
ದೊಡ್ಡಬಳ್ಳಾಪುರ: ದೇಶಕ್ಕೆ ರೈತರ ಕೊಡುಗೆ ಅಪಾರ. ರೈತರಿಗೆ ಸರ್ಕಾರ ಯೋಜನೆಗಳು ಹಾಗೂ ಸೌಲಭ್ಯಗಳ ಬಗ್ಗೆ ಅರಿವು ಮೂಡಿಸುವಲ್ಲಿ ಸ್ಥಳೀಯ ಆಡಳಿತ ಹೆಚ್ಚಿನ ಗಮನ ಹರಿಸಬೇಕು ಎಂದು ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮಿ ಚೌಧರಿ ಹೇಳಿದರು.
ದೊಡ್ಡಬಳ್ಳಾಪುರ ತಾಲ್ಲೂಕಿನ ಮೆಳೆಕೋಟೆಯ ರಾಜೀವ್ ಗಾಂಧಿ ಭವನದಲ್ಲಿ ಸ್ಫೂರ್ತಿ ಕನ್ನಡ ಕಲಾ ಟ್ರಸ್ಟ್ ವತಿಯಿಂದ ಮಂಗಳವಾರ ನಡೆದ ರೈತ ದಿನಾಚರಣೆಯಲ್ಲಿ ಮಾತನಾಡಿದರು.
ಕೊವಿಡ್ ಸೇರಿದಂತೆ ದೇಶದ ಸಂಕಷ್ಟ ಪರಿಸ್ಥಿತಿಯಲ್ಲಿಯೂ, ತಮ್ಮ ಪಾಡಿಗೆ ತಾವು ಕಾಯಕ ಮಾಡುವ ಮೂಲಕ ದೇಶಕ್ಕೆ ಅನ್ನ ನೀಡಿದ ಅನ್ನದಾತರನ್ನು ಸ್ಮರಿಸಬೇಕಿದೆ. ಆದರೆ ರೈತರಿಗೆ ಎದುರಾಗಿರುವ ಹಲವಾರು ಸಮಸ್ಯೆಗಳಿಂದಾಗಿ ಕೃಷಿ ಸಂಕಷ್ಟಕ್ಕೀಡಾಗಿದೆ. ಈ ದಿಸೆಯಲ್ಲಿ ತಾಲ್ಲೂಕು ಹಾಗೂ ಜಿಲ್ಲಾಡಳಿತದಿಂದ ರೈತರ ಸಮಸ್ಯೆಗಳಿಗೆ ಸ್ಪಂದಿಸುವ ಕೆಲಸವಾಗಬೇಕಿದೆ ಎಂದರು.
ಕೃಷಿಯಲ್ಲಿ ರೈತ ಮಹಿಳೆಯರ ಪಾತ್ರ ಮಹತ್ವದ್ದಾಗಿದೆ. ಆದರೆ ಮಹಿಳೆಯರಿಗೆ ಸಮಾಜದಲ್ಲಿ ಸಿಗಬೇಕಾದ ಪ್ರಾತಿನಿಧ್ಯ ಸಿಗುತ್ತಿಲ್ಲ. ಮಹಿಳೆಯರಿಗೆ ಆಸ್ತಿಯಲ್ಲಿ ಪಾಲು ನೀಡುವುದು, ಮಹಿಳೆಯರ ಸ್ವಾವಲಂಬನೆಗೆ ಪೂರಕವಾಗಲಿದೆ. ಮಹಿಳೆಯರ ಆಸ್ತಿ ನೋಂದಣಿ ಶುಲ್ಕವನ್ನು ಕಡಿಮೆ ಮಾಡುವ ಕುರಿತು ಕಂದಾಯ ಸಚಿವರಿಗೆ ಪತ್ರ ಬರೆಯಲಾಗುವುದು ಎಂದರು.
ರೈತ ಮಹಿಳೆಯರು ಹಾಗೂ ಗ್ರಾಮಸ್ಥರೊಂದಿಗೆ ಸಂವಾದ ನಡೆಸಿದ ವೇಳೆ, ಗ್ರಾಮಗಳಲ್ಲಿ ರಸ್ತೆ, ನೀರು, ಚರಂಡಿ ಮೊದಲಾದ ಸಮಸ್ಯೆಗಳನ್ನು ಆಲಿಸಿದ ಅವರು, ಸೂಕ್ತ ಕ್ರಮ ಕೈಗೊಳ್ಳುವಂತೆ ಸೂಚಿಸಿದರು. ಕೃಷಿ ಸಖಿ ಬಗ್ಗೆ ಹೆಚ್ಚಿನ ಪ್ರಚಾರವಾಗಬೇಕಿದೆ. ಇಂದು ರೈತ ಮಹಿಳೆಯರಿಗಿಂಗ ಪುರುಷರೇ ಹೆಚ್ಚಿದ್ದಾರೆ. ಹಾಗಾಗಿ ಮಹಿಳೆಯರ ವಿಶೆಷ ಸಭೆ ನಡೆಸಿ ನಮಗೆ ವರದಿ ನೀಡಿ ಎಂದು ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಿಗೆ ಸೂಚಿಸಿದರು.
ಕಲಾವಿದ, ನಟ ಸುನೀಲ್ ಶಶಿಧರ್ ಮಾತನಾಡಿ, ಕೃಷಿ ಸಂಕಷ್ಟದಿಂದಾಗಿ ರೈತರು ಆತ್ಮಹತ್ಯೆ ದಾರಿ ಹಿಡಿದಿದ್ದಾರೆ. ಈ ನಿಟ್ಟಿನಲ್ಲಿ ಸರ್ಕಾರ ರೈತರ ನೆರವಿಗೆ ಧಾವಿಸಬೇಕು. ಬ್ಯಾಂಕ್‌ಗಳಲ್ಲಿ ರೈತರಿಗೆ ಸಾಲ ನೀಡಲು ಹಿಂದೇಟು ಹಾಕುತ್ತಿದ್ದಾರೆ. ರೈತರು ತಮ್ಮ ಉತ್ಪನ್ನಗಳಿಗೆ ಬೆಲೆ ನಿಗದಿ ಮಾಡಲು ಆಗುತ್ತಿಲ್ಲ. ಹೀಗಾಗಿ ಬೆಂಬಲ ಬೆಲೆ ನೀಡುವುದರೊಂದಿಗೆ ದಾಸ್ತಾನು ಮಳಿಗೆಗಳನ್ನು ಸ್ಥಾಪಿಸಬೇಕಿದೆ ಎಂದರು.
ವಿವಿಧ ಕ್ಷೇತ್ರದ ಗಣ್ಯರನ್ನು ಸನ್ಮಾನಿಸಲಾಯಿತು. ಉಪವಿಭಾಗಾಧಿಕಾರಿ ಎನ್.ದುರ್ಗಾಶ್ರೀ, ತಹಶೀಲ್ದಾರ್ ಡಾ.ಮಲ್ಲಪ್ಪ ಕೆ.ಯರಗೋಳ, ಸ್ಫೂರ್ತಿ ಕನ್ನಡ ಕಲಾ ಟ್ರಸ್ಟ್ ಸ್ಥಾಪಕ ಅಧ್ಯಕ್ಷ ಎಂ.ಸಿ.ರಾಜಣ್ಣ, ಎಂ.ಜಿ.ಆರ್.ಅರಸ್, ರತ್ನ ಹಾಲಪ್ಪ ಗೌಡ, ಶ್ರೀನಿವಾಸ್, ವ.ಚ.ಚನ್ನೇಗೌಡ, ಲತಾ.ಎ.ಆರ್, ಡಾ.ಶಾರದಾ, ಡಿ.ಬಿ.ಗಂಗಬೈರಪ್ಪ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.