
ದೇವನಹಳ್ಳಿ: ಮಕ್ಕಳು ಈ ದೇಶದ ಭವಿಷ್ಯ, ಆಸ್ತಿ. ಗುಣಮಟ್ಟದ ವಿದ್ಯಾಬ್ಯಾಸ ನೀಡುವುದರ ಜತೆಗೆ ಪೋಷಿಸಿ ಬೆಳೆಸುವುದು ಎಲ್ಲರ ಜವಾಬ್ದಾರಿ ಎಂದು ಆಹಾರ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಚ್.ಮುನಿಯಪ್ಪ ತಿಳಿಸಿದರು.
ಪಟ್ಟಣದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಜಿಲ್ಲಾ ಬಾಲ ಭವನ ಸೊಸೈಟಿ ಹಾಗೂ ಶಿಕ್ಷಣ ಇಲಾಖೆ ನೇತೃತ್ವದಲ್ಲಿ ಶುಕ್ರವಾರ ನಡೆದ ಜಿಲ್ಲಾ ಮಟ್ಟದ ಮಕ್ಕಳ ದಿನಾಚರಣೆ ಉದ್ಘಾಟಿಸಿ ಮಾತನಾಡಿದರು.
ಭವ್ಯ ಭಾರತ ನಿರ್ಮಾಣ ಮಕ್ಕಳಿಂದ ಸಾಧ್ಯ. ಇಂದಿನ ಮಕ್ಕಳೇ ನಾಳಿನ ಪ್ರಜೆಗಳು ಎಂದು ಮಹಾತ್ಮ ಗಾಂಧೀಜಿ ಹೇಳಿದ್ದಾರೆ. ಮಕ್ಕಳು ಈ ದೇಶವನ್ನು ಮುಂದೆ ನಡೆಸುತ್ತಾರೆ. ಮಕ್ಕಳಿಗೆ ಉತ್ತಮ ವಿದ್ಯಾಭ್ಯಾಸ ನೀಡಿ ಅವರ ಭವಿಷ್ಯ ರೂಪಿಸುವುದು ನಮ್ಮ ಕೈಯಲ್ಲಿದೆ ಎಂದರು.
ಈ ದಿನ ಬಹಳ ಪವಿತ್ರ ದಿನ. ರಾಷ್ಟ್ರಕ್ಕೆ ಸ್ವಾತಂತ್ರ್ಯ ತರಲು ಗಾಂಧೀಜಿ, ಸುಭಾಷ್ ಚಂದ್ರ ಬೋಸ್, ಭಗತ್ ಸಿಂಗ್, ಜವಾಹರ್ ಲಾಲ್ ನೆಹರೂ, ಲಾಲ್ ಬಹದ್ದೂರ್ ಶಾಸ್ತ್ರಿ ಮುಂತಾದ ಹಲವಾರು ಮಹಾನ್ ವ್ಯಕ್ತಿಗಳು ಹೋರಾಟ ನಡೆಸಿದ್ದಾರೆ. ನಿರಂತರ ಹೋರಾಟದ ಫಲವಾಗಿ ನಮಗೆಲ್ಲ ಸ್ವಾತಂತ್ರ್ಯ ಸಿಕ್ಕಿದೆ ಎಂದು ತಿಳಿಸಿದರು.
ಸ್ವಾತಂತ್ರ್ಯ ಬಂದ ನಂತರ ಜವಾಹರ್ ಲಾಲ್ ನೆಹರೂ ಅವರು ಭಾರತದ ಮೊದಲ ಪ್ರಧಾನ ಮಂತ್ರಿ ಆಗುತ್ತಾರೆ. ಅವರು ಪಂಚ ವಾರ್ಷಿಕ ಯೋಜನೆ ಜಾರಿಗೆ ತಂದ ನಂತರ ಅತ್ಯುತ್ತಮವಾದ ಕಾರ್ಯಕ್ರಮ ಮಾಡಿ ಈ ರಾಷ್ಟ್ರವನ್ನು ಜಗತ್ತಿನ ಬಲಿಷ್ಠ ರಾಷ್ಟ್ರವನ್ನಾಗಿ ಮಾಡಲು ಕ್ರಿಯಾಶೀಲರಾಗಿ ಕೆಲಸ ಮಾಡಿದವರಲ್ಲಿ ಅವರೂ ಒಬ್ಬರು ಎಂದು ಹೇಳಿದರು.
ಮಕ್ಕಳಿಗೆ ಆರೋಗ್ಯ ಶಿಬಿರ: ಮಕ್ಕಳ ಆರೋಗ್ಯ ಬಹಳ ಮುಖ್ಯ. ಎಳೆ ವಯಸ್ಸಿನಲ್ಲೇ ಮಕ್ಕಳ ಆರೋಗ್ಯ ಸರಿಪಡಿಸಿದರೆ ಮಕ್ಕಳು ಮುಂದೆ ಕಾಯಿಲೆಯಿಂದ ಪಾರಾಗಲಿದ್ದಾರೆ. ಮಕ್ಕಳ ಆರೋಗ್ಯಕ್ಕೆ ಪೌಷ್ಟಿಕ, ಸಮತೋಲನ ಆಹಾರ ಅವಶ್ಯ. ಆರು ತಿಂಗಳಿಗೊಮ್ಮೆ ಮಕ್ಕಳ ಆರೋಗ್ಯ ತಪಾಸಣೆ ಮಾಡಿಸಬೇಕು ಎಂದರು.
ಪೋಷಕರಿಗೆ, ಶಿಕ್ಷಕರಿಗೆ ಕಿವಿಮಾತು: ಶಿಕ್ಷಕರು ಮಕ್ಕಳಿಗೆ ಗುಣಮಟ್ಟದ ವಿದ್ಯಾಭ್ಯಾಸ ನೀಡಿ ಸ್ವಂತ ಮಕ್ಕಳಂತೆ ಅವರನ್ನು ನೋಡಿಕೊಳ್ಳಬೇಕು. ಗುಣಮಟ್ಟದ ವಿದ್ಯಾಭ್ಯಾಸ ನೀಡಿದರೆ ಉತ್ತಮ ರೀತಿಯಲ್ಲಿ ಬೆಳೆಯುತ್ತಾರೆ. ಮುಂಬರುವ ಪರೀಕ್ಷೆಗಳಲ್ಲಿ ಉತ್ತಮ ಫಲಿತಾಂಶ ತರಲು ಶಿಕ್ಷಕರು ಶ್ರಮವಹಿಸಬೇಕು ಎಂದರು.
ಇದೇ ವೇಳೆ ಜಿಲ್ಲಾ ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಜಿಲ್ಲಾಧ್ಯಕ್ಷ ಬಿ.ರಾಜಣ್ಣ, ಜಿಲ್ಲಾ ಪಂಚಾಯಿತಿ ಸಿಇಒ ಕೆ.ಎನ್ ಅನುರಾಧ, ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ತಾಲ್ಲೂಕು ಅಧ್ಯಕ್ಷ ಜಗನ್ನಾಥ, ಪುರಸಭೆ ಅಧ್ಯಕ್ಷ ಮುನಿಕೃಷ್ಣ, ಉಪಾಧ್ಯಕ್ಷ ಜಿ.ಎ.ರವೀಂದ್ರ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಮುದ್ದಣ್ಣ, ಜಿಲ್ಲಾ ಆರೋಗ್ಯಾಧಿಕಾರಿ ಡಾ.ಲಕ್ಕಾ ಕೃಷ್ಣ ರೆಡ್ಡಿ, ತಹಶೀಲ್ದಾರ್ ಅನಿಲ್, ಇಒ ಶ್ರೀನಾಥ್ ಗೌಡ ಸೇರಿದಂತೆ ಅಧಿಕಾರಿಗಳು, ಮಕ್ಕಳು ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.