ಹೊಸಕೋಟೆ ನಗರದ ನಗರಸಭೆ ಸಭಾಂಗಣದಲ್ಲಿ ರಾಷ್ಟ್ರೀಯ ಡೆಂಗಿ ದಿನಾಚಣೆಯ ಪ್ರಯುಕ್ತ ಬಿತ್ತಿಪತ್ರ ಪ್ರದರ್ಶಿಸಿದ ಅಧಿಕಾರಿಗಳು ಮತ್ತು ಸಿಬ್ಬಂದಿ
ಹೊಸಕೋಟೆ: ಡೆಂಗಿ ನಿಯಂತ್ರಣಕ್ಕೆ ಆರೋಗ್ಯ ಇಲಾಖೆ ಹಲವು ಕಟ್ಟುನಿಟ್ಟಿನ ಕ್ರಮ ಕೈಗೊಂಡಿದೆ. ಅದರಂತೆ ಜನಸಾಮಾನ್ಯರು ಆರೋಗ್ಯ ಇಲಾಖೆ ಕಾಲಕಾಲಕ್ಕೆ ನೀಡುವ ಸೂಚನೆಯನ್ನು ತಪ್ಪದೆ ಪಾಲಿಸಿದರೆ ತಾಲ್ಲೂಕನ್ನು ಡೆಂಗಿ ಮುಕ್ತಗೊಳಿಸಬಹುದು ಎಂದು ತಾಲ್ಲೂಕು ಆರೋಗ್ಯ ನಿರೀಕ್ಷಣಾಧಿಕಾರಿ ಶಿವಕುಮಾರ್ ತಿಳಿಸಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ತಾಲ್ಲೂಕು ಆರೋಗ್ಯ ಅಧಿಕಾರಿಗಳ ಕಚೇರಿ ಹಾಗೂ ನಗರಸಭೆ ಸಹಯೋಗದಲ್ಲಿ ನಗರಸಭೆ ಸಭಾಂಗಣದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ರಾಷ್ಟ್ರೀಯ ಡೆಂಗಿ ದಿನಾಚರಣೆ ಪ್ರಯುಕ್ತ ಡೆಂಗಿ, ಚಿಕೂನ್‌ಗುನ್ಯ ಬಗ್ಗೆ ಜಾಗೃತಿ ಜಾಥಾದಲ್ಲಿ ಅವರು ಮಾತನಾಡಿದರು.
ಹಗಲು ಹೊತ್ತಿನಲ್ಲಿ ವಿಶ್ರಾಂತಿ ಪಡೆಯುವವರು ಅದರಲ್ಲೂ ವೃದ್ಧರು, ಗರ್ಭಿಣಿಯರು ಹಾಗೂ ಮಕ್ಕಳು ಸೊಳ್ಳೆ ಪರದೆ ಬಳಸಬೇಕು. ಸೊಳ್ಳೆ ಕಚ್ಚದಂತೆ ಮೈತುಂಬ ಬಟ್ಟೆ ಧರಿಸಿ ಸೊಳ್ಳೆ ಪರದೆ ಸೊಳ್ಳೆಬತ್ತಿ ಮುಲಾಮು ಉಪಯೋಗಿಸಬೇಕು ಎಂದರು.
ಸರ್ಕಾರಿ ಮತ್ತು ಖಾಸಗಿ ಕಚೇರಿಗೆ ಒಳ ಮತ್ತು ಹೊರಾಂಗಣದಲ್ಲಿ ಈಡಿಸ್ ಈಜಿಪ್ಟ್ ಸೊಳ್ಳೆ ಉತ್ಪತ್ತಿ ನಿಯಂತ್ರಣಕ್ಕೆ ಅಗತ್ಯ ಕ್ರಮ ಕೈಗೊಳ್ಳಬೇಕು. ಈಡಿಸ್ ಸೊಳ್ಳೆ ಉತ್ಪತ್ತಿ ತಡೆಗೆ ಮನೆಯಲ್ಲಿನ ನೀರಿನ ತೊಟ್ಟಿ, ಬ್ಯಾರೆಲ್‌ಗಳಲ್ಲಿ ನೀರನ್ನು ವಾರಕ್ಕೊಮ್ಮೆ ಖಾಲಿ ಮಾಡಿ ಸ್ವಚ್ಛಗೊಳಿಸಬೇಕು. ಫ್ರಿಡ್ಜ್ ಹಿಂಭಾಗ, ಹೂಕೊಂಡ ಮತ್ತು ಹೂಕುಂಡದ ಕೆಳಗಿನ ತಟ್ಟೆಗಳಲ್ಲಿ ಶೇಖರಣೆಯಾಗುವ ನೀರನ್ನು ನಿಯಮಿತವಾಗಿ ಖಾಲಿ ಮಾಡಬೇಕು. ಮನೆಯ ಸುತ್ತಮುತ್ತ ನೀರು ನಿಲ್ಲದಂತೆ ಎಚ್ಚರವಹಿಸಬೇಕು. ಘನತ್ಯಾಜ್ಯವನ್ನು ವಿಲೇವಾರಿ ಮಾಡಬೇಕು. ಪರಿಸರವನ್ನು ಸ್ವಚ್ಛವಾಗಿರಬೇಕು ಎಂದು ಸಲಹೆ ನೀಡಿದರು.
ಡೆಂಗಿ ಲಕ್ಷಣಗಳಾದ ತೀವ್ರ ಜ್ವರ, ವಿಪರೀತ ತಲೆನೋವು, ಕಣ್ಣಿನ ಹಿಂಭಾಗದಲ್ಲಿ ನೋವು, ಮಾಂಸ ಕಂಡ ಮತ್ತು ಕೀಲುಗಳಲ್ಲಿ ವಿಪರೀತ ನೋವು, ವಾಕರಿಕೆ-ವಾಂತಿ, ಕಂಡು ಬಂದಲ್ಲಿ ಹತ್ತಿರದ ಸರ್ಕಾರಿ ಆಸ್ಪತ್ರೆಗೆ ಭೇಟಿ ನೀಡಿ ವೈದ್ಯರ ಸಲಹೆ ಪಡೆದು, ರಕ್ತ ಪರೀಕ್ಷೆ ಮಾಡಿಸುವುದರ ಜೊತೆಗೆ ಸೂಕ್ತ ಚಿಕಿತ್ಸೆ ಪಡೆಯಲು ತಿಳಿಸಿದರು.
ಈಗಾಗಲೇ ಆರೋಗ್ಯ ಇಲಾಖೆಯಿಂದ ದಿನನಿತ್ಯ ಕಸ ಸಂಗ್ರಹ ವಾಹನಗಳ ಮೂಲಕ ಜಾಗೃತಿ ಮೂಡಿಸಲಾಗುತ್ತಿದೆ. ಜನಸಾಮಾನ್ಯರು ಮಾಹಿತಿಯನ್ನು ಪಡೆದು ನಗರಸಭೆ ಹಾಗೂ ಆರೋಗ್ಯ ಇಲಾಖೆಯೊಡನೆ ಸಹಕರಿಸಿ ಎಂದು ಮನವಿ ಮಾಡಿದರು.
ನಗರ ಸಭೆಯ ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಬಾಲಚಂದ್ರ, ಅಂಜಿನಪ್ಪ, ನಸ್ರೀನ್ ತಾಜ್, ಆರೋಗ್ಯ ಇಲಾಖೆಯ ತಾಲ್ಲೂಕು ಆರೋಗ್ಯ ಶಿಕ್ಷಣಾಧಿಕಾರಿ ರವಿಕುಮಾರ್, ನಗರ ಪ್ರಾಥಮಿಕ ಆರೋಗ್ಯ ಕೇಂದ್ರದ ಆರೋಗ್ಯ ನಿರೀಕ್ಷಣಾಧಿಕಾರಿ ಪ್ರವೀಣ್ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.