ADVERTISEMENT

ಸೇನೆ ಕಾರ್ಯಾಚರಣೆಯಲ್ಲಿ ರಾಜಕೀಯ ಸಲ್ಲ: ಹಂಸ ಮೊಯಿಲಿ ಅಭಿಮತ

‘ಹಸಿವು ಮುಕ್ತ ಕರ್ನಾಟಕ ಕಾಂಗ್ರೆಸ್ ಸಾಧನೆ’

​ಪ್ರಜಾವಾಣಿ ವಾರ್ತೆ
Published 4 ಏಪ್ರಿಲ್ 2019, 13:22 IST
Last Updated 4 ಏಪ್ರಿಲ್ 2019, 13:22 IST
ದೇವನಹಳ್ಳಿ ಕೋಟೆ ಬೀದಿಯಲ್ಲಿ ಮತಯಾಚಿಸಿದ ಕಾಂಗ್ರೆಸ್ ಮತ್ತು ಜೆಡಿಎಸ್ ಮಹಿಳಾ ಘಟಕದ ಪದಾಧಿಕಾರಿಗಳು
ದೇವನಹಳ್ಳಿ ಕೋಟೆ ಬೀದಿಯಲ್ಲಿ ಮತಯಾಚಿಸಿದ ಕಾಂಗ್ರೆಸ್ ಮತ್ತು ಜೆಡಿಎಸ್ ಮಹಿಳಾ ಘಟಕದ ಪದಾಧಿಕಾರಿಗಳು   

ದೇವನಹಳ್ಳಿ: ‘ಸಿದ್ಧರಾಮಯ್ಯ‌ ಅವರ ಆಡಳಿತದ ಅವಧಿಯಲ್ಲಿ ಹಸಿವು ಮುಕ್ತ ಕರ್ನಾಟಕ ಯೋಜನೆ ಜಾರಿ ಮಾಡಿದ್ದು ಕಾಂಗ್ರೆಸ್ ಪಕ್ಷದ ಸಾಧನೆಗಳಲ್ಲಿ ಮುಖ್ಯವಾದದ್ದು’ ಎಂದು ಸಂಸದ ಎಂ.ವೀರಪ್ಪ ಮೊಯಿಲಿ ಪುತ್ರಿ ಹಂಸ ಅಭಿಪ್ರಾಯಪಟ್ಟರು.

ನಗರದ ವೇಣುಗೋಪಾಲಸ್ವಾಮಿ ದೇವಾಲಯದಲ್ಲಿ ಪೂಜೆ ಸಲ್ಲಿಸಿದ ನಂತರ, ಕೋಟೆ ಬೀದಿಯಲ್ಲಿ ಗುರುವಾರ ಮೈತ್ರಿ ಅಭ್ಯರ್ಥಿ ಪರ ಕಾಂಗ್ರೆಸ್ ಮತ್ತು ಜೆಡಿಎಸ್‌ನ ವಿವಿಧ ಮಹಿಳಾ ಘಟಕದ ಪದಾಧಿಕಾರಿಗಳೊಂದಿಗೆ ಮನೆ ಮನೆಗೆ ತೆರಳಿ ಮತಯಾಚಿಸಿದರು.

‘ದಲಿತರಿಗೆ, ಹಿಂದುಳಿದ ವರ್ಗ ಮತ್ತು ಅಲ್ಪಸಂಖ್ಯಾತ ವರ್ಗದ ಮಕ್ಕಳಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಉನ್ನತ ಶಿಕ್ಷಣಕ್ಕೆ ಮೊದಲ ಬಾರಿಗೆ ಸಿ.ಇ.ಟಿ ಜಾರಿಗೆ ತಂದಿದ್ದು ವೀರಪ್ಪ ಮೊಯಿಲಿ ಅವರೇ ಎಂಬುದನ್ನು ಮರೆಯವಂತಿಲ್ಲ’ ಎಂದರು.

ADVERTISEMENT

‘ಸಿದ್ದರಾಮಯ್ಯ ಸರ್ಕಾರದಲ್ಲಿ ಬೈಯಾಪ ವತಿಯಿಂದ ತಾಲ್ಲೂಕಿನಲ್ಲಿ ₹24 ಕೋಟಿ ವೆಚ್ಚದಲ್ಲಿ ರಸ್ತೆಗಳ ದುರಸ್ತಿ, ನೂತನ ಡಾಂಬರೀಕರಣ, ಅಂಗನವಾಡಿ ಮತ್ತು ಸರ್ಕಾರಿ ಶಾಲೆ ಹೆಚ್ಚುವರಿ ಕಟ್ಟಡ ನಿರ್ಮಾಣ ಮಾಡಲಾಗಿದೆ. ಎತ್ತಿನಹೊಳೆ ಕಾಮಗಾರಿ ಯೋಜನೆಯಡಿ ಗ್ರಾಮಾಂತರ ಜಿಲ್ಲೆಗೆ ₹20 ಕೋಟಿ ಅನುದಾನದಲ್ಲಿ ಕೆರೆಯಲ್ಲಿ ಹೂಳೆತ್ತುವ ಕೆಲಸವಾಗಿದೆ. ಕಳೆದ ಹತ್ತು ವರ್ಷಗಳಲ್ಲಿ ಅನೇಕ ಅಭಿವೃದ್ಧಿ ಕೆಲಸಗಳಾಗಿವೆ’ ಎಂದು ಹೇಳಿದರು.

‘ಎತ್ತಿನಹೊಳೆ ಯೋಜನೆಯಡಿ 210 ಕಿ.ಮೀ ಕಾಮಗಾರಿಯಾಗಿದೆ. ಇನ್ನು 40ಕಿ.ಮೀ ಮಾತ್ರ ಆಗಬೇಕು. ಅದು ಇನ್ನು ಒಂದೂವರೆ ವರ್ಷದಲ್ಲಿ ಪೂರ್ಣಗೊಳ್ಳಲಿದೆ. ಸಮ್ಮಿಶ್ರ ಸರ್ಕಾರದಲ್ಲಿ ಉತ್ತಮ ಅಭಿವೃದ್ಧಿ ಕೆಲಸಗಳಾಗುತ್ತಿವೆ’ ಎಂದು ಹೇಳಿದರು.

ಎ.ಐ.ಸಿ.ಸಿ ಸದಸ್ಯೆ ಕಮಲಾಕ್ಷಿ ರಾಜಣ್ಣ ಮಾತನಾಡಿ ‘ಪ್ರಧಾನಿ ನರೇಂದ್ರಮೋದಿ ಐದು ವರ್ಷದ ಅಡಳಿತದಲ್ಲಿ ವಿದೇಶಗಳನ್ನು ಸುತ್ತಿದ್ದಾರೆ ಅಷ್ಟೇ. ಗುಪ್ತಚರ ಇಲಾಖೆ ವೈಫಲ್ಯದಿಂದ ಪುಲ್ವಮಾ ಘಟನೆಯಲ್ಲಿ ನಲವತ್ತು ವೀರಯೋಧರು ಸಾವನ್ನಪ್ಪುವಂತಾಯಿತು. ಬಾಲಾಕೋಟ್ ದಾಳಿಯನ್ನು ರಾಜಕೀಯಕ್ಕೆ ಬಳಸಿಕೊಳ್ಳಲಾಗುತ್ತಿದೆ’ ಎಂದು ದೂರಿದರು .

ಜೆಡಿಎಸ್ ಮಹಿಳಾ ತಾಲ್ಲೂಕು ಘಟಕ ಅಧ್ಯಕ್ಷೆ ಮೀನಾಕ್ಷಿ ಮುನಿಕೃಷ್ಣ ಮಾತನಾಡಿ ‘ಜಾತ್ಯತೀತ ನಿಲುವು ಹೊಂದಿರುವ ಕಾಂಗ್ರೆಸ್ ಮತ್ತು ಜೆಡಿಎಸ್ ಹೊಂದಾಣಿಕೆಯಿಂದ ಈ ಬಾರಿ ಚುನಾವಣೆ ಎದುರಿಸುತ್ತಿವೆ. ಬಿಜೆಪಿಯ ಸಾಧನೆ ಏನೆಂಬುದು ಜನರಿಗೆ ತಿಳಿದಿದೆ. ಹಾಗಾಗಿ ಜನರು ವಿವೇಚನೆಯಿಂದ ಮತ ಚಲಾಯಿಸಬೇಕು ಎಂದು ಹೇಳಿದರು.

ಕೆ.ಪಿ.ಸಿ.ಸಿ ಮಹಿಳಾ ಘಟಕದ ರಾಜ್ಯ ಕಾರ್ಯದರ್ಶಿ ಭಾಗ್ಯಮ್ಮ, ಬ್ಲಾಕ್ ಕಾಂಗ್ರೆಸ್ ಮಹಿಳಾ ಘಟಕದ ಅಧ್ಯಕ್ಷೆ ಮಮತ, ವಿಜಯಪುರ ಬ್ಲಾಕ್ ಕಾಂಗ್ರೆಸ್ ಮಹಿಳಾ ಘಟಕದ ಅಧ್ಯಕ್ಷೆ ಮಂಜುಳಾ, ತಾಲ್ಲೂಕು ಪಂಚಾಯಿತಿ ಸದಸ್ಯೆ ಚೈತ್ರ ವೀರೇಗೌಡ, ವಿವಿಧ ಘಟಕ ಪದಾಧಿಕಾರಿಗಳಾದ ಮೀನಾ, ಕೃಷ್ಣವೇಣಿ, ಶಾರದಮ್ಮ , ಅಶಾರಾಣಿ, ಗಾಯಿತ್ರಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.