ADVERTISEMENT

ನೆಲಮಂಗಲ: ಕೋಡಿ ಹರಿದ ಬರದಿ ಕೆರೆ ಗ್ರಾಮಸ್ಥರಿಂದ ಬಾಗಿನ

ಹತ್ತು ವರ್ಷಗಳಿಂದ ಬರಿದಾಗಿದ್ದ ಕೆರೆ

​ಪ್ರಜಾವಾಣಿ ವಾರ್ತೆ
Published 2 ಜುಲೈ 2022, 21:44 IST
Last Updated 2 ಜುಲೈ 2022, 21:44 IST
ನೆಲಮಂಗಲ ತಾಲ್ಲೂಕಿನಲ್ಲಿ ಕೋಡಿ ಹರಿದ ಬರದಿ ಕೆರೆಗೆ ಗ್ರಾಮಸ್ಥರು ಅಭಿವೃದ್ಧಿಗೆ ನೆರವಾದ ವರುಣ್ ಬ್ರುವರೀಸ್ (ಪೆಪ್ಸಿ) ಮತ್ತು ಅಧಿಕಾರಿಗಳ ಮುಖಾಂತರ ಬಾಗಿನ ಅರ್ಪಿಸಿದರು.
ನೆಲಮಂಗಲ ತಾಲ್ಲೂಕಿನಲ್ಲಿ ಕೋಡಿ ಹರಿದ ಬರದಿ ಕೆರೆಗೆ ಗ್ರಾಮಸ್ಥರು ಅಭಿವೃದ್ಧಿಗೆ ನೆರವಾದ ವರುಣ್ ಬ್ರುವರೀಸ್ (ಪೆಪ್ಸಿ) ಮತ್ತು ಅಧಿಕಾರಿಗಳ ಮುಖಾಂತರ ಬಾಗಿನ ಅರ್ಪಿಸಿದರು.   

ನೆಲಮಂಗಲ: ಕಳೆದ ಹತ್ತು ವರ್ಷಗಳಿಂದ ಬರದಿ ಕೆರೆ ಬರಿದಾಗಿತ್ತು. ಕುಡಿಯುವ ನೀರಿಗೆ ಮತ್ತು ರೈತರಿಗೆ ಸಮಸ್ಯೆ ಎದುರಾಗಿತ್ತು. ಪ್ರಸ್ತುತ ಪರಿಸ್ಥಿತಿ ಬದಲಾಗಿದ್ದು, ಕೆರೆ ಮೈದುಂಬಿ ಸಮಸ್ಯೆ ನಿವಾರಣೆಯಾಗಿದೆ.

ದಶಕಗಳ ನಂತರ ಮೈದುಂಬಿ ಕೋಡಿ ಹರಿದ ತಾಲ್ಲೂಕಿನ ಬರದಿ ಕೆರೆಗೆ ಗ್ರಾಮಸ್ಥರು ಪೂಜೆ ಸಲ್ಲಿಸಿ, ಅಭಿವೃದ್ಧಿಗೆ ನೆರವಾದ ವರುಣ್ ಬ್ರುವರೀಸ್ (ಪೆಪ್ಸಿ) ಮತ್ತು ಅಧಿಕಾರಿಗಳ ಮುಖಾಂತರ ಬಾಗಿನ ಅರ್ಪಿಸಿದರು.

ಗ್ರಾಮದ ಮುಖಂಡರು ಅಂದಿನ ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿಯಾಗಿದ್ದ ಕರಿಗೌಡ ಹಾಗೂ ತಹಶೀಲ್ದಾರ್ ರಾಜಶೇಖರ್ ಅವರನ್ನು ಸಮಸ್ಯೆ ಬಗೆಹರಿಸುವಂತೆ ಕೇಳಿ ಕೊಂಡಾಗ, ತಕ್ಷಣ ಕಾರ್ಯಪ್ರವೃತ್ತರಾದ ಅವರು ಬತ್ತಿಹೋಗಿದ್ದ ಬರದಿ ಕೆರೆಯನ್ನು ಪರಿಶೀಲಿಸಿ, ವರುಣ್ ಬ್ರುವರೀಸ್ ಅವರಿಗೆ ಸಾಮಾಜಿಕ ಜವಾಬ್ದಾರಿ ಯೋಜನೆ ಅಡಿಯಲ್ಲಿ ಕೆರೆ ಅಭಿವೃದ್ಧಿ ಪಡಿಸಲು ಸೂಚಿಸಿದರು.

ADVERTISEMENT

ಸಂಘಟಿತ ಪ್ರಯತ್ನದ ಫಲವಾಗಿ ಕೆರೆ ಮೈದುಂಬಿ ಕೋಡಿ ಹರಿಯುತ್ತಿದೆ ಎಂದು ಮುಖಂಡ ಎಂ.ರಾಜಣ್ಣ ಹರ್ಷ ವ್ಯಕ್ತಪಡಿಸಿದರು.

ವರುಣ್ ಬ್ರುವರೀಸ್ ಮ್ಯಾನೇಜರ್ ನಾಗರಾಜು ಮಾತನಾಡಿ, ’₹1 ಕೋಟಿ ವೆಚ್ಚದಲ್ಲಿ 46 ಎಕರೆ ವಿಸ್ತೀರ್ಣದ ಕೆರೆಯ 3ರಿಂದ 4 ಅಡಿಗಳ ಹೂಳುತೆಗೆದು, ಉಳಿದ ಅಗತ್ಯ ಕಾಮಗಾರಿಗಳನ್ನು ಪೂರ್ಣಗೊಳಿಸಿದ್ದೆವು.ನಮ್ಮ ಕೆಲಸಕ್ಕೆ ಸಾರ್ಥಕ್ಯ ದೊರೆತಿದೆ‘ ಎಂದರು.

ವರುಣ್ ಬ್ರೂವರೀಸ್‌ನ ಉಪಾಧ್ಯಕ್ಷ ವಿನೋದ್ ಪಮೋಚಾ, ಅಧಿಕಾರಿ ಮಂಜುನಾಥ್, ಮಾಹಿತಿ ಹಕ್ಕು ಮಾಜಿ ಆಯುಕ್ತ ಎಲ್.ಕೃಷ್ಣಮೂರ್ತಿ,ಗ್ರಾಮ ಪಂಚಾಯಿತಿ ಅಧ್ಯಕ್ಷ ಮುನಿರಾಜು, ರೈತಸಂಘದ
ವರದನಾಯಕನಹಳ್ಳಿ ನಾಗರಾಜು, ಮುನಿರಾಮೇಗೌಡ ಬಿ.ಟಿ.ರವೀಂದ್ರಕುಮಾರ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.