ದೊಡ್ಡಬಳ್ಳಾಪುರ: ರಾಜ್ಯ ಸರ್ಕಾರ ಹಿಂದುಳಿದ ವರ್ಗಗಳ ಶಾಶ್ವತ ಆಯೋಗ 2014-15ರಲ್ಲಿ ನಡೆಸಿದ ಸಾಮಾಜಿಕ, ಶೈಕ್ಷಣಿ, ಜಾತಿ ಗಣತಿ ಅವೈಜ್ಞಾನಿಕವಾಗಿದೆ. ಈ ಸಮೀಕ್ಷೆಯ ಅಂಕಿ ಅಂಶ ಅವೈಜ್ಞಾನಿಕ ಎಂದು ಸಾಬೀತುಪಡಿಸಲು ರಾಜ್ಯ ನೇಕಾರ ಸಮುದಾಯಗಳ ಒಕ್ಕೂಟ ಜಾತಿ ಗಣತಿ ಸಮೀಕ್ಷೆ ನಡೆಸಲಿದೆ ಎಂದು ಒಕ್ಕೂಟದ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್.ಸೋಮಶೇಖರ್ ಹೇಳಿದರು.
ಇಲ್ಲಿಯ ಡಿಪಿವಿ ಕಲ್ಯಾಣ ಮಂದಿರದಲ್ಲಿ ಗುರುವಾರ ನಡೆದ ನೇಕಾರ ಸಮುದಾಯಗಳ ಪ್ರಮುಖರ ಸಭೆಯಲ್ಲಿ ಮಾತನಾಡಿದ ಅವರು, ರಾಜ್ಯದ ಎಲ್ಲಾ 224 ವಿಧಾನಸಭಾ ಕ್ಷೇತ್ರಗಳಲ್ಲೂ ಒಕ್ಕೂಟ ಸಮೀಕ್ಷೆ ನಡೆಸಲು ಮೊಬೈಲ್ ಆ್ಯಪ್ ಸಿದ್ದಪಡಿಸಿದೆ. ಆ್ಯಪ್ ಸರಳವಾಗಿದ್ದು ಮನೆಯಲ್ಲೇ ಕಳಿತು ಕುಟುಂಬ ಸದಸ್ಯರ ಮಾಹಿತಿ ದಾಖಲಿಸಬಹುದು ಎಂದರು.
ಈಗಾಗಲೇ ನೇಕಾರ ಸಮುದಾಯದಲ್ಲಿನ ಇತರೆ ಒಳಪಂಗಡಗಳ ಮಠಾಧೀಶರು ಹಾಗೂ ಸಂಘಟನೆಗಳ ಪದಾಧಿಕಾರಿಗಳೊಂದಿಗೆ ಸಭೆಗಳನ್ನು ನಡೆಸಲಾಗಿದೆ ಎಂದು ಹೇಳಿದರು.
ರಾಜ್ಯದಲ್ಲಿ ನೇಕಾರ ಸಮುದಾಯ 35 ಲಕ್ಷಕ್ಕೂ ಹೆಚ್ಚಿನ ಜನರಿದ್ದಾರೆ. ಸರ್ಕಾರದ ಸಮೀಕ್ಷೆ ಕೇವಲ 9 ಲಕ್ಷ ಜನಸಂಖ್ಯೆ ತೋರಿಸಲಾಗಿದೆ. ರಾಜ್ಯದ ಜನಸಂಖ್ಯೆಯಲ್ಲಿ ನೇಕಾರ ಸಮುದಾಯ ಐದನೇ ಸ್ಥಾನದಲ್ಲಿದೆ. ಆದರೆ ಅವೈಜ್ಞಾನಿಕ ಸಮೀಕ್ಷೆಯಿಂದ ನೇಕಾರ ಸಮುದಾಯ ಸರ್ಕಾರದಿಂದ ದೊರೆಯುವ ಸೌಲಭ್ಯ, ಅಧಿಕಾರದಿಂದ ವಂಚಿತವಾಗಲಿದೆ ಎಂದರು.
ದೇವಾಂಗ,ಪದ್ಮಶಾಲಿ,ತೊಗಟವೀರ ಇತರೆ ಎಲ್ಲರು ಸಹ ನೇಕಾರ ಸಮುದಾಯದಲ್ಲೇ ಸೇರುತ್ತಾರೆ. ಸರ್ಕಾರ ಅಧಿಕೃತವಾಗಿ ಈ ಎಲ್ಲಾ ಸಮುದಾಯಗಳನ್ನು ಒಳಗೊಂಡು ನೇಕಾರ ಎಂದು ಮಾನ್ಯತೆ ನೀಡಿದೆ. ಜಾತಿಯ ಹೆಸರು ದಾಖಲಿಸುವಾಗ ನೇಕಾರ ಎಂದೇ ಎಲ್ಲರು ಬರೆಸಬೇಕು. ಆ ನಂತರ ಒಳಪಂಗಡದ ಹೆಸರನ್ನು ನಮೋದಿಸಬೇಕು ಎಂದು ಮನವಿ ಮಾಡಿದರು.
ರಾಜ್ಯದಲ್ಲಿ ಹಲವಾರು ಉಪಪಂಗಡಗಳ ಮೂಲಕ ನೇಕಾರ ಸಮುದಾಯ ಗುರುತಿಸಿಕೊಂಡಿದೆ. ಆದರೆ ಈ ಎಲ್ಲರ ಕುಲಕಸುಬು ನೇಕಾರಿಕರೆಯೇ ಆಗಿದೆ. ಸಮುದಾಯದ ಭವಿಷ್ಯದ ದೃಷ್ಠಿಯಿಂದ ಒಕ್ಕೂಟವು ನಡೆಸುತ್ತಿರುವ ಜಾತಿಗಣತಿ ಸಮೀಕ್ಷೆಯಲ್ಲಿ ಎಲ್ಲರು ಸಕ್ರಿಯವಾಗಿ ಭಾಗವಹಿಸಬೇಕು ಎಂದು ತಪಸೀಹಳ್ಳಿಯ ಪುಷ್ಪಾಂಡಜ ಆಶ್ರಮದ ದಿವ್ಯಜ್ಞಾನಾನಂದ ಗಿರಿ ಸ್ವಾಮೀಜಿ ಮನವಿ ಮಾಡಿದರು.
ಒಕ್ಕೂಟದ ಉಪಾಧ್ಯಕ್ಷ ಜಗದೀಶ್, ಮಹಿಳಾ ಅಧ್ಯಕ್ಷೆ ಉಮಾಜಗದೀಶ್,ಉಪಾಧ್ಯಕ್ಷೆ ಶೋಭಾ ಮುರಳಿಕೃಷ್ಣ, ಕಾರ್ಯದರ್ಶಿ ಉಮಾದೇವಿ, ಜಿಲ್ಲಾ ಅಧ್ಯಕ್ಷ ಡಿ.ವಿ.ಜಗದೀಶ್, ಆಂಧ್ರದೇವಾಂಗ ಸಂಘದ ಅಧ್ಯಕ್ಷ ಡಿ.ವಿ.ಕೃಷ್ಣಮೂರ್ತಿ, ಡಿ.ಎಂ.ಚಂದ್ರಶೇಖರ್, ಆರ್.ಲಕ್ಷ್ಮೀಪತಿ,ಟಿ.ಅವಲಕೊಂಡಪ್ಪ,ಸದಾಶಿವು, ಗೀತಾ, ಗಿರಿಜಾ,ಮಂಜುಳಾ ಸಭೆಯಲ್ಲಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.