ADVERTISEMENT

‘ಪಂಚೇಂದ್ರಿಯಗಳ ನಿಯಂತ್ರಣ ಅಗತ್ಯ’

ಶೃಂಗೇರಿ ಜಗದ್ಗುರು ಶಂಕರಾಚಾರ್ಯ ಅಭಿನವ ವಿದ್ಯಾಶಂಕರ ಭಾರತಿ ಮಹಾಸ್ವಾಮೀಜಿ

​ಪ್ರಜಾವಾಣಿ ವಾರ್ತೆ
Published 28 ಫೆಬ್ರುವರಿ 2020, 13:42 IST
Last Updated 28 ಫೆಬ್ರುವರಿ 2020, 13:42 IST
ವಿಜಯಪುರದ ಬ್ರಾಹ್ಮಣ ಸೇವಾ ಟ್ರಸ್ಟ್‌ನಿಂದ ನಿರ್ಮಾಣ ಮಾಡಿರುವ ಗಾಯಿತ್ರಿ ಭವನ, ಕೇಶವ ಭವನದ ಪ್ರಾರಂಭೋತ್ಸವದಲ್ಲಿ ಶೃಂಗೇರಿ ಜದ್ಗುರು ಶಂಕರಾಚಾರ್ಯ ಅಭಿನವ ವಿದ್ಯಾಶಂಕರ ಭಾರತಿ ಮಹಾಸ್ವಾಮಿಜೀ ಮಾತನಾಡಿದರು
ವಿಜಯಪುರದ ಬ್ರಾಹ್ಮಣ ಸೇವಾ ಟ್ರಸ್ಟ್‌ನಿಂದ ನಿರ್ಮಾಣ ಮಾಡಿರುವ ಗಾಯಿತ್ರಿ ಭವನ, ಕೇಶವ ಭವನದ ಪ್ರಾರಂಭೋತ್ಸವದಲ್ಲಿ ಶೃಂಗೇರಿ ಜದ್ಗುರು ಶಂಕರಾಚಾರ್ಯ ಅಭಿನವ ವಿದ್ಯಾಶಂಕರ ಭಾರತಿ ಮಹಾಸ್ವಾಮಿಜೀ ಮಾತನಾಡಿದರು   

ವಿಜಯಪುರ: ‘ಪಂಚೇಂದ್ರಿಯಗಳಿಂದ ಮಾನವ ಜೀವನದಲ್ಲಿ ಸೃಷ್ಟಿಯಾಗುವ ಪಾಪದಿಂದ ಬಿಡುಗಡೆಯಾಗದಿದ್ದರೆ, ಮಾನವನ ಜನ್ಮ ವ್ಯರ್ಥವಾಗುತ್ತದೆ’ ಎಂದು ಶೃಂಗೇರಿ ಜಗದ್ಗುರು ಶಂಕರಾಚಾರ್ಯ ಅಭಿನವ ವಿದ್ಯಾಶಂಕರ ಭಾರತಿ ಮಹಾಸ್ವಾಮೀಜಿ ಹೇಳಿದರು.

ಇಲ್ಲಿನ ಬ್ರಾಹ್ಮಣ ಸೇವಾ ಟ್ರಸ್ಟ್ ವತಿಯಿಂದ ನೂತನವಾಗಿ ನಿರ್ಮಿಸಿರುವ ಗಾಯಿತ್ರಿ ಭವನ ಹಾಗೂ ಕೇಶವ ಭವನ ನೂತನ ಕಲ್ಯಾಣ ಮಂಟಪಗಳ ಪ್ರಾರಂಭೋತ್ಸವದಲ್ಲಿ ಅವರು ಆಶೀರ್ವಚನ ನೀಡಿದರು.

‘ದೇಹದಲ್ಲಿನ ದೈವಿಕ ಶಕ್ತಿಯನ್ನು ಗುರುತಿಸಬೇಕು. ಋಷಿ ಪರಂಪರೆಯಿಂದ ಬಂದ ಜ್ಞಾನವನ್ನು ಅನುಭವಿಸಿ ತಿಳಿಯಬೇಕು. ಬೇರೆ ದೇಶಗಳಲ್ಲಿ ಧರ್ಮಾಚರಣೆ ನಡೆಯುತ್ತಿದ್ದರೆ ಅದರ ಮೂಲ ಭಾರತ ದೇಶ. ಶಂಕರರಿಂದ ಯಾವ ಧರ್ಮವೂ ಸ್ಥಾಪನೆಯಾಗಲಿಲ್ಲ. ಯಾವ ಧರ್ಮವನ್ನೂ ಅವರು ದ್ವೇಷ ಮಾಡಲಿಲ್ಲ. ಇದನ್ನು ಎಲ್ಲರೂ ಅರ್ಥ ಮಾಡಿಕೊಂಡು ಕರ್ಮ ಮಾರ್ಗದಲ್ಲಿ ಮುಕ್ತಿಯತ್ತ ಸಾಗಬೇಕು’ ಎಂದರು.

ADVERTISEMENT

‘ಸಾತ್ವಿಕ ಆಹಾರ ಸೇವನೆ ಮಾಡಬೇಕು. ಶಂಕರಾಚಾರ್ಯರ ಜೀವನದಲ್ಲಿ ತತ್ವಗಳನ್ನು ಅಳವಡಿಸಿಕೊಳ್ಳಬೇಕು. ಎಲ್ಲರಲ್ಲೂ ಒಗ್ಗಟ್ಟು ಮುಖ್ಯ. ಅವರವರ ಪಾತ್ರಗಳು ನಿರ್ವಹಣೆಯಾಗಬೇಕಾಗಿದೆ. ಸನ್ಮಾರ್ಗದಲ್ಲಿ ಸಂಸ್ಕಾರವಂತರಾಗಿ ಬಾಳಬೇಕಾಗಿದೆ’ ಎಂದರು.

ಮುಳಬಾಗಿಲು ತಂಬಿಹಳ್ಳಿಯ ಮಾದವ ತೀರ್ಥ ಮಠದ ಜಗದ್ಗುರು ಮಧ್ವಾಚಾರ್ಯ ಮೂಲಸಂಸ್ಥಾನದ ವಿದ್ಯಾಸಾಗರ ಮಾಧವ ತೀರ್ಥ ಸ್ವಾಮೀಜಿ ಮಾತನಾಡಿ, ‘ಬ್ರಾಹ್ಮಣ ಸಮುದಾಯ ಸರ್ವರಿಗೂ ಆತ್ಮೀಯ, ಪ್ರಿಯವಾಗಿದ್ದು ಸಮಾಜದೊಟ್ಟಿಗೆ ಎಲ್ಲರೊಂದಿಗೆ ಬೆಳೆದು ಬಂದರೂ ತನ್ನತನವನ್ನು ಉಳಿಸಿಕೊಂಡು ಬರುತ್ತಿದೆ. ಇಂದು ಇಂತಹ ಬೃಹತ್ ಕಲ್ಯಾಣ ಮಂಟಪ ನಿರ್ಮಿಸಿರುವುದು ಸಂತಸದ ವಿಷಯ. ಇದು ಲೋಕಕಲ್ಯಾಣಾರ್ಥವಾಗಿ ವಿನಿಯೋಗಿಸಲ್ಪಡಬೇಕು’ ಎಂದರು.

ಸ್ವಾಮೀಜಿಗಳನ್ನು ವಾಗ್ದೇವಿ ವಿಪ್ರ ಮಹಿಳಾ ಮಂಡಳಿಯ ಸದಸ್ಯೆಯರು ಪೂರ್ಣ ಕುಂಭದೊಂದಿಗೆ ಹಾಗೂ ವಿಪ್ರ ಸಮುದಾಯ ವೇದ-ಘೋಷಗಳೊಂದಿಗೆ ಸ್ವಾಗತಿಸಿದರು. ದಾನಿಗಳನ್ನು ಗೌರವಿಸಲಾಯಿತು.

ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ಅಧ್ಯಕ್ಷ ಕೆ.ವೆಂಕಟನಾರಾಯಣಸ್ವಾಮಿ, ಬ್ರಾಹ್ಮಣ ಸೇವಾ ಟ್ರಸ್ಟ್‌ ಅಧ್ಯಕ್ಷ ಎಸ್.ಮುರಳೀಧರ ಭಟ್ಟಾಚಾರ್ಯ, ಉಪಾಧ್ಯಕ್ಷ ಎಚ್.ಆರ್.ಶೇಷಗಿರಿರಾವ್, ಕಾರ್ಯದರ್ಶಿ ಎಸ್.ಕುಮಾರಸ್ವಾಮಿ, ಸಹಕಾರ್ಯದರ್ಶಿ ಜಿ.ಸತೀಶ್‌ ಕುಮಾರ್, ಖಜಾಂಚಿ ಜಿ.ಸೂರ್ಯನಾರಾಯಣ, ಧರ್ಮದರ್ಶಿಗಳಾದ ಎಸ್.ಚಂದ್ರಮೌಳಿ, ವಿ.ಎಸ್.ರವಿ, ವೀಣಾಪ್ರಕಾಶ್, ಸುವರ್ಣ ಅಮರನಾಥ್, ಶ್ರೀಕೃಷ್ಣ ಸತ್ಸಂಗದ ಅಧ್ಯಕ್ಷ ಜೆ.ಎಸ್.ರಾಮಚಂದ್ರಪ್ಪ, ವಿ.ಎನ್.ವೆಂಕಟೇಶ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.