ADVERTISEMENT

ಕೆಂಪೇಗೌಡರ ಬೆಂಗಳೂರು ಉತ್ಸವಕ್ಕೆ ನಿರ್ಮಲಾನಂದನಾಥ ಸ್ವಾಮೀಜಿ ಒತ್ತಾಯ

​ಪ್ರಜಾವಾಣಿ ವಾರ್ತೆ
Published 21 ಜನವರಿ 2023, 5:15 IST
Last Updated 21 ಜನವರಿ 2023, 5:15 IST
ದೇವನಹಳ್ಳಿ ತಾಲ್ಲೂಕಿನ ಆವತಿ ಗ್ರಾಮದಲ್ಲಿ ಕರ್ನಾಟಕ ರಕ್ಷಣಾ ವೇದಿಕೆಯಿಂದ ಶುಕ್ರವಾರ ಹಮ್ಮಿಕೊಂಡಿದ್ದ ಕನ್ನಡೋತ್ಸವ ಕಾರ್ಯಕ್ರಮವನ್ನು ಸಚಿವ ಆರ್‌. ಅಶೋಕ ಉದ್ಘಾಟಿಸಿದರು
ದೇವನಹಳ್ಳಿ ತಾಲ್ಲೂಕಿನ ಆವತಿ ಗ್ರಾಮದಲ್ಲಿ ಕರ್ನಾಟಕ ರಕ್ಷಣಾ ವೇದಿಕೆಯಿಂದ ಶುಕ್ರವಾರ ಹಮ್ಮಿಕೊಂಡಿದ್ದ ಕನ್ನಡೋತ್ಸವ ಕಾರ್ಯಕ್ರಮವನ್ನು ಸಚಿವ ಆರ್‌. ಅಶೋಕ ಉದ್ಘಾಟಿಸಿದರು   

ದೇವನಹಳ್ಳಿ: ಎಲ್ಲಾ ಕ್ಷೇತ್ರದಲ್ಲಿಯೂ ಕರ್ನಾಟಕ ಮುಂಚೂಣಿಯಲ್ಲಿದೆ. ಇಲ್ಲಿಗೆ ಬರುವ ಯಾವ ಅಧಿಕಾರಿ, ಅನುಕೂಲಸ್ಥರು ನಾಡು ಬಿಟ್ಟು ಹೋಗಲ್ಲ. ಕನ್ನಡ ಜನಸಾಮಾನ್ಯರ ನುಡಿಯಾಗಿದ್ದರೆ ಮಾತ್ರ ಕನ್ನಡಿಗರ ಅಸ್ತಿತ್ವಕ್ಕೆ ಬೆಲೆ ಸಿಗಲಿದೆ ಎಂದು ಕಂದಾಯ ಸಚಿವ ಆರ್. ಅಶೋಕ ತಿಳಿಸಿದರು.

ತಾಲ್ಲೂಕಿನ ಆವತಿ ಗ್ರಾಮದಲ್ಲಿ ಕರ್ನಾಟಕ ರಕ್ಷಣಾ ವೇದಿಕೆಯಿಂದ ಶುಕ್ರವಾರ ಹಮ್ಮಿಕೊಂಡಿದ್ದ ಕನ್ನಡೋತ್ಸವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಇಲ್ಲಿ ನೆಲೆಸುವ ಅನ್ಯ ಭಾಷಿಕರು ಕನ್ನಡ ಕಲಿಯಲು ಮುಂದಾಗುವುದಿಲ್ಲ. ಹಾಗಾಗಿ, ಸರ್ಕಾರದಿಂದ ಅದಕ್ಕಾಗಿ ವಿಶೇಷ ಯೋಜನೆ ಹಮ್ಮಿಕೊಂಡಿದ್ದೇವೆ. ಕನ್ನಡ ಭಾಷೆ, ಲಿಪಿ ಉಳಿದರೆ ಮಾತ್ರವೇ ನಾಡಿನ ಸಂಸ್ಕೃತಿ ಅಸ್ತಿತ್ವದಲ್ಲಿರಲು ಸಾಧ್ಯ ಎಂದರು.

ADVERTISEMENT

ಕನ್ನಡಿಗರು ಎಲ್ಲಾ ಭಾಷೆ ಕಲಿತಿದ್ದಾರೆ. ಕನ್ನಡವೆಂದರೆ ಕೆಂಪೇಗೌಡರಾಗಿದ್ದಾರೆ. ಒಂದು ತಿಂಗಳೊಳಗೆ ನಾಡಪ್ರಭುಗಳ ಪುತ್ಥಳಿ ನಿರ್ಮಾಣಕ್ಕೆ ಅಡಿಗಲ್ಲು ಹಾಕಲಾಗುವುದು ಎಂದು ತಿಳಿಸಿದರು.

ಸುಪ್ರೀಂ ಕೋರ್ಟ್ ನಿವೃತ್ತ ನ್ಯಾಯಮೂರ್ತಿ ಸಂತೋಷ್ ಹೆಗ್ಡೆ ಮಾತನಾಡಿ, ಅಭಿವೃದ್ಧಿಯೆಂಬ ದುರಾಸೆಯಿಂದ ಸಮಾಜ ತತ್ತರಿಸಿ ಹೋಗಿದೆ. ಸಮಾಜದ ಮನೋಭಾವದಲ್ಲಿ ಬದಲಾವಣೆಯಾಗಬೇಕಿದೆ. ಅಧಿಕಾರಿಗಳು, ಸ್ಥಿತಿವಂತರನ್ನು ಪೂಜಿಸುವುದನ್ನು ಬಿಟ್ಟು ಪ್ರಾಮಾಣಿಕ ಕನ್ನಡಿಗರನ್ನು ಬೆಂಬಲಿಸೋಣ. ಜೀವನದಲ್ಲಿ ತೃಪ್ತಿಯನ್ನು ಅಳವಡಿಸಿಕೊಂಡು ಸ್ವಚ್ಛವಾಗಿದ್ದು, ಮಾನವೀಯ ಮೌಲ್ಯಗಳನ್ನು ಹೆಚ್ಚಿಸಿಕೊಳ್ಳೋಣ ಎಂದು
ತಿಳಿಸಿದರು.

ಯುವಕ, ಯುವತಿಯರಲ್ಲಿ ಮೌಲ್ಯಯುತ ಮನೋಭಾವ ಬೆಳೆಸುವ ಜವಾಬ್ದಾರಿ ಎಲ್ಲರ ಮೇಲಿದೆ. ಇನ್ನೊಬ್ಬರ ದುಡ್ಡನ್ನು ತೆಗೆದು ಶ್ರೀಮಂತರಾಗುವುದು ಬೇಡ. ನ್ಯಾಯಯುತವಾಗಿ ಶ್ರೀಮಂತರಾಗೋಣ. ಸಮಾಜ ಮುಖಿಯಾಗಿ ಜೀವಿಸೋಣ ಎಂದು ಸಲಹೆ ನೀಡಿದರು.

ಆದಿಚುಂಚನಗಿರಿ ಪೀಠಾಧ್ಯಕ್ಷ ನಿರ್ಮಲಾನಂದನಾಥ ಸ್ವಾಮೀಜಿ ಮಾತನಾಡಿ, ಕರವೇ ಸಂಘಟನೆ ಮೂಲಕ ನಾಡಿನಾದ್ಯಂತ 25 ವರ್ಷಗಳ ಕನ್ನಡ ಪರ ಹೋರಾಟಗಳಿಂದ ಭಾಷೆಯ ಉಳಿವಿಗಾಗಿ‌ ನಾರಾಯಣಗೌಡ ಶ್ರಮಿಸಿದ್ದಾರೆ. ಲಕ್ಷಾಂತರ ಯುವಪಡೆಯೊಂದಿಗೆ ನಾಡು, ನುಡಿಯ ರಕ್ಷಣೆಗಾಗಿ ಟೊಂಕಕಟ್ಟಿ ನಿಂತಿದ್ದಾರೆ ಎಂದರು.

ಜಾಗತೀಕರಣ ಯುಗದಲ್ಲಿ ಭಾಷೆ ಉಳಿವಿಗಾಗಿ ಯುವಕರು ಮುಂದಾಗಬೇಕಿದೆ. ಕನ್ನಡ ಪರ ಕೆಲಸಗಳನ್ನು ನಿತ್ಯ, ನಿರಂತರವಾಗಿ ಮಾಡಬೇಕು. ಆವತಿ ಭೂಮಿಯು ರಣವೀರರ ನಾಡಾಗಿದೆ. ನಾಡಪ್ರಭುಗಳ ನೆನೆಯುವ ಶಾಶ್ವತ ಕೆಲಸವು ಸರ್ಕಾರದಿಂದ ಆಗಬೇಕಿದೆ ಎಂದು ಒತ್ತಾಯಿಸಿದರು.

ಬೆಂಗಳೂರಿನಲ್ಲಿ ಪ್ರತಿವರ್ಷ ನಾಡಪ್ರಭು ಕೆಂಪೇಗೌಡರ ಬೆಂಗಳೂರು ಉತ್ಸವ ಮಾಡಬೇಕು. ಮೈಸೂರು ದಸರಾದಂತೆ ಅದ್ದೂರಿಯಾಗಿ ಮಾಡಬೇಕು. ಕನ್ನಡಿಗರ ವೀರತ್ವ, ಧರ್ಮ ಪಸರಿಸಬೇಕು ಎಂದು ಒತ್ತಾಯಿಸಿದರು.

ಸ್ಥಳೀಯ ಅಂತರರಾಷ್ಟ್ರೀಯ ಪ್ರತಿಭೆಗಳಿಗೆ ಕಾರ್ಯಕ್ರಮದಲ್ಲಿ ಅಭಿನಂದಿಸಲಾಯಿತು. ಕರವೇ ರಾಜ್ಯ ಘಟಕದ ಅಧ್ಯಕ್ಷ ನಾರಾಯಣಗೌಡ, ಉಪಾಧ್ಯಕ್ಷ ಡಾ.ಪಿ. ಆಂಜಿನಪ್ಪ, ನೀಲೇರಿ ಅಂಬರೀಶ್, ಒಬದೇನಹಳ್ಳಿ ಮುನಿಯಪ್ಪ, ಎಚ್.ಎಂ. ರವಿಕುಮಾರ್, ಬಿ.ಕೆ. ನಾರಾಯಣಸ್ವಾಮಿ, ತಹಶೀಲ್ದಾರ್ ಶಿವರಾಜ್
ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.