ಚನ್ನಪಟ್ಟಣ: ಸಿ.ಪಿ. ಯೋಗೇಶ್ವರ್ ಸುಳ್ಳಿನ ಮಹಾರಾಜ. ಪಕ್ಷಾಂತರ ಅವರ ಹುಟ್ಟುಗುಣ. ಅವರು ಪಕ್ಷಾಂತರ ಮಾಡಿರುವುದರಿಂದ ಬಿಜೆಪಿಗೆ ಯಾವುದೇ ನಷ್ಟವಿಲ್ಲ ಎಂದು ಬಿಜೆಪಿಯ ಹಿರಿಯ ಮುಖಂಡ ರುದ್ರೇಶ್ ಆಕ್ರೋಶ ವ್ಯಕ್ತಪಡಿಸಿದರು.
ನಗರದಲ್ಲಿ ಗುರುವಾರ ಪತ್ರಿಕಾಗೋಷ್ಠಿ ಮಾತನಾಡಿ, ‘ಯೋಗೇಶ್ವರ್ ಅವರ ಯಾವುದೇ ಕುತಂತ್ರಕ್ಕೂ ನಾವು ಜಗ್ಗುವುದಿಲ್ಲ. ಯೋಗೇಶ್ವರ್ ಬಿಜೆಪಿಯಿಂದ ಹೊರಹೋದ ನಂತರ ನಾವು ಸಂತೋಷವಾಗಿ ಇದ್ದೇವೆ. ಅವರ ಹಿಂದೆ ನಮ್ಮ ಪಕ್ಷದ ಯಾರೂ ಹೋಗುವುದಿಲ್ಲ’ ಎಂದರು.
‘ಬಿಜೆಪಿಗೆ ಯೋಗೇಶ್ವರ್ ಅನಿವಾರ್ಯವಲ್ಲ. ಯೋಗೇಶ್ವರ್ ಅವರು ಎಲ್ಲಿ ಬೆಳೆ ಚೆನ್ನಾಗಿ ಬೆಳೆದಿರುತ್ತದೆಯೊ ಅಲ್ಲಿ ಪಸಲು ಕೊಯ್ಯಲು ಹೋಗುತ್ತಾರೆ. ಬಿಜೆಪಿಯಿಂದ ಹಲವಾರು ಸೌಲಭ್ಯ ಪಡೆದುಕೊಂಡು ಈಗ ಬಿಜೆಪಿ ಬಗ್ಗೆ ಟೀಕೆ ಮಾಡುತ್ತಿದ್ದಾರೆ. ನಮ್ಮ ಪಕ್ಷದ ಕಾರ್ಯಕರ್ತರು ಹೆದುರುವ ಅಗತ್ಯ ಇಲ್ಲ. ನಮ್ಮ ಪಕ್ಷದ ವರಿಷ್ಠರು ಆಯ್ಕೆ ಮಾಡುವ ಎನ್‌ಡಿಎ ಅಭ್ಯರ್ಥಿ ಗೆಲ್ಲಿಸಲು ಎಲ್ಲರೂ ಪ್ರಾಮಾಣಿಕವಾಗಿ ಕೆಲಸ ಮಾಡುತ್ತೇವೆ’ ಎಂದು ಹೇಳಿದರು.
ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಎಂ.ಎನ್. ಆನಂದಸ್ವಾಮಿ, ‘ಯೋಗೇಶ್ವರ್ ಅವರು ರಾಜಕೀಯ ದುರುದ್ದೇಶದಿಂದ ಕಾಂಗ್ರೆಸ್ ಸೇರಿದ್ದಾರೆ. ಮೊದಲು ಜೆಡಿಎಸ್ ಗುರುತಿನಿಂದಲೇ ಸ್ಪರ್ಧಿಸುವುದಾಗಿ ಹೇಳಿದ್ದ ಯೋಗೇಶ್ವರ್ ಆನಂತರ ಮಾತು ಬದಲಿಸಿದರು. ನಂತರ ಎಚ್.ಡಿ.ಕುಮಾರಸ್ವಾಮಿ ಅವರು ಜೆಡಿಎಸ್ ನಿಂದಲೇ ಟಿಕೆಟ್ ನೀಡುವುದಾಗಿ ತಿಳಿಸಿದ್ದರೂ ಅದನ್ನು ಧಿಕ್ಕರಿಸಿ ಕಾಂಗ್ರೆಸ್ ಸೇರಿದ್ದಾರೆ. ವ್ಯಕ್ತಿಯಿಂದ ಪಕ್ಷವಲ್ಲ. ಪಕ್ಷದಿಂದ ವ್ಯಕ್ತಿ. ಯೋಗೇಶ್ವರ್ ಅವರ ಪಕ್ಷಾಂತರದಿಂದ ನಮಗೆ ನಷ್ಟವಿಲ್ಲ. ಬಿಜೆಪಿಯು ತಾಲ್ಲೂಕಿನಲ್ಲಿ ಸದೃಢವಾಗಿದೆ. ಪಕ್ಷವನ್ನು ಮತ್ತಷ್ಟು ಸದೃಢವಾಗಿ ಕಟ್ಟುತ್ತೇವೆ’ ಎಂದರು.
ಬಿಜೆಪಿ ಮುಖಂಡ ಹುಲುವಾಡಿ ದೇವರಾಜು, ಕೆ.ಟಿ. ಜಯರಾಮು, ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ರವೀಶ್, ರಾಮನಗರ, ಮಾಗಡಿ, ಕನಕಪುರ ತಾಲ್ಲೂಕು ಘಟಕಗಳ ಅಧ್ಯಕ್ಷರು, ಜಿಲ್ಲಾ ಹಾಗೂ ತಾಲ್ಲೂಕು ಘಟಕಗಳ ಪದಾಧಿಕಾರಿಗಳು ಹಾಜರಿದ್ದರು.
ಯೋಗೇಶ್ವರ್ ಭಯೋತ್ಪಾದಕ
‘ಸಿ.ಪಿ. ಯೋಗೇಶ್ವರ್ ಒಬ್ಬ ಭಯೋತ್ಪಾದಕ. ಅವರು ಬಿಜೆಪಿಗೆ ಬಂದು ಬಿಜೆಪಿಯ ಮನೆಯನ್ನು ಸಿಡಿಸಲು ಪ್ರಯತ್ನಿಸಿದರು. ಆದರೆ ಆ ಪ್ರಯತ್ನ ಯಶಸ್ವಿಯಾಗಲಿಲ್ಲ’ ಎಂದು ರುದ್ರೇಶ್ ಆಕ್ರೋಶ ವ್ಯಕ್ತಪಡಿಸಿದರು. ‘ಈಗ ಅವರು ಕಾಂಗ್ರೆಸ್‌ಗೆ ಹೋಗಿರುವ ಕಾರಣ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಶಿವಕುಮಾರ್ ಅವರಿಗೆ ಕಂಟಕ ಎದುರಾಗಲಿದೆ. ಡಿ.ಕೆ. ಶಿವಕುಮಾರ್ ಅವರನ್ನು ಮುಖ್ಯಮಂತ್ರಿ ಮಾಡುತ್ತಾರೋ ಇಲ್ಲವೋ ಮುಂದಿನ ದಿನಗಳಲ್ಲಿ ತಿಳಿಯಲಿದೆ’ ಎಂದು ಟೀಕಿಸಿದರು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.