ADVERTISEMENT

ಮೊಟ್ಟೆ: ಕಾಂಗ್ರೆಸ್‌ ಪಂಜಿನ ಮೆರವಣಿಗೆ

ವೈಫಲ್ಯ ಮುಚ್ಚಿಕೊಳ್ಳಲು ಸರ್ಕಾರದ ಯತ್ನ: ಕೈ ಮುಖಂಡರ ಆರೋಪ

​ಪ್ರಜಾವಾಣಿ ವಾರ್ತೆ
Published 22 ಆಗಸ್ಟ್ 2022, 3:54 IST
Last Updated 22 ಆಗಸ್ಟ್ 2022, 3:54 IST
ಮಡಿಕೇರಿಯಲ್ಲಿ ಸಿದ್ದರಾಮಯ್ಯ ಅವರ ಕಾರಿನ ಮೇಲೆ ಮೊಟ್ಟೆ ಎಸೆದ ಘಟನೆ ಖಂಡಿಸಿ ಆನೇಕಲ್ ಪಟ್ಟಣದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಪಂಜಿನ ಮೆರವಣಿಗೆ ನಡೆಸಿ ಪ್ರತಿಭಟಿಸಿದರು. ಶಾಸಕ ಬಿ.ಶಿವಣ್ಣ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ದೊಡ್ಡಹಾಗಡೆ ಹರೀಶ್ ಹಾಗೂ ಕಾರ್ಯಕರ್ತರು ಇದ್ದಾರೆ
ಮಡಿಕೇರಿಯಲ್ಲಿ ಸಿದ್ದರಾಮಯ್ಯ ಅವರ ಕಾರಿನ ಮೇಲೆ ಮೊಟ್ಟೆ ಎಸೆದ ಘಟನೆ ಖಂಡಿಸಿ ಆನೇಕಲ್ ಪಟ್ಟಣದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಪಂಜಿನ ಮೆರವಣಿಗೆ ನಡೆಸಿ ಪ್ರತಿಭಟಿಸಿದರು. ಶಾಸಕ ಬಿ.ಶಿವಣ್ಣ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ದೊಡ್ಡಹಾಗಡೆ ಹರೀಶ್ ಹಾಗೂ ಕಾರ್ಯಕರ್ತರು ಇದ್ದಾರೆ   

ಆನೇಕಲ್: ಮಡಿಕೇರಿಯಲ್ಲಿ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರ ಕಾರಿನ ಮೇಲೆ ಮೊಟ್ಟೆ ಎಸೆದ ಘಟನೆಯನ್ನು ಖಂಡಿಸಿ ಆನೇಕಲ್‌ ಪಟ್ಟಣದಲ್ಲಿ ಕಾಂಗ್ರೆಸ್‌ ಕಾರ್ಯಕರ್ತರು ಭಾನುವಾರ ಪಂಜಿನ ಮೆರವಣಿಗೆ ನಡೆಸಿ ಪ್ರತಿಭಟಿಸಿದರು.

ಶಾಸಕ ಬಿ.ಶಿವಣ್ಣ ಮಾತನಾಡಿ, ಕಾಂಗ್ರೆಸ್ ಸಂಘಟನೆಯನ್ನು ಕಂಡು ಭಯಗೊಂಡಿರುವ ಬಿಜೆಪಿ ವಾಮ ಮಾರ್ಗಗಳ ಮೂಲಕ ಕಾಂಗ್ರೆಸ್‌ ಮುಖಂಡರ ಮೇಲೆ ಐಟಿ, ಇ.ಡಿ ದಾಳಿ ನಡೆಸಿಸುತ್ತಿದೆ. ಇದೀಗ ಮೊಟ್ಟೆ ದಾಳಿ ನಡೆಸಲು ಮುಂದಾಗಿರುವುದು ಆತಂಕಕಾರಿಯಾಗಿದೆ ಎಂದು ಹೇಳಿದರು.

ವಿರೋಧ ಪಕ್ಷ ಎಂಬುದು ಸಾಂವಿಧಾನಿಕ ಹುದ್ದೆಯಾಗಿದ್ದು, ಅಂಥ ಸ್ಥಾನದಲ್ಲಿರುವ ಸಿದ್ದರಾಮಯ್ಯ ಅವರು ಮಡಿಕೇರಿ ಭೇಟಿ ಸಂದರ್ಭದಲ್ಲಿ ಅವರ ಕಾರಿನ ಮೇಲೆ ಮೊಟ್ಟೆ ಎಸೆದರೂ, ಪೊಲೀಸರು ಕ್ರಮ ಕೈಗೊಳ್ಳದಿರುವುದುರಾಜ್ಯದ ಬಿಜೆಪಿ ಸರ್ಕಾರದ ಕಾರ್ಯವೈಖರಿಗೆ ಕನ್ನಡಿಯಾಗಿದೆ. ವಿರೋಧ ಪಕ್ಷದ ನಾಯಕರಿಗೆ ರಕ್ಷಣೆ ನೀಡದಿರುವ ರಾಜ್ಯ ಸರ್ಕಾರ ಸಾಮಾನ್ಯ ಜನರ ರಕ್ಷಣೆ ಎಷ್ಟರ ಮಟ್ಟಿಗೆ ಮಾಡುತ್ತದೆ ಎಂದು ಟೀಕಿಸಿದರು.

ADVERTISEMENT

ಬಿಜೆಪಿ ತನ್ನ ವೈಫಲ್ಯ
ಗಳನ್ನು ಮುಚ್ಚಿಕೊಳ್ಳಲು ಸುಳ್ಳಿನ ಸರಮಾಲೆಯನ್ನು ಪೋಣಿಸುತ್ತಿದೆ. ನಿರುದ್ಯೋಗ, ಭ್ರಷ್ಟಾಚಾರಗಳಿಂದ ತೀವ್ರ ಆಕ್ರೋಶಗೊಂಡಿರುವ ಜನತೆಯ ಮನಸ್ಸನ್ನು ಬೇರೆಡೆಗೆ ಸೆಳೆಯಲು ವಿವಿಧ ಗಿಮಿಕ್‌ಗಳನ್ನು ಬಿಜೆಪಿ ಮಾಡುತ್ತಿದೆ. ಇಂತಹ ಹೀನ ಕೃತ್ಯಗಳಿಗೆ ರಾಜ್ಯದ ಜನತೆ ಬೆಂಬಲ ನೀಡುವುದಿಲ್ಲ. ಮುಂಬರುವ ಚುನಾವಣೆಯಲ್ಲಿ ಬಿಜೆಪಿಗೆ ಜನತೆ ತಕ್ಕ ಪಾಠ ಕಲಿಸಲಿದ್ದಾರೆ ಎಂದರು.

ಪುರಸಭಾ ಅಧ್ಯಕ್ಷ ಎನ್.ಎಸ್.ಪದ್ಮನಾಭ, ಸದಸ್ಯರಾದ ಮುನಾವರ್, ಕೃಷ್ಣ, ರವಿ, ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ರಘುಪತಿರೆಡ್ಡಿ, ವಣಕನಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಶ್ರೀನಿವಾಸ್, ಮುಖಂಡರಾದ ಪಟಾಪಟ್‌ ನಾಗ
ರಾಜು, ಐ.ಸಿ.ಎಂ.ಕೃಷ್ಣಮೂರ್ತಿ, ಎಂ.ಬಿ.ಐ.ಸೋಮಶೇಖರ್‌ರೆಡ್ಡಿ, ಅರೇಹಳ್ಳಿ ಮಧು, ಶ್ರೀನಿವಾಸ್‌, ಕಾರ್ತಿಕ್‌ರೆಡ್ಡಿ, ರಾಮಚಂದ್ರರೆಡ್ಡಿ, ಮೆಣಸಿಗನಹಳ್ಳಿ
ಮುನಿರಾಜು, ಸಿಡಿಹೊಸಕೋಟೆ ಚಿನ್ನಪ್ಪ, ಮುನಿಕೃಷ್ಣ, ಅಂಬರೀಷ್‌, ಮುನಿರಾಮರೆಡ್ಡಿ, ವಾಸು ಇದ್ದರು.

ಸುಳ್ಳಿನ ಸರಮಾಲೆ ಹೆಣೆದ ಬಿಜೆಪಿ

ಸಿದ್ದರಾಮಯ್ಯ ಅವರ ಕಾರಿನ ಮೇಲೆ ಮೊಟ್ಟೆ ಎಸೆಯುವಂತಹ ಹೀನ ಕೃತ್ಯವನ್ನು ನಡೆಸಿದ ವ್ಯಕ್ತಿಯನ್ನು ಬಿಜೆಪಿಯವರು ಕಾಂಗ್ರೆಸ್‌ನವರೆಂದು ಹೇಳುವ ಮೂಲಕ ಸುಳ್ಳಿನ ಸರಮಾಲೆಯನ್ನು ಹೆಣೆದಿದ್ದಾರೆ ಎಂದುಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ದೊಡ್ಡಹಾಗಡೆ ಹರೀಶ್‌ಗೌಡ ದೂರಿದರು.

ಆ ವ್ಯಕ್ತಿ ಕಾಂಗ್ರೆಸ್‌ನವರಾಗಿದ್ದರೆ ಅವರನ್ನು ಬಿಡಿಸಲು ಬಿಜೆಪಿ ಶಾಸಕರು ಪೊಲೀಸ್‌ ಠಾಣೆಗೆ ಹೋಗಿದ್ದೇಕೆ ಎಂದು ಪ್ರಶ್ನಿಸಿದರು. ಹೇಳಿಕೆಯಲ್ಲಿ ಮಾತ್ರ ಕಾಂಗ್ರೆಸ್‌ ಮುಖಂಡ ಎಂದು ಹೇಳುತ್ತಿದ್ದಾರೆ. ಇದು ಬಿಜೆಪಿಯವರ ದ್ವಂದ್ವ ನೀತಿಗೆ ಸಾಕ್ಷಿಯಾಗಿದೆ. ಸುಳ್ಳುಗಳನ್ನೇ ಬಂಡವಾಳವನ್ನಾಗಿ ಮಾಡಿಕೊಂಡು ಬಂದಿರುವ ಬಿಜೆಪಿಯ ಹುನ್ನಾರ ರಾಜ್ಯದ ಜನತೆಗೆ ಅರ್ಥವಾಗುತ್ತದೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.