ADVERTISEMENT

ದೇವನಹಳ್ಳಿ | ಸಾವಿರ ದಾಟಿದ ಮೂಟೆ ಹಿಪ್ಪುನೇರಳೆ ಸೊಪ್ಪಿನ ದರ: ಬೆಳೆಗಾರರಿಗೆ ಬಂಪರ್

ಕೆಂಪೇಗೌಡ ಎನ್.ವೆಂಕಟೇನಹಳ್ಳಿ
Published 4 ಜನವರಿ 2026, 6:04 IST
Last Updated 4 ಜನವರಿ 2026, 6:04 IST
ಹಿಪ್ಪುನೇರಳೆ ಸೊಪ್ಪಿನ ತೋಟ
ಹಿಪ್ಪುನೇರಳೆ ಸೊಪ್ಪಿನ ತೋಟ   

ವಿಜಯಪುರ (ದೇವನಹಳ್ಳಿ): ಈಗ ರೇಷ್ಮೆ ಗೂಡಿಗೆ ಮಾರುಕಟ್ಟೆಯಲ್ಲಿ ಉತ್ತಮ ದರ ಇದೆ. ಹೀಗಾಗಿ ಬಹುತೇಕ ರೈತರು ಮರಳಿ ರೇಷ್ಮೆ ಹುಳ ಸಾಕಾಣಿಕೆಗೆ ಒತ್ತು ನೀಡಿದ್ದಾರೆ. ಇದರ ಪರಿಣಾಮ ಹಿಪ್ಪುನೇರಳೆ ಸೊಪ್ಪಿಗೆ ಬೇಡಿಕೆಯ ಜೊತೆಗೆ ಬೆಲೆಯಲ್ಲೂ ಏರಿಕೆ ಕಂಡಿದೆ.

ಪ್ರಸ್ತುತ ಚಳಿ ಹೆಚ್ಚಾಗಿರುವುದು, ಹವಾಮಾನದಲ್ಲಿ ಥಂಡಿ ಉಂಟಾಗಿರುವುದರಿಂದ ಹಿಪ್ಪುನೇರಳೆ ಸೊಪ್ಪಿನ ಬೆಳೆವಣಿಗೆ ಕುಂಠಿತಕ್ಕೆ ಕಾರಣವಾಗಿದೆ. ಅಲ್ಲದೇ ಸೊಪ್ಪಿನ ಚಿಗುರಿನ ಕೊಡಿಗೆ ನುಸಿ ರೋಗ, ಬೂದಿ ರೋಗ ಕಾಣಿಸಿಕೊಳ್ಳುತ್ತಿದೆ. ಇದನ್ನು ನಿಯಂತ್ರಿಸಲು ಬೆಳೆಗಾರರು ರಾಸಾಯನಿಕ ಔಷಧಿ ಸಿಂಪಡಣೆಯ ಕಾರ್ಯಕ್ಕೆ ಮುಂದಾಗಿದ್ದಾರೆ.

ಕಳೆದ 15 ದಿನಗಳ ಹಿಂದೆ ಸರಾಸರಿ ₹500 ವರೆಗೆ ಮಾರಾಟವಾಗುತ್ತಿದ್ದ ಮೂಟೆ ಹಿಪ್ಪುನೇರಳೆ ಸೊಪ್ಪು ಈಗ ₹800 ರಿಂದ ₹1,000 ವರೆಗೆ ಮಾರಾಟವಾಗುತ್ತಿದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಏರಿಕೆಯಾಗುವ ಸಾಧ್ಯತೆ ಇದೆ ಎನ್ನುತ್ತಾರೆ ರೇಷ್ಮೆ ಬೆಳೆಗಾರರು.

ADVERTISEMENT

ಬೇಸಿಗೆಯಲ್ಲಿ 55 ರಿಂದ 60 ದಿನದೊಳಗೆ ಹಿಪ್ಪು ನೇರಳೆ ಸೊಪ್ಪು ಕೊಯ್ಲಿಗೆ ಬರುತ್ತದೆ. ಚಳಿಗಾಲದಲ್ಲಿ 70 ರಿಂದ 80 ದಿನಗಳ ಕಾಲ ಸೊಪ್ಪು ಕೊಯ್ಲಿಗೆ ಬರುತ್ತಿದೆ. ಈ ಸಮಯದಲ್ಲಿ ಬೇಡಿಕೆ ಹಾಗೂ ಬೆಲೆ ಹೆಚ್ಚಾಗುವುದು ಸಹಜ ಎಂದು ರೇಷ್ಮೆ ಹುಳ ಸಾಕಾಣಿಕೆದಾರ ಶಿವಕುಮಾರ್ ಹೇಳುತ್ತಾರೆ.

ನೂರು ಮೊಟ್ಟೆ ರೇಷ್ಮೆ ಹುಳ ಸಾಕಲು ಕನಿಷ್ಠ 35 ರಿಂದ 40 ಮೂಟೆ ಸೊಪ್ಪು ಅಗತ್ಯ. ಬರೀ ಸೊಪ್ಪಿಗಾಗಿ ₹40 ಸಾವಿರಕ್ಕೂ ಅಧಿಕ ವ್ಯಯ ಮಾಡಬೇಕಾದ ಪರಿಸ್ಥಿತಿ ನಿರ್ಮಾಣಗೊಂಡಿದೆ. ಈಗ ಸೊಪ್ಪು ಮಾರಾಟ ಮಾಡುವ ರೈತರಿಗೆ ಉತ್ತಮ ಆದಾಯವಿದೆ. ಸೊಪ್ಪು ಖರೀದಿಸಿ ಹುಳ ಸಾಕುವರರಿಗೆ ಉತ್ತಮ ಗೂಡು ಬಂದರೆ ಮಾತ್ರ ಬಂಡವಾಳ ಬರಲಿದೆ ಇಲ್ಲವಾದರೆ ಹೆಚ್ಚು ನಷ್ಟವಾಗಲಿದೆ ಎನ್ನುತ್ತಾರೆ ರೇಷ್ಮೆ ಕೃಷಿಕ ಮಂಜುನಾಥ್.

ಅಂಕಿ ಅಂಶ

5,201 -ಜಿಲ್ಲೆಯಲ್ಲಿ ಹೆಕ್ಟೇರ್ ಪ್ರದೇಶದಲ್ಲಿ ಹಿಪ್ಪುನೇರಳೆ ಬೆಳೆ

7,439-ರೇಷ್ಮೆ ಬೆಳೆಗಾರರು 

ಚಳಿ ಹೆಚ್ಚಾಗಿರುವುದರಿಂದ ಹಿಪ್ಪುನೇರಳೆ ಸೊಪ್ಪಿನ ಬೆಳೆವಣಿಗೆಯಲ್ಲಿ ಕುಂಠಿತಗೊಂಡಿದೆ. ಹೀಗಾಗಿಯೇ ಬೇಡಿಕೆ ಶುರುವಾಗಿದ್ದು ಬೆಲೆ ದುಬಾರಿಯಾಗಿದ್ದು ಮುಂದಿನ ದಿನಗಳಲ್ಲಿ ಬೆಲೆ ಕಡಿಮೆಯಾಗಲಿದೆ.
ಗೋಪಾಲ್ ರೇಷ್ಮೆ ಬೆಳೆಗಾರ
ಮೂಟೆ ಲೆಕ್ಕದಲ್ಲಿ ಮುಂಗಡ ಖರೀದಿ
ಸದ್ಯ ಹಿಪ್ಪುನೇರಳೆ ಸೊಪ್ಪಿನ ದರ ದುಬಾರಿಯಾಗಿರುವುದರಿಂದ ಸೊಪ್ಪು ಹೊಂದಿರುವ ರೈತರು ಸೊಪ್ಪು ಮಾರಾಟ ಮಾಡಿ ಉತ್ತಮ ಆದಾಯ ಗಳಿಸುವತ್ತ ಗಮನ ಹರಿಸಿದ್ದಾರೆ. ರೇಷ್ಮೆ ಹುಳ ಸಾಕಾಣಿಕೆದಾರರು ಸೊಪ್ಪು ಹೊಂದಿರುವ ರೈತರಿಗೆ ಮೂಟೆ ಲೆಕ್ಕದಲ್ಲಿ ಮುಂಗಡವಾಗಿ ಹಣ ಪಾವತಿಸಿ ರೇಷ್ಮೆ ಹುಳ ಸಾಕಲು ಮುಂದಾಗಿದ್ದಾರೆ. ಹುಳುಗಳಿಗೆ ದುಬಾರಿ ಖರ್ಚು ಈ ಹಿಂದೆ 1 ಮತ್ತು 2 ಜ್ವರದ ಹುಳ ಚಾಕಿ ಕೇಂದ್ರಗಳಲ್ಲಿ ರೈತರಿಗೆ ಸಿಗುತ್ತಿತ್ತು ಇತ್ತೀಚಿನ ದಿನಗಳಲ್ಲಿ 3 ಜ್ವರದ ಹುಳಗಳ ರೈತರಿಗೆ ಲಭ್ಯವಾಗುತ್ತಿದ್ದು ನೂರು ಮೊಟ್ಟೆ 3 ಜ್ವರದ ರೇಷ್ಮೆ ಹುಳಕ್ಕೆ ₹10 ರಿಂದ ₹12 ಸಾವಿರ ದುಬಾರಿ ಖರ್ಚು ರೈತರಿಗೆ ತಗಲುತ್ತಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.