ADVERTISEMENT

ಅಂಗವಿಕಲರ ಸಮೀಕ್ಷೆಗೆ ಆದೇಶ

ಪ್ರತಿ ಗ್ರಾಮ ಪಂಚಾಯಿತಿವಾರು ಸಮೀಕ್ಷೆಗೆ ಗ್ರಾಮೀಣಾಭಿವೃದ್ಧಿ ಇಲಾಖೆ ಸುತ್ತೋಲೆ

ಎಂ.ಮುನಿನಾರಾಯಣ
Published 7 ಮಾರ್ಚ್ 2021, 2:54 IST
Last Updated 7 ಮಾರ್ಚ್ 2021, 2:54 IST
ನರೇಗಾ ಯೋಜನೆಯಡಿ ಕಾಮಗಾರಿ (ಸಾಂದರ್ಭಿಕ ಚಿತ್ರ)
ನರೇಗಾ ಯೋಜನೆಯಡಿ ಕಾಮಗಾರಿ (ಸಾಂದರ್ಭಿಕ ಚಿತ್ರ)   

ವಿಜಯಪುರ: ಮಹಾತ್ಮಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯಡಿ ಅಂಗವಿಕಲರನ್ನು ನೋಂದಾಯಿಸಿ ಅವರಿಗೆ ಸೌಲಭ್ಯ ಕಲ್ಪಿಸುವ ಸಂಬಂಧ ಗ್ರಾಮ ಪಂಚಾಯಿತಿವಾರು ಅಂಗವಿಕಲ ಕುಟುಂಬಗಳ ಸಮೀಕ್ಷೆ ನಡೆಸಿ ಉದ್ಯೋಗ ಕಲ್ಪಿಸುವಂತೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಆಯುಕ್ತಾಲಯ ಆದೇಶ ಹೊರಡಿಸಿದೆ.

ಈ ಯೋಜನೆಯಡಿ 2019-20ನೇ ಸಾಲಿನಲ್ಲಿ ರಾಷ್ಟ್ರಮಟ್ಟದಲ್ಲಿ ಶೇ21.54 ಇದ್ದು, ರಾಜ್ಯಮಟ್ಟದ ಸರಾಸರಿ ಶೇ13.71 ಇರುತ್ತದೆ. 2020-21ನೇ ಸಾಲಿನಲ್ಲಿ ಯೋಜನೆ ಯಡಿ ನೋಂದಾಯಿಸಿ ಕೊಂಡಿರುವ 75 ಸಾವಿರ ಅಂಗವಿಕಲರ ಪೈಕಿ 13 ಸಾವಿರ ಮಂದಿಗೆ ಮಾತ್ರ ಕೆಲಸ ನೀಡಲಾಗಿದೆ.

ಇತರೆ ಆದಾಯ ತರುವ ಚಟುವಟಿಕೆಗಳಲ್ಲಿ ಉದ್ಯೋಗ ಅವಕಾಶ ಕಡಿಮೆ ಇದ್ದು, ನರೇಗಾ ಯೋಜನೆಯಡಿಹೆಚ್ಚಿನ ಪ್ರಮಾಣದಲ್ಲಿ ಕೆಲಸ ಒದಗಿಸಲು ಕ್ರಮವಹಿಸುವಂತೆ ಜಿಲ್ಲಾ ಪಂಚಾಯಿತಿ ಮುಖ್ಯಕಾರ್ಯನಿರ್ವಾಹಕ ಅಧಿಕಾರಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪನಿರ್ದೇಶಕರು, ಜಿಲ್ಲಾ ಅಂಗ ವಿಕಲರ ಕಲ್ಯಾಣ ಅಧಿಕಾರಿ, ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿಯನ್ನು ಒಳಗೊಂಡಿರುವ ಸಮಿತಿಗೆ ಸೂಚಿಸಲಾಗಿದೆ.

ADVERTISEMENT

ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಎಲ್ಲ ಅಂಗವಿಕಲರ ಕುಟುಂಬಗಳ ಸಮೀಕ್ಷೆ ನಡೆಸುವುದು, ಸಮೀಕ್ಷೆಯನ್ನು ಗ್ರಾಮ ಪುನರ್ವಸತಿ ಕಾರ್ಯಕರ್ತರು (ವಿಆರ್ ಡಬ್ಲೂ) ನಡೆಸಬೇಕು. (ಎಂ.ಆರ್.ಡಬ್ಲೂ)ಗಳು ಸಮೀಕ್ಷೆ ನಡೆಸುವಾಗ ಮೇಲ್ವಿಚಾರಣೆ ಮಾಡಬೇಕೆಂದು ಸೂಚಿಸಲಾಗಿದೆ.

ಸಮೀಕ್ಷೆ ಸಮಯದಲ್ಲಿ ಉದ್ಯೋಗ ಚೀಟಿ ಹೊಂದಿರುವ ವ್ಯಕ್ತಿಗಳಿಂದ ನಮೂನೆ-6 ರಲ್ಲಿ ಕೆಲಸದ ಬೇಡಿಕೆ ಪಡೆದುಕೊಳ್ಳಬೇಕು. ಉದ್ಯೋಗ ಚೀಟಿ ಹೊಂದಿಲ್ಲದೆ ಇರುವ ವ್ಯಕ್ತಿಗಳಿಂದ ನಮೂನೆ-1 ರಲ್ಲಿ ಉದ್ಯೋಗ ಚೀಟಿಗಾಗಿ ಅರ್ಜಿ ಹಾಗೂ ಅಗತ್ಯ ದಾಖಲಾತಿ ಪಡೆದುಕೊಳ್ಳಬೇಕು. ನಮೂನೆ-1ರಲ್ಲಿ ಉದ್ಯೋಗ ಚೀಟಿಗಾಗಿ ಅರ್ಜಿ ಹಾಗೂ ಅಗತ್ಯ ದಾಖಲೆ ಪಡೆದುಕೊಳ್ಳಬೇಕು. ನಮೂನೆ-1ರಲ್ಲಿ ಅರ್ಜಿ ಪಡೆದ ಒಂದು ವಾರದೊಳಗಾಗಿ ಗ್ರಾಮ ಪಂಚಾಯಿತಿ ಉದ್ಯೋಗ ಚೀಟಿ ನೀಡಬೇಕು ಎಂದು ತಿಳಿಸಲಾಗಿದೆ.

ನರೇಗಾ ಯೋಜನೆಯಡಿ ನಮೂನೆ-6ರಲ್ಲಿ ಅರ್ಜಿ ಸಲ್ಲಿಸಿದವರಿಗೆ ಉದ್ಯೋಗ ಕೊಡುವ ಕಾರ್ಯ ಗ್ರಾಮ ಪಂಚಾಯಿತಿಗಳಲ್ಲಿ ಈಗಾಗಲೇ ನಡೆಯುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.