ADVERTISEMENT

ಗುಣ ಮಟ್ಟದ ಶಿಕ್ಷಣಕ್ಕೆ ಉತ್ತಮ ಸೌಲಭ್ಯ ಬೇಕು: ಶಾಸಕ ನಿಸರ್ಗ ನಾರಾಯಣಸ್ವಾಮಿ

ನೂತನ ಶಾಲಾ ಕೊಠಡಿ ನಿರ್ಮಾಣಕ್ಕೆ ಭೂಮಿಪೂಜೆ

​ಪ್ರಜಾವಾಣಿ ವಾರ್ತೆ
Published 25 ಫೆಬ್ರುವರಿ 2020, 13:50 IST
Last Updated 25 ಫೆಬ್ರುವರಿ 2020, 13:50 IST
ಭೂಮಿ ಪೂಜೆ ಕಾರ್ಯಕ್ರಮದಲ್ಲಿ ಗಣ್ಯರು ಉಪಸ್ಥಿತರಿದ್ದರು.
ಭೂಮಿ ಪೂಜೆ ಕಾರ್ಯಕ್ರಮದಲ್ಲಿ ಗಣ್ಯರು ಉಪಸ್ಥಿತರಿದ್ದರು.   

ದೇವನಹಳ್ಳಿ: ಸರ್ಕಾರಿ ಶಾಲೆಗಳು ಖಾಸಗಿ ಶಾಲೆಗಳೊಂದಿಗೆ ಪೈಪೋಟಿ ನಡೆಸಿ ಗುಣಮಟ್ಟದ ಶಿಕ್ಷಣ ದೊರಕಲು ಉತ್ತಮ ಸೌಲಭ್ಯಗಳು ಬೇಕು ಎಂದು ಶಾಸಕ ನಿಸರ್ಗ ನಾರಾಯಣಸ್ವಾಮಿ ಹೇಳಿದರು.

ಇಲ್ಲಿನ ದೊಡ್ಡಸಣ್ಣೆ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ ರೌಂಡ್ ಟೇಬಲ್ ಇಂಡಿಯಾ ಮತ್ತು ಐಟಿಸಿ ಎಕ್ಸೆಂಟ್ರಾ ವತಿಯಿಂದ ಸಾಮಾಜಿಕ ಹೊಣೆಗಾರಿಕೆ ಅನುದಾನದ ವತಿಯಿಂದ ₹ 30 ಲಕ್ಷ ವೆಚ್ಚದ ನೂತನ ಶಾಲಾ ಕೊಠಡಿ ನಿರ್ಮಾಣಕ್ಕೆ ಭೂಮಿಪೂಜೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ನಾಲ್ಕು ವರ್ಷಗಳಿಂದ ದೇವನಹಳ್ಳಿ ತಾಲ್ಲೂಕಿನಲ್ಲಿ 11 ಸರ್ಕಾರಿ ಶಾಲೆಗಳನ್ನು ಹೈಟೆಕ್ ಮಾದರಿಯಲ್ಲಿ ವಿವಿಧ ಕಂಪನಿಗಳು ನಿರ್ಮಾಣ ಮಾಡಿವೆ. ಕಂಪನಿಗಳ ಆದಾಯದ ಮೂಲ ಹಣದಲ್ಲಿ ಶೇ 2ರಷ್ಟು ಅನುದಾನ ಬಳಕೆ ಮಾಡಿ ತಮ್ಮ ಹೊಣೆಗಾರಿಕೆಯನ್ನು ನಿಭಾಯಿಸಿದ್ದು ಉತ್ತಮ ಬೆಳವಣಿಗೆ ಎಂದು ಹೇಳಿದರು.

ADVERTISEMENT

ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಸುತ್ತಮುತ್ತ ಇರುವ ವಿವಿಧ ಖಾಸಗಿ ಕಂಪನಿಗಳು ಮುಂದೆ ಬಂದು ಬಡ ಮಕ್ಕಳು ವ್ಯಾಸಂಗ ಮಾಡುತ್ತಿರುವ ಸರ್ಕಾರಿ ಶಾಲೆಗಳನ್ನು ದುರಸ್ತಿ ಮಾಡಿ ಮೂಲ ಸೌಲಭ್ಯ ಕಲ್ಪಿಸಿದರೆ ಇನ್ನಷ್ಟು ಅನುಕೂಲವಾಗಲಿದೆ ಎಂದು ಹೇಳಿದರು.

ಜಿಲ್ಲಾ ಪಂಚಾಯಿತಿ ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ಲಕ್ಷ್ಮಿನಾರಾಯಣಪ್ಪ ಮಾತನಾಡಿ, ‘ಸರ್ಕಾರಿ ಶಾಲೆಗಳನ್ನು ಉಳಿಸುವ ಪ್ರಯತ್ನ ಸ್ಥಳೀಯ ಪೊಷಕರು ಮಾಡಬೇಕು. ಪ್ರತಿಯೊಂದನ್ನೂ ಸರ್ಕಾರದಿಂದ ನಿರೀಕ್ಷಿಸುವುದು ಕಷ್ಟ. ಸರ್ಕಾರಿ ಶಾಲೆಗಳನ್ನು ದಾನಿಗಳು, ಖಾಸಗಿ ಕಂಪನಿಗಳು ದತ್ತು ಪಡೆದುಕೊಳ್ಳಬೇಕು ಎಂದು ಹೇಳಿದರು.

‘ವಾರ್ಷಿಕ ದ್ವಿತೀಯ ಪಿಯುಸಿ ಪರೀಕ್ಷೆ ಮತ್ತು 10ನೇ ತರಗತಿ ಪರೀಕ್ಷೆ ನಡೆಸುವ ಕುರಿತು ಪೂರ್ವಭಾವಿ ಸಿದ್ಧತಾ ಸಭೆ ನಡೆಸಲಾಗಿದೆ. ಯಾವುದೇ ರೀತಿಯಿಂದ ನಕಲು ಮಾಡದಂತೆ ಕಟ್ಟೆಚ್ಚರ ವಹಿಸುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಜಿಲ್ಲೆಯ ಘನತೆ ಕಾಯ್ದುಕೊಳ್ಳುವಂತೆ ತಿಳಿಸಲಾಗಿದೆ’ ಎಂದು ಹೇಳಿದರು.

ಜಿಲ್ಲಾ ಪಂಚಾಯಿತಿ ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷ ಕೆ.ಸಿ.ಮಂಜುನಾಥ್, ಐ.ಟಿ.ಸಿ ಎಕ್ಸೆಂಟ್ರಾ ಘಟಕ ಇಂಜಿನಿಯರ್ ಶಶಿಕುಮಾರ್, ರೊಂಡ್ ಟೇಬಲ್ ಮುಖ್ಯಸ್ಥ ರಾಜ್ ಕಿರಣ್, ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ಚೈತ್ರಾ ವೀರೇಗೌಡ, ಸದಸ್ಯೆ ಉಷಾರಾಣಿ, ಡಿ.ಸಿ.ಸಿ. ಬ್ಯಾಂಕ್ ನಿರ್ದೇಶಕ ಸೊಣ್ಣಪ್ಪ, ವಿ.ಎಸ್.ಎಸ್.ಎನ್ ಅಧ್ಯಕ್ಷ ಮುನಿರಾಜು, ಜೆಡಿಎಸ್ ಕಸಬಾ ಹೋಬಳಿ ಘಟಕ ಅಧ್ಯಕ್ಷ ಚಿಕ್ಕನಾರಾಯಣಸ್ವಾಮಿ, ಮುಖಂಡರಾದ ಗೋಪಾಲ್, ಮಂಜುನಾಥ್ ,ಲಕ್ಷ್ಮಿಕಾಂತ್, ರಮೇಶ್, ಸಂತೋಷ್ ಕುಮಾರ್, ಮುಖ್ಯ ಶಿಕ್ಷಕ ಆಂಜಿನಪ್ಪ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.