ADVERTISEMENT

ಸಂಘಟನೆಗಳು ದುರ್ಬಲರಿಗೆ ನೆರವಾಗಬೇಕು

​ಪ್ರಜಾವಾಣಿ ವಾರ್ತೆ
Published 2 ಜುಲೈ 2019, 12:15 IST
Last Updated 2 ಜುಲೈ 2019, 12:15 IST
ವಿಜಯಪುರ ಸಮೀಪದ ಹಳೇಹಳ್ಳಿಯಲ್ಲಿ ಪ್ರಜಾ ವಿಮೋಚನಾ ಬಹುಜನ ಸಮಿತಿಯ ಗ್ರಾಮಶಾಖೆಯನ್ನು ರಾಜ್ಯ ಘಟಕದ ಅಧ್ಯಕ್ಷ ಬಿಜ್ಜವಾರ ನಾಗರಾಜ್ ಉದ್ಘಾಟನೆ ಮಾಡಿದರು
ವಿಜಯಪುರ ಸಮೀಪದ ಹಳೇಹಳ್ಳಿಯಲ್ಲಿ ಪ್ರಜಾ ವಿಮೋಚನಾ ಬಹುಜನ ಸಮಿತಿಯ ಗ್ರಾಮಶಾಖೆಯನ್ನು ರಾಜ್ಯ ಘಟಕದ ಅಧ್ಯಕ್ಷ ಬಿಜ್ಜವಾರ ನಾಗರಾಜ್ ಉದ್ಘಾಟನೆ ಮಾಡಿದರು   

ವಿಜಯಪುರ: ‘ಸಂಘಟನೆಗಳು, ಸಮಾಜದಲ್ಲಿ ಶೋಷಣೆಗೆ ಒಳಗಾಗಿ, ಸೌಲಭ್ಯಗಳಿಂದ ವಂಚಿತರಾಗಿರುವವರ ದ್ವನಿಯಾಗಿ ಕೆಲಸ ಮಾಡಿದಾಗ ಸಮಾಜದಲ್ಲಿನ ಅಸ್ಪೃಶ್ಯತೆ, ಜಾತಿ ಪದ್ಧತಿ ದೂರವಾಗಿ ಎಲ್ಲರೂ ನೆಮ್ಮದಿಯ ಬದುಕು ಕಂಡುಕೊಳ್ಳಲು ಸಹಕಾರಿ’ ಎಂದು ಪ್ರಜಾ ವಿಮೋಚನಾ ಬಹುಜನ ಸಮಿತಿ ರಾಜ್ಯ ಘಟಕದ ಅಧ್ಯಕ್ಷ ಬಿಜ್ಜವಾರ ನಾಗರಾಜ್ ಹೇಳಿದರು.

ಸಮೀಪದ ಹಳೇಹಳ್ಳಿ ಗ್ರಾಮದಲ್ಲಿ ಸಮಿತಿಯ ಗ್ರಾಮಶಾಖೆ ಉದ್ಘಾಟನೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಸಂಘಟನೆಗಳು ಹೆಚ್ಚಾಗಿರುವಂತೆಲ್ಲಾ ಸಮಾಜದಲ್ಲಿ ದುರ್ಬಲ ವರ್ಗದವರ ಮೇಲೆ ನಿರಂತರವಾಗಿ ನಡೆಯುತ್ತಿರುವ ದೌರ್ಜನ್ಯ, ದಬ್ಬಾಳಿಕೆ, ಶೋಷಣೆಗಳು ನಿಂತಿಲ್ಲ. ದೇವಾಲಯಗಳಿಗೆ ಪ್ರವೇಶ ನಿಷಿದ್ಧವಾಗಿಯೇ ಇದೆ. ಮೀಸಲಾತಿಯ ಕಬಳಿಕೆಯಾಗುತ್ತಿದೆ. ಪೊಲೀಸ್ ಠಾಣೆಗಳಿಗೆ ಹೋದರೂ ನೊಂದವರಿಗೆ ನ್ಯಾಯ ಸಿಗದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಇಂತಹ ವ್ಯವಸ್ಥೆಯ ವಿರುದ್ಧ ನಾವೆಲ್ಲರೂ ಪ್ರಾಮಾಣಿಕವಾಗಿ ಹೋರಾಟ ಮಾಡಬೇಕಾಗಿದೆ’ ಎಂದರು.

ADVERTISEMENT

‘ನಾವು ಯಾವುದೇ ಸಮುದಾಯಗಳ ವಿರೋಧಿಗಳಲ್ಲ. ನಮಗೆ ಸಂವಿಧಾನಬದ್ಧವಾಗಿ ಸಿಗಬೇಕಾಗಿರುವ ಹಕ್ಕುಗಳಿಗಾಗಿ ಹೋರಾಟ ಮಾಡಲಿಕ್ಕೆ ಸಂಘಟಿತರಾಗುತ್ತಿದ್ದೇವೆಯೆ ಹೊರತು, ಇತರ ಸಮುದಾಯಗಳನ್ನು ದೂರವಿಟ್ಟು ಬದುಕು ಕಟ್ಟಿಕೊಳ್ಳುವುದು ನಮ್ಮ ಉದ್ದೇಶವಲ್ಲ. ನಾವು ಸಂಘ ಜೀವಿಗಳು. ಸಾಮರಸ್ಯದಿಂದ ಬದುಕುವುದನ್ನು ರೂಢಿಸಿಕೊಳ್ಳಬೇಕು. ನಮ್ಮ ಸ್ವಾಭಿಮಾನಕ್ಕೆ ಧಕ್ಕೆಯಾದಾಗ ಹೋರಾಟದ ಮೂಲಕ ನ್ಯಾಯವನ್ನು ಗಳಿಸಿಕೊಳ್ಳಬೇಕು’ ಎಂದರು.

ತಾಲ್ಲೂಕು ಘಟಕದ ಅಧ್ಯಕ್ಷ ಪೂಜನಹಳ್ಳಿ ಪ್ರಕಾಶ್ ಮಾತನಾಡಿ, ‘ಪ್ರತಿಯೊಬ್ಬರಿಗೂ ಬದುಕುವ, ಮೂಲಸೌಕರ್ಯ ಪಡೆದುಕೊಳ್ಳುವ ಹಕ್ಕು ಇದೆ. ಹಳ್ಳಿಗಳಲ್ಲಿ ಜನರು ಪ್ರಜ್ಞಾವಂತರಾಗದ ಕಾರಣದಿಂದ ಸರ್ಕಾರದಿಂದ ಬರುವಂತಹ ಸಾಕಷ್ಟು ಸೌಲಭ್ಯಗಳನ್ನು ಪಡೆದುಕೊಳ್ಳುವಲ್ಲಿ ನಾವು ವಂಚಿತರಾಗುತ್ತಿದ್ದೇವೆ. ಆದ್ದರಿಂದ ಸಂಘಟನೆಯ ಮೂಲಕ ಸರ್ಕಾರದ ಯೋಜನೆಗಳ ಕುರಿತು ಜಾಗೃತಿ ಮೂಡಿಸುವುದರ ಜೊತೆಗೆ ಅವುಗಳನ್ನು ಅರ್ಹರಿಗೆ ತಲುಪಿಸುವಂತಹ ಕಾರ್ಯವನ್ನು ಮಾಡುವಂತಹ ಕೆಲಸವನ್ನು ಸಂಘಟನೆ ಮಾಡುತ್ತದೆ. ಯುವಜನರು ಒಂದಾಗಬೇಕು. ಒಳ್ಳೆಯ ಕಾರ್ಯಕ್ಕೆ ಕೈ ಜೋಡಿಸಬೇಕು. ಮಕ್ಕಳ ಶಿಕ್ಷಣಕ್ಕಾಗಿ ಸಂಘಟನೆಯಿಂದ ₹ 5 ಸಾವಿರ ಪ್ರೋತ್ಸಾಹಧನ ನೀಡಲಾಗುವುದು’ ಎಂದು ಘೋಷಣೆ ಮಾಡಿದರು.
ಗ್ರಾಮ ಪಂಚಾಯಿತಿ ಸದಸ್ಯರಾದ ನಾಗರಾಜ್, ರಂಗಪ್ಪ, ಮಾದೇಶ್, ಗೋವಿಂದಪ್ಪ, ಮಂಜುನಾಥ್, ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.