ADVERTISEMENT

ನವವಸಾಹತುಶಾಹಿ ಜಗತ್ತಿಗೆ ಮಾರಕ: ರಾಮಕೃಷ್ಣ

ಕೆಂಪು ಪುಸ್ತಕ ಬಿಡುಗಡೆ, ಸಂವಾದ

​ಪ್ರಜಾವಾಣಿ ವಾರ್ತೆ
Published 24 ಫೆಬ್ರುವರಿ 2026, 5:54 IST
Last Updated 24 ಫೆಬ್ರುವರಿ 2026, 5:54 IST
ಹೊಸಕೋಟೆ ನಗರದ ಸೆಂಟರ್ ಆಫ್ ಇಂಡಿಯನ್ ಟ್ರೇಡ್ ಯೂನಿಯನ್ ತಾಲ್ಲೂಕು ಘಟಕದ ವತಿಯಿಂದ ಕೆಂಪು ಪುಸ್ತಕ ದಿನಾಚರಣೆ ಅಂಗವಾಗಿ ಕಾರ್ಲಮಾರ್ಕ್ಸ್ ಮತ್ತು ಫೇಡ್ರಿಕ್ ಎಂಗಲ್ಸ್ ಅವರ ಕಮ್ಯುನಿಷ್ಟ್ ಪ್ರಣಾಳಿಕೆ ಮತ್ತು ಸಾಮ್ರಾಜ್ಯವಾದ ವಿರುದ್ಧ ಕೆಂಪು ಪುಸ್ತಕ ಬಿಡುಗಡೆ ಮಾಡಿದ ಸಂದರ್ಭ
ಹೊಸಕೋಟೆ ನಗರದ ಸೆಂಟರ್ ಆಫ್ ಇಂಡಿಯನ್ ಟ್ರೇಡ್ ಯೂನಿಯನ್ ತಾಲ್ಲೂಕು ಘಟಕದ ವತಿಯಿಂದ ಕೆಂಪು ಪುಸ್ತಕ ದಿನಾಚರಣೆ ಅಂಗವಾಗಿ ಕಾರ್ಲಮಾರ್ಕ್ಸ್ ಮತ್ತು ಫೇಡ್ರಿಕ್ ಎಂಗಲ್ಸ್ ಅವರ ಕಮ್ಯುನಿಷ್ಟ್ ಪ್ರಣಾಳಿಕೆ ಮತ್ತು ಸಾಮ್ರಾಜ್ಯವಾದ ವಿರುದ್ಧ ಕೆಂಪು ಪುಸ್ತಕ ಬಿಡುಗಡೆ ಮಾಡಿದ ಸಂದರ್ಭ   

ಹೊಸಕೋಟೆ: ನಗರದಲ್ಲಿ ಸಿಐಟಿಯು ತಾಲ್ಲೂಕು ಘಟಕದಿಂದ ಕಾರ್ಲ್ ಮಾರ್ಕ್ಸ್ ಮತ್ತು ಫ್ರೆಡ್ರಿಕ್ ಎಂಗಲ್ಸ್ ಕಮ್ಯುನಿಸ್ಟ್ ಪ್ರಣಾಳಿಕೆ ಮತ್ತು ಸಾಮ್ರಾಜ್ಯವಾದ ವಿರುದ್ಧ ಕೆಂಪು ಪುಸ್ತಕ ಬಿಡುಗಡೆ ಹಾಗೂ ಸಂವಾದ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ಈ ಸಂದರ್ಭದಲ್ಲಿ ಹುತಾತ್ಮ ಕಾಮ್ರೇಡ್ ಚಂದ್ರಪ್ಪ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು.

ಸೌಹಾರ್ದ ಕರ್ನಾಟಕ ಸಂಘಟನೆ ರಾಜ್ಯ ಮುಖಂಡ ರಾಮಕೃಷ್ಣ ಮಾತನಾಡಿ, 1848ರ ಫೆ.21ರಂದು ಕಾರ್ಲ್ ಮಾರ್ಕ್ಸ್ ಮತ್ತು ಫ್ರೆಡ್ರಿಕ್ ಎಂಗಲ್ಸ್‌ ಕಮ್ಯುನಿಸ್ಟ್ ಪ್ರಣಾಳಿಕೆ ಬಿಡುಗಡೆಯಾದ ದಿನದ ನೆನಪಿಗಾಗಿ ಕೆಂಪು ಪುಸ್ತಕ ದಿನಾಚರಣೆ ಆಚರಿಸಲಾಗುತ್ತಿದೆ. ಬಂಡವಾಳಶಾಹಿ ವ್ಯವಸ್ಥೆ ದುರ್ಬಲ ರಾಷ್ಟ್ರಗಳ ಮೇಲೆ ಎಸಗುತ್ತಿರುವ ದೌರ್ಜನ್ಯ ತಿಳಿಸುವುದು ಇದರ ಉದ್ದೇಶ ಎಂದರು.

ಅಮೆರಿಕದ ದಬ್ಬಾಳಿಕೆ ನೀತಿಯಿಂದ ಭಾರತ, ಆಫ್ರಿಕಾ, ಆಗ್ನೇಯ ಮತ್ತು ಮಧ್ಯ ಏಷ್ಯಾ ರಾಷ್ಟ್ರಗಳ ಅಲಿಪ್ತ ನೀತಿ ದುರ್ಬಲಗೊಳ್ಳುತ್ತಿರುವುದು ಅಪಾಯದ ಸಂಕೇತ. ಭಾರತ ಅಮೆರಿಕದ ಷರತ್ತುಗಳಿಗೆ ಒಳಗಾಗದಿದ್ದರೆ ಗುಲಾಮಗಿರಿಗೆ ಬೀಳಬೇಕಾಗುತ್ತದೆ. ಶೇ18 ತೆರಿಗೆ ಕಡಿತದ ಹೆಸರಲ್ಲಿ ಮುಂದಿನ 5ವರ್ಷದಲ್ಲಿ ₹45ಲಕ್ಷ ಕೋಟಿ ವ್ಯಾಪಾರದ ಷರತ್ತಿಗೆ ಒಳಪಡಿಸಲಾಗುತ್ತಿದೆ ಎಂದರು.

ADVERTISEMENT

ಪ್ರಜಾಪ್ರಭುತ್ವ ಉಳಿಸುವ ಸೋಗಿನಲ್ಲಿ ಅಮೆರಿಕ ಜಗತ್ತಿನಲ್ಲಿ 905 ಮಿಲಿಟರಿ ನೆಲೆಗಳನ್ನು ಹೊಂದಿದೆ. 1945ರಿಂದ 200ಕ್ಕೂ ಹೆಚ್ಚು ಮಿಲಿಟರಿ ದಾಳಿ ನಡೆಸಿ 3 ಕೋಟಿ ಜನರ ಸಾವಿಗೆ ಕಾರಣವಾಗಿದೆ. ಭಾರತ-ಪಾಕ್ ಯುದ್ಧ ನಿಲ್ಲಿಸಿದ್ದು ತಾನೇ ಎಂದು 90 ಬಾರಿ ಬಡಾಯಿ ಕೊಚ್ಚಿಕೊಂಡಿದ್ದರೂ ಕೇಂದ್ರ ಸರ್ಕಾರ ಅಮೆರಿಕದ ಹಿಂದೆ ಬೀಳುತ್ತಿರುವುದು ಪ್ರಶ್ನಾರ್ಹ ಎಂದರು.

ದೇಶಕ್ಕೆ ಬೇಕಿರುವುದು ಬಂಡವಾಳಶಾಹಿಗಳ ಓಲೈಕೆ ಮಾಡುವ ಸರ್ವಾಧಿಕಾರಿ ರಾಜಕಾರಣವಲ್ಲ. ಬದಲಿಗೆ ಬಾಬಾ ಸಾಹೇಬ್ ಅಂಬೇಡ್ಕರ್ ಹೇಳಿದ ಪ್ರೆಜೆಗಳೇ ಪ್ರಭುಗಳು ಎಂಬ ರಾಜಕಾರಣವನ್ನು ಅರ್ಥಮಾಡಿಕೊಳ್ಳಬೇಕಿದೆ ಎಂದು ದಲಿತ ಸಂಘರ್ಷ ಸಮಿತಿ ಅಂಬೇಡ್ಕರ್ ವಾದ ತಾಲ್ಲೂಕು ಅಧ್ಯಕ್ಷ ಚಿನ್ನಸ್ವಾಮಿ ಅಭಿಪ್ರಾಯಪಟ್ಟರು. 

ಕಾರ್ಮಿಕರ ಜಾಗೃತ ಜಗತ್ತಿನಲ್ಲಿ ಸಮ ಸಮಾಜಗಳ ನಿರ್ಮಾಣಕ್ಕೆ ಬುನಾದಿ ಎಂಬುದನ್ನು ಯಾರು ಮರೆಯುವಂತಿಲ್ಲ ಸಿಐಟಿಯು ತಾಲ್ಲೂಕು ಅಧ್ಯಕ್ಷ ಹರಿಂದ್ರ ಹೇಳಿದರು. 

ಸಿಐಟಿಯು ತಾಲ್ಲೂಕು ಖಜಾಂಚಿ ವೆಂಕಟರಾಜು, ಕಾರ್ಯದರ್ಶಿ ಮೋಹನ್ ಬಾಬು, ದಲಿತ ಹಕ್ಕುಗಳ ಸಮಿತಿ ತಾಲ್ಲೂಕು ಕಾರ್ಯದರ್ಶಿ ಡಾ.ಮುನಿರಾಜು ಎಂ, ಉಪಾಧ್ಯಕ್ಷ ಗಣೇಶ್ ಎಂ, ಎಸ್ಎಫ್‌ಐ ತಾಲ್ಲೂಕು ಮುಖಂಡರಾದ ಉಲ್ಲಾಸ್, ಹಸಿರು ಸೇನೆ ರಾಜ್ಯ ರೈತ ಸಂಘದ ತಾಲ್ಲೂಕು ಅಧ್ಯಕ್ಷ ಹೈದರ್ ಬೇಗ್, ಕರ್ನಾಟಕ ಪ್ರಾಂತ ರೈತ ಸಂಘಟನೆ ತಾಲ್ಲೂಕು ಮುಖಂಡರಾದ ರಾಜಣ್ಣ, ವಕೀಲರಾದ ಕೆ.ನಾಗರಾಜ್, ಕಟ್ಟಡ ಕಾರ್ಮಿಕ ಸಂಘಟನೆ ತಾಲ್ಲೂಕು ಮುಖಂಡ ಮುನಿರಾಜ ಜಿ.ಎಸ್, ವಿವಿಧ ಕಂಪನಿಗಳ ಕಾರ್ಮಿಕರು ಮತ್ತು ಮುಖಂಡರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.