ADVERTISEMENT

‘ಮತಪಟ್ಟಿ ಪರಿಷ್ಕರಣೆಗೆ ಸಹಭಾಗಿತ್ವ ಅವಶ್ಯಕ’

ಡಾ.ಅಂಬೇಡ್ಕರ್ ಭವನದಲ್ಲಿ ಮತದಾರರ ಪಟ್ಟಿ ಪರಿಶೀಲನೆ ಕಾರ್ಯಕ್ರಮ ಉದ್ಘಾಟನೆ

​ಪ್ರಜಾವಾಣಿ ವಾರ್ತೆ
Published 1 ಸೆಪ್ಟೆಂಬರ್ 2019, 16:39 IST
Last Updated 1 ಸೆಪ್ಟೆಂಬರ್ 2019, 16:39 IST
ಮತದಾರರ ಪಟ್ಟಿ ಪರಿಷ್ಕರಣೆ ಕಾರ್ಯಕ್ರಮ ಉದ್ಘಾಟಿಸಿದ ಜಿಲ್ಲಾಧಿಕಾರಿ ರವೀಂದ್ರ
ಮತದಾರರ ಪಟ್ಟಿ ಪರಿಷ್ಕರಣೆ ಕಾರ್ಯಕ್ರಮ ಉದ್ಘಾಟಿಸಿದ ಜಿಲ್ಲಾಧಿಕಾರಿ ರವೀಂದ್ರ   

ದೇವನಹಳ್ಳಿ: ‘ಗ್ರಾಮಾಂತರ ಜಿಲ್ಲೆಯಲ್ಲಿ 45 ದಿನಗಳು ಮತದಾರರ ಪಟ್ಟಿ ಪರಿಷ್ಕರಣೆ ನಡೆಯುತ್ತಿದ್ದು ಸ್ಥಳೀಯರ ಸಹಭಾಗಿತ್ವದ ಅವಶ್ಯಕತೆ ಇದ್ದು ಸಹಕರಿಸಬೇಕು’ ಎಂದು ಜಿಲ್ಲಾಧಿಕಾರಿ ಪಿ.ಎನ್.ರವೀಂದ್ರ ಹೇಳಿದರು.

ಇಲ್ಲಿನ ಡಾ.ಅಂಬೇಡ್ಕರ್ ಭವನದಲ್ಲಿ ಬೂತ್ ಮಟ್ಟದ ಅಧಿಕಾರಿಗಳು, ಆಶಾ ಕಾರ್ಯಕರ್ತರು, ವಿವಿಧ ಇಲಾಖೆ ಅಧಿಕಾರಿಗಳಿಗೆ ಏರ್ಪಡಿಸಿದ್ದ ಮತದಾರರ ಪಟ್ಟಿ ಪರಿಶೀಲನಾ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

‘ಚುನಾವಣಾ ಆಯೋಗದ ಆದೇಶದಂತೆ ಪ್ರತಿ ವರ್ಷ ಯುವ ಮತದಾರರ ಸೇರ್ಪಡೆಯಾಗುತ್ತರೆ. ಮರಣ ಹೊಂದಿರುವ ಮತದಾರರನ್ನು ಪಟ್ಟಿಯಿಂದ ಹೊರತಗೆಯುವುದು, ಹಾಲಿ ಮತದಾರರ ಹೆಸರು ತಿದ್ದುಪಡಿ, ವರ್ಗಾವಣೆ ಸೇರಿದಂತೆ ವಿವಿಧ ರೀತಿಯ ತಿದ್ದುಪಡಿಗೆ ಮನೆಮನೆಗೆ ಸ್ಥಳೀಯ ಬೂತ್ ಮಟ್ಟದ ಅಧಿಕಾರಿಗಳು ಮತಪಟ್ಟಿ ಪರಿಷ್ಕರಣೆಗೆ ಬರಲಿದ್ದು ನಮೂನೆ 6, 7, 8 ಮತ್ತು 8ಎ ಯಡಿ ಅರ್ಜಿಗಳನ್ನು ಭರ್ತಿಮಾಡಿ ನೀಡಬೇಕು’ ಎಂದು ತಿಳಿಸಿದರು.

ADVERTISEMENT

ತಹಶೀಲ್ದಾರ್ ಅಜಿತ್ ಕುಮಾರ್ ರೈ ಮಾತನಾಡಿ, ‘ಮತದಾರರು ಮತದಾನ ನಡೆಸುವ ಸಂದರ್ಭದಲ್ಲಿ ಹೆಸರು ಇಲ್ಲ ತಿದ್ದುಪಡಿಯಾಗಬೇಕು. ಗಂಡ ಹೆಂಡತಿ ಹೆಸರು ಅದಲು ಬದಲು ಆಗಿದೆ ಎಂದು ಆರೋಪಿಸುತ್ತಾರೆ. ಮತಪಟ್ಟಿ ಪರಿಷ್ಕರಣೆ ಸಂದರ್ಭದಲ್ಲಿ ಸರಿಪಡಿಸಿಕೊಳ್ಳಬೇಕು. ಮತದಾನ ಮಾಡದೆ ಜನಪ್ರತಿನಿಧಿಗಳಿಗೆ ಪ್ರಶ್ನಿಸುವ ನೈತಿಕ ಹಕ್ಕು ಇರುವುದಿಲ್ಲ.ಯುವ ಅರ್ಹ ಮತದಾರರು ನೂತನವಾಗಿ ಹೆಸರನ್ನು ಸೇರ್ಪಡೆಗೆ ಮುಂದಾಗಬೇಕು’ ಎಂದು ಹೇಳಿದರು

ರಾಜ್ಯಶಾಸ್ತ್ರ ಉಪನ್ಯಾಸಕ ಅಮೀರ್‌ ಪಾಷಾ ಮಾತನಾಡಿ, ‘ವಿಶ್ವದ 215 ದೇಶಗಳಲ್ಲಿರುವ ಆಡಳಿತ ವ್ಯವಸ್ಥೆಗಿಂತ ಭಾರತದ ಪ್ರಜಾಪ್ರಭುತ್ವ ವ್ಯವಸ್ಥೆ ವಿಶ್ವಕ್ಕೆ ಮಾದರಿಯಾಗಿದೆ. 21ನೇ ಶತಮಾನದಲ್ಲಿರುವ ನಾವು ಪ್ರಸ್ತುತ ದೇಶದಲ್ಲಿ 80 ಕೋಟಿ ಮತದಾರರಿದ್ದಾರೆ. ಕರ್ನಾಟ ರಾಜ್ಯದಲ್ಲಿ 5.10.60.498 ಮತದಾರರಿದ್ದಾರೆ. ಕಳೆದ ವರ್ಷ 10.19.500 ನೂತನ ಯುವ ಮತದಾರರು ಸೇರ್ಪಡೆಯಾಗಿ ತಮ್ಮ ಹಕ್ಕು ಚಲಾಯಿಸಿದ್ದಾರೆ. ಮತ ಪರಿಷ್ಕರಣೆ ಅಭಿಯಾನದ ಬಗ್ಗೆ ಇತರರಿಗೂ ಮಾಹಿತಿ ನೀಡಬೇಕು’ ಎಂದು ಹೇಳಿದರು.

ಜಿಲ್ಲಾ ಪಂಚಾಯಿತಿ ಲೆಕ್ಕಾಧಿಕಾರಿ ಶೋಭಾ, ಉಪನ್ಯಾಸಕ ಸೋಮಶೇಖರ್, ಪುರಸಭೆ ಸದಸ್ಯ ಬಾಲರಾಜ್, ಮುಖಂಡರಾದ ಅಂಬರೀಶ್‌, ಲಕ್ಷ್ಮೀನಾರಾಯಣ ಮಾತನಾಡಿದರು.

ತಾಲ್ಲೂಕು ಪಂಚಾಯಿತಿ ಕಾರ್ಯ ನಿರ್ವಹಣಾಧಿಕಾರಿ ಮುರುಡಯ್ಯ, ಪುರಸಭೆ ಮುಖ್ಯಾಧಿಕಾರಿಗಳಾದ ಹನುಮಂತೇಗೌಡ, ನಾಗರಾಜ್, ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಕೃಷ್ಣಮೂರ್ತಿ, ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಚನ್ನಬಸಪ್ಪ, ಪುರಸಭೆ ಸದಸ್ಯರಾದ ಬಾಂಬೆ ನಾರಾಯಣಸ್ವಾಮಿ, ನಾಗೇಶ್, ಪುಷ್ಪ, ಚೈತ್ರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.