ADVERTISEMENT

ಚನ್ನಪಟ್ಟಣ | 5 ವರ್ಷದಿಂದ ನನೆಗುದಿಗೆ ಬಿದ್ದ ರೈಲ್ವೆ ಮೇಲ್ಸೇತುವೆ ‌

ಇತಿಹಾಸ ಪ್ರಸಿದ್ಧ ದೇವರ ಹೊಸಹಳ್ಳಿ, ಕಣ್ವ ಜಲಾಶಯಗಳಿಗೆ ಸಂಪರ್ಕ ಕಲಿಸುವ ರಸ್ತೆ

ಎಚ್.ಎಂ.ರಮೇಶ್
Published 2 ಡಿಸೆಂಬರ್ 2019, 9:28 IST
Last Updated 2 ಡಿಸೆಂಬರ್ 2019, 9:28 IST
ಚನ್ನಪಟ್ಟಣದ ರೈಲ್ವೆ ಹಳಿ ಮೇಲೆ ಮೇಲ್ಸೇತುವೆ ನಿರ್ಮಾಣ ಪೂರ್ಣವಾಗಿರುವುದು
ಚನ್ನಪಟ್ಟಣದ ರೈಲ್ವೆ ಹಳಿ ಮೇಲೆ ಮೇಲ್ಸೇತುವೆ ನಿರ್ಮಾಣ ಪೂರ್ಣವಾಗಿರುವುದು   

ಚನ್ನಪಟ್ಟಣ: ಎಲೇಕೇರಿ ಬಳಿ ನಿರ್ಮಾಣಗೊಳ್ಳುತ್ತಿರುವ ರೈಲ್ವೆ ಮೇಲ್ಸೇತುವೆ ಕಾಮಗಾರಿ ಕಳೆದ ಐದು ವರ್ಷಗಳಿಂದ ನನೆಗುದಿಗೆ ಬಿದ್ದಿದೆ. ಸಾರ್ವಜನಿಕರು ರೈಲ್ವೆ ಹಳಿ ದಾಟಲು ಗಂಟೆಗಟ್ಟಲೆಕಾಯುವ ಪರಿಸ್ಥಿತಿ ಇದೆ. ‌ಸಾರ್ವಜನಿಕರ ಪರಿತಾಪ ಗಮನಿಸಿ ಸಂಸದರ ಅನುದಾನ ₹ 11 ಕೋಟಿ ವೆಚ್ಚದಲ್ಲಿ ಮೇಲ್ಸೇತುವೆ ನಿರ್ಮಾಣ ಮಾಡಲು 2014ರಲ್ಲಿ ₹ 3 ಕೋಟಿ ಅನುದಾನ ಬಿಡುಗಡೆಯಾಗಿ ಕಾಮಗಾರಿ ಕೂಡ ಆರಂಭಿಸಲಾಗಿತ್ತು.

ರೈಲ್ವೆ ಹಳಿ ವ್ಯಾಪ್ತಿಯಲ್ಲಿ ಮೇಲ್ಸೇತುವೆ ನಿರ್ಮಾಣವೂ ಆಗಿತ್ತು. ಆದರೆ, ಅನುದಾನ ಕೊರತೆ, ಭೂಸ್ವಾಧೀನ ಪ್ರಕ್ರಿಯೆ ವಿಳಂಬ ಸೇರಿದಂತೆ ಹಲವು ಕಾರಣಗಳಿಂದ ಐದು ವರ್ಷಗಳಿಂದ ಕಾಮಗಾರಿ ಮುಂದುವರಿಯದೆ ಅರ್ಧಕ್ಕೆ ನಿಂತಿದೆ. ಪಟ್ಟಣದಿಂದ ಎಲೇಕೇರಿ ಮಾರ್ಗವಾಗಿ ರಾಂಪುರ, ಇತಿಹಾಸ ಪ್ರಸಿದ್ಧ ದೇವರ ಹೊಸಹಳ್ಳಿ, ಕಣ್ವ ಜಲಾಶಯಗಳಿಗೆ ಸಂಪರ್ಕ ಕಲಿಸುವ ರಸ್ತೆ ಇದಾಗಿದೆ. ರೈಲುಗಳು ಸಂಚರಿಸುವ ಸಂದರ್ಭದಲ್ಲಿ ಗೇಟ್ ಹಾಕುವ ಕಾರಣ ಸಾರ್ವಜನಿಕರ ಸಂಚಾರಕ್ಕೆ ಅಡಚಣೆ ಉಂಟಾಗುತ್ತಿತ್ತು. ಅದರಲ್ಲೂ ದೇವರ ಹೊಸಹಳ್ಳಿ ಸಂಜೀವರಾಯಸ್ವಾಮಿ ಜಾತ್ರಾ ಮಹೋತ್ಸವದ ಸಂದರ್ಭದಲ್ಲಿ ಭಕ್ತರು ಗಂಟೆಗಟ್ಟಲೇ ಕಾಯುವಂತಾಗುತ್ತಿತ್ತು.

ಇದೆಲ್ಲ ಗಮನಿಸಿದ ಸ್ಥಳೀಯರು ಮೇಲ್ಸೇತುವೆ ನಿರ್ಮಾಣಕ್ಕಾಗಿ ಸ್ಥಳೀಯ ನಗರಸಭೆ, ಕೇಂದ್ರ ಸರ್ಕಾರ, ರಾಜ್ಯ ಸರ್ಕಾರ, ಸಂಸದರು, ಶಾಸಕರನ್ನು ಒತ್ತಾಯಿಸುತ್ತಲೇ ಬಂದಿದ್ದರು. ಇದೆಲ್ಲದರ ಪರಿಣಾಮ 2014ರಲ್ಲಿ ಮೇಲ್ಸೇತುವೆ ನಿರ್ಮಾಣಕ್ಕೆ ಮಂಜೂರಾತಿ ದೊರೆತು ಕಾಮಗಾರಿ ಆರಂಭಿಸಲಾಗಿತ್ತು. ಮೇಲ್ಸೇತುವೆ ನಿರ್ಮಾಣಕ್ಕೆ ಮಂಜೂರಾತಿ ದೊರೆತು ಕಾಮಗಾರಿ ಆರಂಭವಾದಾಗ ಸ್ಥಳೀಯರು ಸಂತಸ ಪಟ್ಟಿದ್ದರು. ಆದರೆ, ಆ ಸಂತೋಷ ಬಹಳ ದಿನ ಉಳಿಯಲಿಲ್ಲ. ಅನುದಾನ ಕೊರತೆಯಿಂದ ಕಾಮಗಾರಿ ನನೆಗುದಿಗೆ ಬಿದ್ದಿದೆ.

ADVERTISEMENT

ಈ ರಸ್ತೆಯಲ್ಲಿ ಇತಿಹಾಸ ಪ್ರಸಿದ್ಧ ದೇವರಹೊಸಹಳ್ಳಿ ಗ್ರಾಮದ ಸಂಜೀವರಾಯಸ್ವಾಮಿ ದೇಗುಲ ನೋಡಲು, ಪೂಜೆ ಸಲ್ಲಿಸಲು ಪ್ರತಿದಿನ ನೂರಾರು ಭಕ್ತರು ಬರುತ್ತಾರೆ. ಹಾಗೆಯೇ ಪ್ರಸಿದ್ಧ ಕಣ್ವ ಜಲಾಶಯ ವೀಕ್ಷಣೆಗೂ ಬಹುತೇಕ ಪ್ರವಾಸಿಗರು ಇದೇ ರಸ್ತೆ ಅವಲಂಬಿಸಿದ್ದಾರೆ. ಈ ರಸ್ತೆಯಲ್ಲಿ ಬಂದಾಗ ಬಹುತೇಕ ರೈಲು ಗೇಟ್ ಮುಚ್ಚಿರುತ್ತದೆ. ವಿಧಿ ಇಲ್ಲದೆ ಕಾಯುವ ಸ್ಥಿತಿ ಇದೆ. ರೈಲುಗಳ ಕ್ರಾಸಿಂಗ್ ಸಮಯದಲ್ಲಿ ಗಂಟೆಗಟ್ಟಲೇ ಕಾಯಬೇಕು. ಈ ರಸ್ತೆ ಬಹಳ ಕಿರಿದಾಗಿರುವುದರಿಂದ ವಾಹನಗಳು ಕ್ಲಿಯರ್ ಆಗಲು ಮತ್ತೆ ಅರ್ಧ ಗಂಟೆಗೂ ಹೆಚ್ಚು ಸಮಯದ ಅವಶ್ಯವಿದೆ ಎಂದು ಎಲೇಕೇರಿ ಗ್ರಾಮದ ನಿರಂಜನ್, ಪ್ರದೀಪ್, ದೇವರಾಜು ಇಲ್ಲಿನ ಪರಿಸ್ಥಿತಿ ವಿವರಿಸಿದರು.

ಈಚೆಗೆ ಮೈಸೂರು ಬೆಂಗಳೂರು ನಡುವೆ ಸಂಚರಿಸುವ ರೈಲುಗಳ ಸಂಖ್ಯೆ ಗಣನೀಯ ಪ್ರಮಾಣದಲ್ಲಿ ಹೆಚ್ಚಳಗೊಂಡಿವೆ. ಪ್ರತಿದಿನ 45 ರೈಲುಗಳು ಸಂಚರಿಸುವುದರಿಂದ ಗಂಟೆಗೊಮ್ಮೆ ರೈಲ್ವೆ ಗೇಟ್ ಮುಚ್ಚುವುದರಿಂದ ಬಹಳ ತೊಂದರೆ ಇದೆ. ಗ್ರಾಮಸ್ಥರು ಪಟ್ಟಣಕ್ಕೆ ಬರಲು ಇದೊಂದೆ ರಸ್ತೆ ಇರುವುದರಿಂದ ಸುಖಾಸುಮ್ಮನೆ ಕಾಯುವಂತಾಗಿದೆ. ಇಲ್ಲೊಂದು ರೈಲ್ವೆ ಮೇಲ್ಸೇತುವೆ ನಿರ್ಮಾಣದ ಅಗತ್ಯ ಇರುವುದರಿಂದ ಈ ಬಗ್ಗೆ ಸಂಬಂಧಿಸಿದವರು ಗಮನ ಹರಿಸಬೇಕೆಂದು ರಾಂಪುರ ಗ್ರಾಮದ ಸಾಹಿತಿಗಳಾದ ವಿಜಯ್ ರಾಂಪುರ, ಶ್ರೀನಿವಾಸ್ ರಾಂಪುರ, ಮುಖಂಡರಾದ ಧರಣೀಶ್, ಆರ್.ಎಸ್.ಶಶಿಧರ್ ಅವರ ಒತ್ತಾಯ.

ಪಟ್ಟಣದ ಶಾಲೆಗೆ ಬರುವ ವಿದ್ಯಾರ್ಥಿಗಳು, ಕಾರ್ಮಿಕರು, ನೌಕರರು, ಮಾರುಕಟ್ಟೆಗೆ ಹೋಗುವ ರೈತರು ರೈಲ್ವೆ ಗೇಟ್ ಮುಚ್ಚುವುದರಿಂದ ಪರಿತಪಿಸುವಂತಾಗಿದೆ. ವಿದ್ಯಾರ್ಥಿಗಳನ್ನು ಕರೆದೊಯ್ಯುವ ಶಾಲಾ ವಾಹನಗಳು ಸಾಲಾಗಿ ನಿಲ್ಲುತ್ತವೆ. ಇದರಿಂದ ಶಾಲೆಗೆ ಹೋಗುವುದೂ ವಿಳಂಬವಾಗುತ್ತಿದೆ. ಹಾಗೆಯೇ ಗಂಭೀರ ಸಂದರ್ಭದಲ್ಲಿ ಆ್ಯಂಬುಲೆನ್ಸ್‌ಗಳು ಕೂಡ ನಿಲ್ಲುವಂತಾಗುತ್ತದೆ. ಈ ಭಾಗದ ಗ್ರಾಮೀಣ ಪ್ರದೇಶದ ಜನರು ಅನಾರೋಗ್ಯದಿಂದ ಗಂಭೀರ ಸ್ಥಿತಿ ತಲುಪಿದಾಗ ಆ್ಯಂಬುಲೆನ್ಸ್‌ನಲ್ಲಿ ಶೀಘ್ರ ಕರೆದೊಯ್ಯುವ ಅವಕಾಶವೂ ಇಲ್ಲದಂತಾಗಿದೆ. ಎಷ್ಟೋ ವೇಳೆ ಅಂಥವರನ್ನು ಆಸ್ಪತ್ರೆಗೆ ಸೂಕ್ತ ಸಮಯುದಲ್ಲಿ ತಲುಪಿಸಲಾಗದೆ ಸಾವನ್ನಪ್ಪಿರುವ ಪ್ರಕರಣಗಳೂ ಇವೆ ಎಂದು ಮುಖಂಡರಾದ ಎಲೆಕೇರಿ ರವೀಶ್, ಟೆಂಪೊ ರಾಜೇಶ್, ಗೋಪಾಲ್ ಅವರ ಅಭಿಪ್ರಾಯ.

ಭೂಮಿಸ್ವಾಧೀನ ಪ್ರಕ್ರಿಯೆ ವಿಳಂಬ: ‘ರೈಲ್ವೆ ಮೇಲ್ಸೇತುವೆ ಕಾಮಗಾರಿ ನನೆಗುದಿಗೆ ಬೀಳಲು ಭೂಸ್ವಾಧೀನ ಪ್ರಕ್ರಿಯೆ ವಿಳಂಬ ಕಾರಣ ಎಂದು ನಗರಸಭೆ ಅಧಿಕಾರಿಗಳು ಹೇಳುತ್ತಾರೆ. ಸೇತುವೆ ಮುಗಿದಿದ್ದರೂ ಮುಂದಿನ ರಸ್ತೆ ಮಾಡಲು ಸಾಧ್ಯವಾಗುತ್ತಿಲ್ಲ. ರಸ್ತೆ ಬರುವ ಜಾಗದಲ್ಲಿ ರೈತರ ಜಮೀನು, ನಿವೇಶನಗಳಿದ್ದು, ಕೆಲ ರೈತರು ನೀಡಲು ಒಪ್ಪುತ್ತಿಲ್ಲ. ಇನ್ನು ಕೆಲ ರೈತರು ಪರಿಹಾರ ಕಡಿಮೆ ಎಂದು ಹಿಂಜರಿಯುತ್ತಿದ್ದಾರೆ. ಬಲವಂತವಾಗಿ ಭೂಸ್ವಾಧೀನಕ್ಕೆ ಹೊರಾಟಾಗ ಕೆಲ ರೈತರು ನ್ಯಾಯಾಲಯದಲ್ಲಿ ದಾವೆ ಹೂಡಿದ್ದಾರೆ. ಪ್ರಕರಣ ಇತ್ಯರ್ಥವಾಗಿಲ್ಲ. ಈ ಎಲ್ಲ ಕಾರಣಗಳಿಂದ ಕಾಮಗಾರಿ ವಿಳಂಬವಾಗುತ್ತಿದೆ’ ಎಂದು ಅಧಿಕಾರಿಗಳು ತಿಳಿಸುತ್ತಾರೆ.

ರೈಲ್ವೆ ಮೇಲ್ಸೇತುವೆಗೆ ಆಗ್ರಹಿಸಿ ರೈಲ್ವೆ ಹಿತರಕ್ಷಣಾ ಸಮಿತಿ, ಕನ್ನಡ ಪರ ಸಂಘಟನೆಗಳು, ನೇಗಿಲಯೋಗಿ ಸಾಂಸ್ಕೃತಿಕ ಟ್ರಸ್ಟ್ ಸೇರಿದಂತೆ ಹಲವರು ಶಾಂತಿಯುತ ಪ್ರತಿಭಟನೆ ನಡೆಸಿ, ಶೀಘ್ರ ಕ್ರಮಕ್ಕೆ ಒತ್ತಾಯಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.