಳ್ಳಲಾಗಿದೆ. ಉದ್ಯಾನದಲ್ಲಿ ಹಕ್ಕಿಜ್ವರದ ಯಾವುದೇ ಲಕ್ಷಣಗಳು ಕಾಣಿಸಿಕೊಂಡಿಲ್ಲ. ಜೈವಿಕ ಉದ್ಯಾನದ ವ್ಯಾಪ್ತಿಯಲ್ಲಿ ಪಕ್ಷಿಗಳು ಸಾವನಪ್ಪಿದ್ದರೆ ನಿಗಾ ವಹಿಸುವಂತೆ ಮತ್ತು ಪಕ್ಷಿಗಳ ಹಿಕ್ಕೆ ಸಂಗ್ರಹಿಸಿ ಪ್ರಯೋಗಾಲಯದಲ್ಲಿ ಪರೀಕ್ಷೆ ಮಾಡಲಾಗುತ್ತಿದೆ ಎಂದು ತಿಳಿಸಿದರು.
ಬನ್ನೇರುಘಟ್ಟ ಜೈವಿಕ ಉದ್ಯಾನದ ವೈದ್ಯಾಧಿಕಾರಿ ಡಾ.ಉಮಾಶಂಕರ್ ಮಾತನಾಡಿ, ಜೈವಿಕ ಉದ್ಯಾನದಲ್ಲಿನ ಪಕ್ಷಿಗಳು ಮುಚ್ಚಿದ ಆವರಣದಲ್ಲಿವೆ. ಈ ಪಕ್ಷಿಗಳಿಗೆ ಹೊರಭಾಗದ ಪಕ್ಷಿಗಳ ಸಂಪರ್ಕವಿಲ್ಲ. ಪಕ್ಷಿಗಳಿಗೆ ಆಹಾರ ಪೂರೈಕೆ ಸಂದರ್ಭದಲ್ಲಿ ಪಕ್ಷಿ ಪಾಲಕರು ಸ್ವಚ್ಛತೆಗೆ ಹೆಚ್ಚಿನ ಗಮನ ನೀಡುತ್ತಿದ್ದಾರೆ. ಸಸ್ಯಹಾರಿ ಪ್ರಾಣಿ ಸಫಾರಿಯಲ್ಲಿನ ಕೆರೆಗಳಿಗೆ ವಲಸೆ ಪಕ್ಷಿಗಳು ಬರುತ್ತವೆ. ಹಾಗಾಗಿ ಈ ಭಾಗದಲ್ಲಿ ನಿಗಾ ವಹಿಸಲಾಗಿದೆ ಎಂದು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.