ADVERTISEMENT

ಹಸಿರು ಪಟಾಕಿ ಮಾಹಿತಿ ಇಲ್ಲ, ಎಲ್ಲರಲ್ಲೂ ಗೊಂದಲ

ಎಂ.ಮುನಿನಾರಾಯಣ
Published 13 ನವೆಂಬರ್ 2020, 1:46 IST
Last Updated 13 ನವೆಂಬರ್ 2020, 1:46 IST
ವಿಜಯಪುರದ ಗ್ರಂಥಾಲಯದ ಆವರಣದಲ್ಲಿ ಮಾರಾಟಕ್ಕೆ ಸಿದ್ಧಪಡಿಸಿರುವ ಪಟಾಕಿ ಅಂಗಡಿ
ವಿಜಯಪುರದ ಗ್ರಂಥಾಲಯದ ಆವರಣದಲ್ಲಿ ಮಾರಾಟಕ್ಕೆ ಸಿದ್ಧಪಡಿಸಿರುವ ಪಟಾಕಿ ಅಂಗಡಿ   

ವಿಜಯಪುರ: ಬೆಳಕಿನ ಹಬ್ಬ ದೀಪಾವಳಿಗೆ ಹಸಿರು ಪಟಾಕಿಗಳನ್ನು ಮಾತ್ರ ಸಿಡಿಸಬಹುದೆಂದು ಸರ್ಕಾರ ಆದೇಶ ಮಾಡಿದೆಯಾದರೂ, ಹಸಿರು ಪಟಾಕಿಗಳು ಎಂದರೆ ಏನು ಎನ್ನುವ ಬಗ್ಗೆ ಸಾರ್ವಜನಿಕರಿಗೆ ಮಾಹಿತಿಯಿಲ್ಲದೆ ಗೊಂದಲಕ್ಕೆ ಒಳಗಾಗಿದ್ದಾರೆ.

ಕೊರೊನಾ ಸಂಕಷ್ಟದಿಂದಾಗಿ ಈ ಬಾರಿ ವಾಯುಮಾಲಿನ್ಯ ಮತ್ತು ಶಬ್ದ ಮಾಲಿನ್ಯವನ್ನು ನಿಯಂತ್ರಣ ಮಾಡುವ ಉದ್ದೇಶದಿಂದ ರಾಜ್ಯ ಸರ್ಕಾರ ಪಟಾಕಿ ಸಿಡಿಸಿ ಹಬ್ಬ ಆಚರಣೆ ಮಾಡುವುದನ್ನು ನಿಷೇಧಿಸಿದೆ. ಈಗ ಹಸಿರು ಪಟಾಕಿ ಸಿಡಿಸಲು ಅವಕಾಶ ಮಾಡಿಕೊಟ್ಟಿದ್ದು ಹಸಿರು ಪಟಾಕಿ ಬಗ್ಗೆ ಈ ಸಾರ್ವಜನಿಕರಿಗೆ ಜಾಗೃತಿ ಮೂಡಿಸುವಂತಹ ಕೆಲಸ ಮಾಡುತ್ತಿಲ್ಲ. ಅನುಮತಿ ಕೊಡದೇ ಇದ್ದಿದ್ದರೆ ಚೆನ್ನಾಗಿತ್ತು ಎಂದು ಜನರು ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ.

ಪಟಾಕಿ ವ್ಯಾಪಾರಿ ಮಂಜುನಾಥ್ ಮಾತನಾಡಿ,‘ಪಟಾಕಿ ಮಾರಾಟ ಮಾಡಬಾರದು ಎಂದು ಸರ್ಕಾರ ಈಗ ತೀರ್ಮಾನ ಮಾಡುವ ಬದಲಿಗೆ 3 ತಿಂಗಳ ಮೊದಲೇ ತೀರ್ಮಾನಿಸಿದ್ದರೆ, ನಾವು ಲಕ್ಷಾಂತರ ರೂಪಾಯಿ ಬಡ್ಡಿಗೆ ಹಣ ತಂದು ಬಂಡವಾಳ ಹೂಡಿಕೆ ಮಾಡುತ್ತಿರಲಿಲ್ಲ. ಕೊರೊನಾ ಸಂಕಷ್ಟ ಕಾಲದಲ್ಲಿ ಕೆಲಸಗಳಿಲ್ಲದೆ, ವ್ಯವಹಾರಗಳಲ್ಲಿ ನಷ್ಟವುಂಟಾಗಿ ಕಂಗಾಲಾಗಿದ್ದೇವೆ. ವರ್ಷಕ್ಕೊಮ್ಮೆ ಪಟಾಕಿ ಮಾರಾಟ ಮಾಡಿಕೊಂಡು ಒಂದಷ್ಟು ಸಾಲ ತೀರಿಸಿಕೊಳ್ಳೋಣ ಎಂದು ಮೂರು ತಿಂಗಳ ಮೊದಲೇ ಬಂಡವಾಳ ಹಾಕಿದ್ದೇವೆ. ಪಟಾಕಿಯನ್ನು ಸರಬರಾಜು ಮಾಡಿಬಿಟ್ಟಿದ್ದರು. ಈ ಹಂತದಲ್ಲಿ ಏಕಾಏಕಿ ಸರ್ಕಾರ ತೆಗೆದುಕೊಂಡಿದ್ದ ತೀರ್ಮಾನ ದಿಗ್ಭ್ರಮೆ ಮೂಡಿಸಿತ್ತು. ಈಗ ಹಸಿರು ಪಟಾಕಿ ಮಾರಾಟಕ್ಕೆ ಅನುಮತಿ ನೀಡಿದ್ದಾರಾದರೂ ಹಾಕಿರುವ ಬಂಡವಾಳ ಹೊರಡುತ್ತದೋ ಇಲ್ಲವೋ ಎನ್ನುವ ಆತಂಕ ಕಾಡುತ್ತಿದೆ. ಆರೋಗ್ಯಕ್ಕೆ ಹಾನಿಕಾರಕವಾದ ಸಿಗರೇಟ್‌ಗಳನ್ನು ನಿಷೇಧಿಸಬಹುದಲ್ಲವೇ’ ಎಂದು ಪ್ರಶ್ನಿಸಿದರು.

ADVERTISEMENT

ಸ್ಥಳೀಯ ನಿವಾಸಿ ಎಸ್.ಸುಷ್ಮಾ ಮಾತನಾಡಿ, ‘ಪಟಾಕಿ ಸಿಡಿಸಿ ಹಬ್ಬ ಆಚರಣೆ ಮಾಡುವುದಕ್ಕಿಂತ ಇಂತಹ ಕೊರೊನಾ ಸಂಕಷ್ಟದ ಕಾಲದಲ್ಲಿ ದೀಪಗಳನ್ನು ಬೆಳಗಿ ಹಬ್ಬ ಮಾಡುವುದು ಸೂಕ್ತವೆನಿಸುತ್ತದೆ. ಸರ್ಕಾರ ತೆಗೆದುಕೊಂಡಿದ್ದ ತೀರ್ಮಾನ ಸೂಕ್ತವೆನಿಸಿತ್ತು. ಪುನಃ ಹಸಿರು ಪಟಾಕಿಗೆ ಅನುಮತಿ ನೀಡಿದೆ. ಹಸಿರು ಪಟಾಕಿಯೆಂದರೆ ಏನು ಎನ್ನುವುದು ಗೊತ್ತಾಗುತ್ತಿಲ್ಲ. ಇದರಿಂದ ಗೊಂದಲವುಂಟಾಗುತ್ತಿದೆ’ ಎಂದರು.

ಅನುಮತಿ ಕೊಟ್ಟಿಲ್ಲ

ಪುರಸಭಾ ಮುಖ್ಯಾಧಿಕಾರಿ ಎ.ಬಿ.ಪ್ರದೀಪ್ ಕುಮಾರ್ ಮಾತನಾಡಿ, ‘ಈ ಬಾರಿ ಪರಿಸರ ಮಾಲಿನ್ಯವಾಗದಂತೆ ತಡೆಗಟ್ಟುವ ನಿಟ್ಟಿನಲ್ಲಿ ರಾಜ್ಯಸರ್ಕಾರ, ಹಸಿರು ಪಟಾಕಿ ಮಾರಾಟಕ್ಕೆ ಅನುಮತಿ ನೀಡುವಂತೆ ತಿಳಿಸಿದೆ. ಇದುವರೆಗೂ ಯಾರಿಗೂ ಅನುಮತಿ ಕೊಟ್ಟಿಲ್ಲ. ಜಿಲ್ಲಾಧಿಕಾರಿಯಿಂದ ಏನು ಆದೇಶ ಮಾಡ್ತಾರೋ ಅದಂತೆ ನಾವು ಅನುಮತಿ ಕೊಡ್ತೇವೆ’ ಎಂದರು.

ಎಲ್ಲ ಸಂದರ್ಭದಲ್ಲೂ ನಿಷೇಧಿಸಿ

ಸ್ಥಳೀಯ ನಿವಾಸಿ ಮುನಿಕೃಷ್ಣಪ್ಪ ಮಾತನಾಡಿ, ‘ವರ್ಷಕ್ಕೊಮ್ಮೆ ಮಾತ್ರವಲ್ಲ, ವರ್ಷದಲ್ಲಿ ಶುಭ ಸಮಾರಂಭಗಳು ಸೇರಿದಂತೆ ರಾಜ್ಯೋತ್ಸವ, ವಿಜಯೋತ್ಸವ ಸಮಾರಂಭಗಳಲ್ಲಿ ಪಟಾಕಿಗಳು ಸಿಡಿಸುವುದನ್ನು ರೂಢಿಸಿಕೊಂಡಿದ್ದಾರೆ. ಇದರಿಂದ ವೃದ್ಧರು, ಆಸ್ತಮಾ ಇರುವವರು, ಹೃದಯ ಸಂಬಂಧಿ ರೋಗಿಗಳಿಗೆ ತುಂಬಾ ತೊಂದರೆಯಾಗುತ್ತಿದೆ. ಪರಿಸರದ ಮೇಲೆ ಕೆಟ್ಟ ಪರಿಣಾಮ ಬೀರುತ್ತಿದೆ. ನಮ್ಮ ಸಂತೋಷಕ್ಕೆ ಪರಿಸರವನ್ನು ಹಾಳು ಮಾಡುವುದು ಸೂಕ್ತವಲ್ಲ. ಈಗಾಗಲೇ ಕಾಡು ನಾಶ ಮಾಡಿದ್ದೇವೆ. ಮರಗಿಡಗಳನ್ನು ಕಡಿದು ಪರಿಸರವನ್ನು ಹಾಳು ಮಾಡಿದ್ದೇವೆ. ಆದ್ದರಿಂದ ಪರಿಸರಕ್ಕೆ ಹಾನಿಯುಂಟು ಮಾಡುವಂತಹ ಪಟಾಕಿಗಳನ್ನು ಎಲ್ಲ ಸಂದರ್ಭದಲ್ಲೂ ನಿಷೇಧಿಸುವುದು ಉತ್ತಮ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.