
ದೊಡ್ಡಬಳ್ಳಾಪುರ: ಪ್ರಜಾಪ್ರಭುತ್ವ ಆಡಳಿತಕ್ಕೆ ಅರ್ಥ ಬರಲು ಹಾಗೂ ಪ್ರಜಾಪ್ರಭುತ್ವದ ಆಶಯ ಈಡೇರಲು ಶೇ 100 ರಷ್ಟು ಮತದಾನ ನಡೆಯಬೇಕು. ಈ ಬಗ್ಗೆ ವಿದ್ಯಾವಂತ ಯುವ ಮತದಾರರು ಜಾಗೃತಿ ಮೂಡಿಸುವ ಹೊಣೆಗಾರಿಕೆ ಇದೆ ಎಂದು ಪ್ರಧಾನ ಹಿರಿಯ ಸಿವಿಲ್ ನ್ಯಾಯಾಧೀಶೆ ಶಿಲ್ಪ ಹೇಳಿದರು.
ನಗರದ ಡಾ.ರಾಜ್‌ಕುಮಾರ್ ಕಲಾ ಮಂದಿರದಲ್ಲಿ ಭಾನುವಾರ ನಡೆದ 16ನೇ ರಾಷ್ಟ್ರೀಯ ಮತದಾರರ ದಿನಾಚರಣೆ ಅಂಗವಾಗಿ ತಾಲ್ಲೂಕು ಸ್ವೀಪ್ ಸಮಿತಿಯಿಂದ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದರು.
‘18 ವರ್ಷ ತುಂಬಿದ ಎಲ್ಲರೂ ಕಡ್ಡಾಯವಾಗಿ ತಮ್ಮ ಹೆಸರನ್ನು ಮತದಾರರ ಪಟ್ಟಿಯಲ್ಲಿ ನೋಂದಾಯಿಸಿಕೊಳ್ಳಬೇಕು. ಮತ ಚಲಾಯಿಸಿದರಷ್ಟೇ ಸೌಲಭ್ಯಗಳನ್ನು ಕೇಳುವ, ಜನಪ್ರತಿನಿಧಿಗಳನ್ನು ಟೀಕಿಸುವ ನೈತಿಕ ಹಕ್ಕು ನಮ್ಮದಾಗಿರುತ್ತದೆ. ಯಾವುದೇ ರಾಜಕೀಯ ವ್ಯಕ್ತಿ ತಮ್ಮ ಮನೆಯಿಂದ ಹಣ ತಂದು ಮತದಾರರಿಗೆ ಹಂಚುವುದಿಲ್ಲ. ಜನರ ತೆರಿಗೆಯಲ್ಲಿನ ಹಣದಿಂದಲೇ ಸೀರೆ, ಹಣ ಹಂಚಲು ಸಾಧ್ಯ. ಇವುಗಳಿಗೆ ಮನಸೂತು ಮತ ಚಲಾಯಿಸಿದರೆ ನಮ್ಮ ಹಕ್ಕುಗಳನ್ನು ಕೇಳಿ ಪಡೆಯುವ ಅರ್ಹತೆ,ಜನಪ್ರತಿನಿಧಿಗಳನ್ನು ಪ್ರಶ್ನಿಸುವ ದ್ವನಿಯನ್ನೇ ಕಳೆದುಕೊಳ್ಳುತ್ತೇವೆ’ ಎಂದರು.
ಪೊಕ್ಸೋ ಕಾಯ್ದೆ ಹಣ್ಣು ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ಸೇರಿದಂತೆ ಇತರೆ ಕಿರುಕುಳ ತಪ್ಪಿಸಲು ಸಹಕಾರಿಯಾಗಿದೆ. ಈ ಕಾಯ್ದೆಯಡಿ ದೂರು ದಾಖಲಾದಾಗ ಸಂತ್ರಸ್ತೆಗೆ ಯಾವುದೇ ರೀತಿಯಲ್ಲೂ ತೊಂದರೆಯಾಗದಂತೆ, ಗುರುತು ಬಹಿರಂಗವಾಗದಂತೆ ಕಾನೂನಿನ ರಕ್ಷಣೆ ಇದೆ. ಈ ಬಗ್ಗೆ ಜಾಗೃತಿ ಮುಖ್ಯ ಎಂದರು.
ಇದೇ ಸಂದರ್ಭದಲ್ಲಿ ಹೊಸ ಮತದಾರರಿಗೆ ಗುರುತಿನ ಚೀಟಿ, ಉತ್ತಮ ಪತಗಟ್ಟೆ ಅಧಿಕಾರಿಗಳಿಗೆ ಪ್ರಮಾಣ ಪತ್ರ ವಿತರಣೆ ಹಾಗೂ ಮತದಾನ ಜಾಗೃತಿ ಕುರಿತು ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಾದ ಕಾಲೇಜು ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.
16ನೇ ರಾಷ್ಟ್ರೀಯ ಮತದಾರರ ದಿನಾಚರಣೆಯಲ್ಲಿ ತಾಲ್ಲೂಕು ವಕೀಲರ ಸಂಘದ ಅಧ್ಯಕ್ಷ ಡಿ.ಎಂ.ರೇಣುಕಾಮೂರ್ತಿ, ಸಂಪನ್ಮೂಲ ವ್ಯಕ್ತಿ ಶ್ರೀನಿವಾಸ್, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಮಂಜುನಾಥ ಹರ್ತಿ, ತಾಲ್ಲೂಕು ಸಹಾಯಕ ಕೃಷಿ ನಿರ್ದೇಶಕ ರಾಘವೇಂದ್ರ,ನಗರಸಭೆ ಪರಿಸರ ಎಂಜಿನಿಯರ್ ಈರಣ್ಣ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.