ADVERTISEMENT

ಮುತ್ತಾನಲ್ಲೂರು ಕೆರೆ: ಆಗ ಜೀವಜಲ–ಈಗ ಜೀವಕ್ಕೆ ಸಂಚಾಕಾರ

ಕೈಗಾರಿಕೆ ದ್ರವ ತ್ಯಾಜ್ಯ, ಕೊಳಚೆ ನೀರಿನಿಂದ ಗಬ್ಬುನಾರುತ್ತಿದೆ ಜೀವನಾಡಿ । ಜನ–ಜಾನುವಾರುಗಳಲ್ಲಿ ಅನಾರೋಗ್ಯ

​ಪ್ರಜಾವಾಣಿ ವಾರ್ತೆ
Published 18 ಆಗಸ್ಟ್ 2025, 2:02 IST
Last Updated 18 ಆಗಸ್ಟ್ 2025, 2:02 IST
ಆನೇಕಲ್‌ ತಾಲ್ಲೂಕಿನ ಮುತ್ತಾನಲ್ಲೂರು ಕೆರೆಯಲ್ಲಿ ಜೊಂಡು ಬೆಳೆದಿರುವುದು
ಆನೇಕಲ್‌ ತಾಲ್ಲೂಕಿನ ಮುತ್ತಾನಲ್ಲೂರು ಕೆರೆಯಲ್ಲಿ ಜೊಂಡು ಬೆಳೆದಿರುವುದು   

ಆನೇಕಲ್: ಸ್ಥಳೀಯ ಸಂಸ್ಥೆ ಮತ್ತು ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ನಿರ್ಲಕ್ಷ್ಯದಿಂದ ಬೆಂಗಳೂರು ನಗರ ಜಿಲ್ಲೆಯ ದೊಡ್ಡ ಕೆರೆಗಳಲ್ಲಿಯೇ ಒಂದಾಗಿರುವ ಮುತ್ತಾನಲ್ಲೂರು ಕೆರೆಗೆ ಕೈಗಾರಿಕೆ ಕೊಳಚೆ ಮತ್ತು  ಕಲುಷಿತ ನೀರು ಸೇರಿತ್ತಿದ್ದು, ಕೆರೆ ನೀರು ಸಂಪೂರ್ಣ ಮಲಿನಗೊಂಡಿದೆ.

15 ವರ್ಷದ ಹಿಂದೆ ಈ ಕೆರೆಯ ನೀರನ್ನು ಕುಡಿಯಲು ಬಳಸುತ್ತಿದ್ದರು. ಈಗ ಕೆರೆಯ ನೀರು ಕಪ್ಪು ಬಣ್ಣಕ್ಕೆ ತಿರುಗಿದ್ದು, ಗಬ್ಬುನಾರುತ್ತಿದೆ. ಕೆರೆ ಹತ್ತಿರಕ್ಕೂ ಹೋಗಲು ಜನ ಹಿಂಜರಿಯುತ್ತಿದ್ದಾರೆ.

ತಾಲ್ಲೂಕಿನ ಮುತ್ತಾನಲ್ಲೂರು ಅಮಾನಿ ಕೆರೆಯು ಅಂದಾಜು 600 ಎಕರೆ ಪ್ರದೇಶದಲ್ಲಿದೆ. ಕೆರೆಯು ಮುತ್ತಾನಲ್ಲೂರು, ಅಳಿಬೊಮ್ಮಸಂದ್ರ, ಲಕ್ಷ್ಮೀಸಾಗರ, ನಾರಾಯಣಘಟ್ಟ, ರಾಮಸಾಗರ, ಹಂದೇನಹಳ್ಳಿ, ಸೊಳ್ಳೆಪುರ ಗ್ರಾಮಗಳಿಗೆ ಹೊಂದಿಕೊಂಡಿದೆ.

ADVERTISEMENT

ಕೆರೆಯ ಜಲಮೂಲಗಳಾದ ರಾಜಕಾಲುವೆ ಮೂಲಕ ಕೊಳಚೆ ನೀರು ಹರಿದು ಬರುತ್ತಿದೆ. ಅಲ್ಲದೆ ಸುಮಾರು 100ಕ್ಕೂ ಹೆಚ್ಚು ಕೆರೆಗಳ ನೀರು ಮುತ್ತಾನಲ್ಲೂರು ಕೆರೆಗೆ ಹರಿಯುತ್ತದೆ. ಈ ಕೆರೆಗಳೂ ಕಲುಷಿತವಾಗಿ, ಹರಿಯುವ ಮಾರ್ಗಮಧ್ಯದಲ್ಲಿ ಇನ್ನಷ್ಟು ಕೊಳಕಾಗುತ್ತಿವೆ. ಇದರಿಂದ ಕೆರೆಯ ಜಲಮೂಲವೇ ಮಾಲಿನ್ಯ ಗೊಂಡಿದೆ.

ಬೊಮ್ಮಸಂದ್ರ ಮತ್ತು ಜಿಗಣಿ ಕೈಗಾರಿಕಾ ಪ್ರದೇಶದ ದ್ರವ ತ್ಯಾಜ್ಯ ಕೆರೆ ಮಾಲಿನ್ಯವಾಗಲು ಬಹುದೊಡ್ಡ ಕೊಡುಗೆ ನೀಡುತ್ತಿದೆ. ಕೆರೆ ನೀರಿನಿಂದ ಅಂತರ್ಜಲವು ಕಲುಷಿತವಾಗಿರುವುದರಿಂದ ಈ ಭಾಗದ ಜನರಲ್ಲಿ ಅನೇಕ ಆರೋಗ್ಯ ಸಮಸ್ಯೆ ಕಾಡಲಾರಂಭಿಸಿದೆ.

ಕೆರೆಯ ಉಳಿವಿಗಾಗಿ ಸ್ಥಳೀಯರು ಹಲವು ಹೋರಾಟ ಹಾಗೂ ಪಾದಯಾತ್ರೆ ನಡೆಸಿದರೂ ಯಾರಿಂದಲೂ ಸ್ಪಂದನೆ ದೊರೆತಿಲ್ಲ.

ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯು ತ್ಯಾಜ್ಯ ನೀರು ಹರಿಯುವುದನ್ನು ತಡೆಯಬೇಕು. ಪುರಸಭೆ ಮತ್ತು ಕೈಗಾರಿಕೆಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಬೇಕು ಎಂಬುದು ಸ್ಥಳೀಯರ ಒತ್ತಾಯ. ಆದರೆ ಮಾಲಿನ್ಯ ನಿಯಂತ್ರಣ ಮಂಡಳಿಯ ಅಧಿಕಾರಿಗಳು ಸಮಸ್ಯೆ ಬಂದಾಗ ಸ್ಥಳಕ್ಕೆ ಭೇಟಿ ನೀಡಿ ನೀರಿನ ಮಾದರಿ ಸಂಗ್ರಹಿಸಿ, ಪ್ರಯೋಗಾಲಯಕ್ಕೆ ಕಳುಹಿಸಿ ಕೊಡುವುದನ್ನು ಬಿಟ್ಟರೆ ಬೇರೆ ಯಾವುದೇ ಕ್ರಮ ಕೈಗೊಂಡಿಲ್ಲ.

ಮುತ್ತಾನಲ್ಲೂರು ಕೆರೆಯು ಕೈಗಾರಿಕೆಗಳ ದ್ರವ ತ್ಯಾಜ್ಯ ಹಾಗೂ ಪುರಸಭೆ ವ್ಯಾಪ್ತಿಯ ಮನೆಗಳ ಕೊಳಚೆ ನೀರಿನಿಂದ ಅಸ್ತಿತ್ವನ್ನೇ ಕಳೆದುಕೊಳ್ಳುತ್ತಿದೆ.

ರಾಜಕಾಲುವೆಗಳಿಂದ ಕೆರೆಗೆ ಹರಿಯುವ ಕೊಳಚೆ ನೀರು
ರಾಜಕಾಲುವೆಗಳಿಂದ ಕೆರೆಗೆ ಹರಿಯುವ ಕೊಳಚೆ ನೀರು
ಮುತ್ತಾನಲ್ಲೂರು ಕೆರೆಯ ಜಲಮೂಲವಾದ ರಾಜಕಾಲುವೆಗಳಲ್ಲಿಯೇ ತ್ಯಾಜ್ಯ ನೀರು ಹರಿಯುತ್ತಿದೆ. ಇದರಿಂದ ಕೆರೆ ನೀರು ಕೊಳಚೆಯಾಗಿ ಮಾರ್ಪಟ್ಟಿದೆ. ಸೊಳ್ಳೆಗಳ ಕಾಟ ಹೆಚ್ಚಾಗಿದ್ದು ಸಂಜೆಯ 5ರ ನಂತರ ಇಲ್ಲಿ ಓಡಾಡಲು ಸಹ ಸಾಧ್ಯವಿಲ್ಲ.
ತಿಮ್ಮಾರೆಡ್ಡಿ ರೈತ

ಕಾಡುತ್ತಿವೆ ಅನೇಕ ಆರೋಗ್ಯ ಸಮಸ್ಯೆ:

ಕೆರೆ ಮತ್ತು ತಮ್ಮ ನಡುವಿನ ಸಂಬಂಧದ ಬಗ್ಗೆ ‘ಪ್ರಜಾವಾಣಿ’ಯೊಂದಿಗೆ ಮಾತಿಗಿಳಿದ ರೈತ ರಾಮಕೃಷ್ಣಪ್ಪ ಮುತ್ತಾನಲ್ಲೂರು ಕೆರೆಗೆ ತ್ಯಾಜ್ಯ ನೀರು ಹರಿಯುತ್ತಿರುವುದರಿಂದ ಆರೋಗ್ಯ ಸಮಸ್ಯೆ ಉಂಟಾಗಿದೆ. ಗಂಟಲು ನೋವು ಜ್ವರದ ಸಮಸ್ಯೆಗಳು ಹೆಚ್ಚಾಗುತ್ತಿದೆ. ಸೊಳ್ಳೆಗಳ ಕಾಟ ಸಹ ಹೆಚ್ಚಾಗಿದೆ. ಹಲವು ವರ್ಷಗಳ ಹಿಂದೆ ಮುತ್ತಾನಲ್ಲೂರು ಕೆರೆಯ ನೀರು ಕುಡಿಯುವ ಬಳಸುತ್ತಿದ್ದೇವು ಆದರೆ ಇಂದು ಮುಟ್ಟಲು ಆಗುತ್ತಿಲ್ಲ’ ಎಂದು ಬೇಸರಿಸಿದರು. ಮಳೆ ಬಂದರೆ ಕೆರೆ ಸಮೀಪ ಮಿವಾಸಿಗಳು ಜೀವನ ನಡೆಸುವುದೇ ಕಷ್ಟವಾಗಿದೆ. ಕೆರೆಯಿಂದ ಸುತ್ತಮುತ್ತಲಿನ ಗ್ರಾಮಗಳ ಅಂತರ್ಜಲ ಕಲುಷಿತವಾಗಿದೆ. ಈ ನೀರು ಕುಡಿದು ಹಲವು ರಾಸುಗಳು ಮೃತಪಟ್ಟಿವೆ. ಕೆರೆಗಳ ಮೀನುಗಳು ಸಾಯುತ್ತಿವೆ. ಕೆರೆಯ ನೀರಿನಿಂದ ಕೃಷಿ ಮಾಡಲು ಆಗುತ್ತಿಲ್ಲ. ಈ ನೀರಲ್ಲಿ ಕೃಷಿ ಮಾಡಿದರೆ ಕಾಲುಗಳಿಗೆ ಚರ್ಮದ ಆಲರ್ಜಿ ಆಗುತ್ತದೆ. ಇನ್ನೂ ಈ ನೀರಿನಿಂದ ಬೆಳೆದ ಬೆಳೆಯ ಗತಿಯೇನು?. ಹೀಗಾಗಿ ಕೆರೆ ನೀರು ಬಳಸುವುದನ್ನೇ ಬಿಟ್ಟಿದ್ದೇವೆ. ಮುತ್ತಾನಲ್ಲೂರು ಕೆರೆಯಲ್ಲಿ ವಿವಿಧ ಜಾತಿಯ ಪಕ್ಷಿಗಳಿದ್ದವು. ಆದರೆ ತ್ಯಾಜ್ಯ ನೀರು ಹರಿಯುವುದು ಆರಂಭವಾದ ಮೇಲೆ ಪಕ್ಷಿಗಳ ಸಂಖ್ಯೆ ಗಣನೀಯವಾಗಿ ಕಡಿಮೆಯಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಮತ್ತೊಂದು ಬೆಳ್ಳಂದೂರು ಕೆರೆಯಾಗದಿರಲಿ:

ಮುತ್ತಾನಲ್ಲೂರು ಕೆರೆಯು ಮತ್ತೊಂದು ಬೆಳ್ಳಂಡೂರು ಕೆರೆಯಾಗುತ್ತಿದೆ. ಕೈಗಾರಿಕಾ ದ್ರವ ಮತ್ತು ತ್ಯಾಜ್ಯ ನೀರು ಹರಿಯುತ್ತಿರುವುದಿಂದ ಕೆರೆಯ ರಾಜಕಾಲುವೆಗಳಲ್ಲಿ ಬಿಳಿಯ ನೊರೆ ಕಾಣಿಸುತ್ತಿದೆ. ಕೆರೆಯ ಅಭಿವೃದ್ಧಿಗೆ ಸರ್ಕಾರ ಶೀಘ್ರ ಮತ್ತು ದಿಟ್ಟ ನಿರ್ಧಾರ ಕೈಗೊಳ್ಳಬೇಕು ಎಂದು ಸ್ಥಳೀಯ ನವೀನ್‌ ಒತ್ತಾಯಿಸಿದ್ದಾರೆ.

ಕೈಗಾರಿಕೆ ನಿರ್ಮಾಣಕ್ಕೆ ಸಿದ್ಧತೆ: ಸ್ಥಳೀಯರ ಆಕ್ಷೇಪ

ಈ ನಡುವೆ ಮುತ್ತಾನಲ್ಲೂರು ಸೇರಿದಂತೆ ಸರ್ಜಾಪುರ ಹೋಬಳಿಯಲ್ಲಿ ಕೆಐಎಡಿಬಿಯು ಕೈಗಾರಿಕೆಗಳ ನಿರ್ಮಾಣಕ್ಕೆ ಸಿದ್ಧತೆ ನಡೆಸಿದೆ. 10 ಕಿ.ಮೀ.ಗೂ ದೂರದಿಂದ ಬರುತ್ತಿರುವ ತ್ಯಾಜ್ಯ ನೀರಿನಿಂದಲೇ ಇಷ್ಟೆಲ್ಲಾ ಸಮಸ್ಯೆ ಆಗುತ್ತಿದ್ದರೂ ಇಲ್ಲಿಯೇ ಕೈಗಾರಿಕೆ ನಿರ್ಮಾಣ ಮಾಡುವುದರಿಂದ ಕೆರೆ ಕೈಗಾರಿಕೆ ದ್ರವ್ಯ ತ್ಯಾಜ್ಯ ಸುರಿಯುವ ಜಾಗವಾಗಿ ಬದಲಾಗುವುದರಲ್ಲಿ ಯಾವುದೇ ಅನುಮಾನ ಇಲ್ಲ ಎನ್ನುತ್ತಾರೆ ಸ್ಥಳೀಯರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.