ಆನೇಕಲ್: ಈಚೆಗೆ ಸುರಿದ ಮಳೆಯಿಂದ ಪಟ್ಟಣ ಸಮೀಪದ ಮುತ್ಯಾಲಮಡುವು ಜಲಪಾತ ಮೈದುಂಬಿದೆ. ದಿನ ದಿನಕ್ಕೂ ಜಲಪಾತ ವೀಕ್ಷಿಸಲು ಬರುವ ಪ್ರವಾಸಿಗರ ಸಂಖ್ಯೆ ಗಮನಾರ್ಹವಾಗಿ ಹೆಚ್ಚಿದೆ.
ಬೆಂಗಳೂರು ಸುತ್ತಮುತ್ತಲ ಪ್ರದೇಶಗಳಿಂದ ಸಂಖ್ಯೆಯಲ್ಲಿ ಪ್ರವಾಸಿಗರು ಆಗಮಿಸುತ್ತಿದ್ದಾರೆ. ಮಳೆಗಾಲದ ಆರಂಭಿಕ ದಿನಗಳಲ್ಲಿ ಜಲಪಾತ ನೋಡುವುದೇ ಒಂದು ವಿಶೇಷ ಆಕರ್ಷಣೆ. ಈ ಕಾರಣದಿಂದಾಗಿ ಹೆಚ್ಚಿನ ಸಂಖ್ಯೆಯಲ್ಲಿ ಯುವಕರು ಜಲಪಾತ ನೋಡಲು ಬರುತ್ತಿದ್ದಾರೆ. ಮುತ್ಯಾಲಮಡುವು ಜಲಪಾತದಿಂದ ಸುಮಾರು ಒಂದೂವರೆ ಕಿಲೋಮೀಟರ್ ಚಾರಣ ಮಾಡಿದರೆ ಶಂಕು ಚಕ್ರ ಜಲಪಾತ ತಲುಪಬಹುದು. ಈ ಎರಡು ಜಲಪಾತಗಳನ್ನು ನೋಡಲು ಯುವಕರು ಸಮೂಹಗಳಲ್ಲಿ ಆಗಮಿಸುತ್ತಿದ್ದಾರೆ.
ಪ್ರವಾಸಿ ಸ್ಥಳದ ಅಭಿವೃದ್ಧಿಗೆ ಹೆಚ್ಚಿನ ಗಮನ ಕೊಡುವ ಅಗತ್ಯವಿದೆ. ಈ ನಿಟ್ಟಿನಲ್ಲಿ ಪ್ರವಾಸೋದ್ಯಮ ಇಲಾಖೆಯು ಹೆಚ್ಚಿನ ಆದ್ಯತೆ ನೀಡಬೇಕಾಗಿದೆ. ಸ್ವಚ್ಛತಾ ಸೌಲಭ್ಯ, ಮಕ್ಕಳ ಆಟದ ಸಾಧನ, ಮುತ್ಯಾಲಮಡುವಿನಿಂದ ಶಂಕು ಚಕ್ರ ಜಲಪಾತಕ್ಕೆ ಸುರಕ್ಷಿತ ಚಾರಣ ಮಾರ್ಗ ಮತ್ತು ಭದ್ರತೆಗಾಗಿ ಪೊಲೀಸ್ ಚೌಕಿಯನ್ನು ಒಳಗೊಂಡ ಅಗತ್ಯ ಸೌಕರ್ಯ ಒದಗಿಸಬೇಕಿದೆ.
ಮುತ್ಯಾಲಮಡುವು ಜಲಪಾತ ಸುಂದರವಾದ ಹಸಿರು ವಾತಾವರಣದಲ್ಲಿ ಅಮೃತಧಾರೆಯಂತೆ ಹರಿಯುತ್ತಿದೆ. ಈ ಜಲಪಾತದ ಅಭಿವೃದ್ಧಿಗೆ ಆದ್ಯತೆ ನೀಡುವುದು ಅತ್ಯಗತ್ಯ. ಕೇವಲ ಮಳೆಗಾಲದಲ್ಲಿ ಮಾತ್ರವಲ್ಲ, ಎಲ್ಲ ಋತುಗಳಲ್ಲಿಯೂ ನೀರು ಹರಿಯುವಂತೆ ಮಾಡಲು ಯೋಜನೆ ರೂಪಿಸಬೇಕು ಎಂದು ಮುತ್ಯಾಲಮಡುವಿಗೆ ಭೇಟಿ ನೀಡಿದ ನದೀಂ ಪ್ರಜಾವಾಣಿಗೆ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.