ADVERTISEMENT

ದೇವನಹಳ್ಳಿ | ಬಾಂಬ್ ಇವೆ ಎಂದ ಪ್ರಯಾಣಿಕ: ಎರಡು ತಾಸು ವಿಮಾನ ಹಾರಾಟ ಸ್ಥಗಿತ!

​ಪ್ರಜಾವಾಣಿ ವಾರ್ತೆ
Published 30 ಜನವರಿ 2026, 21:27 IST
Last Updated 30 ಜನವರಿ 2026, 21:27 IST
<div class="paragraphs"><p>ಇಂಡಿಗೊ</p></div>

ಇಂಡಿಗೊ

   

ದೇವನಹಳ್ಳಿ: ಕೆಂಪೇಗೌಡ ಅಂತರ ರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಗುರುವಾರ ಅಹಮದಾಬಾದ್‌ಗೆ ತೆರಳುತ್ತಿದ್ದ ಇಂಡಿಗೊ ವಿಮಾನದ ಪ್ರಯಾಣಿಕರೊಬ್ಬರು ವಿಮಾನ ಏರುವ ಸಮಯದಲ್ಲಿ ತನ್ನ ಬಳಿ ಎರಡು ಬಾಂಬ್ ಇವೆ ಎಂದು ತಮಾಷೆಗಾಗಿ ಹೇಳಿದ್ದನ್ನು ಗಂಭೀರವಾಗಿ ಪರಿಗಣಿಸಿದ ಭದ್ರತಾ ಸಿಬ್ಬಂದಿ ತಪಾಸಣೆಗೆ ಮುಂದಾದ ಕಾರಣ ಆತಂಕ ಸೃಷ್ಟಿಯಾಗಿತ್ತು. ಅಲ್ಲದೇ ವಿಮಾನ ಸಂಚಾರಕ್ಕೆ ತೀವ್ರ ವ್ಯತ್ಯಯ ಉಂಟಾಯಿತು.

ಇಂಡಿಗೊ ವಿಮಾನ ಸಂಖ್ಯೆ 6ಇ–586ಕ್ಕೆ ಅಂತಿಮ ಬೋರ್ಡಿಂಗ್ ನಡೆಯುತ್ತಿದ್ದ ವೇಳೆ ಗೇಟ್ ಸಂಖ್ಯೆ 30ರ ಬಳಿ ಪ್ರಯಾಣಿಕರೊಬ್ಬರು ತನ್ನ ಬಳಿ ಎರಡು ಸಣ್ಣ ಬಾಂಬ್‌ಗಳಿವೆ ಎಂದು ಹೇಳಿದ್ದಾರೆ. ಇದನ್ನು ಗಂಭೀರವಾಗಿ ಪರಿಗಣಿಸಿದ ಕೇಂದ್ರ ಕೈಗಾರಿಕಾ ಭದ್ರತಾ ಪಡೆ (ಸಿಐಎಸ್‌ಎಫ್) ತಕ್ಷಣವೇ ಭದ್ರತಾ ತಪಾಸಣೆಗೆ ಮುಂದಾಯಿತು. 

ADVERTISEMENT

ವಿಮಾನದಲ್ಲಿದ್ದ ಪ್ರಯಾಣಿಕರನ್ನು ಕೆಳಗಿಳಿಸಿದ ನಂತರ ಏರ್‌ಬಸ್ ಎ–320 ವಿಮಾನವನ್ನು ಪ್ರತ್ಯೇಕ ಐಸೊಲೇಷನ್ ಪ್ರದೇಶಕ್ಕೆ ಕೊಂಡೊಯ್ಯಲಾಯಿತು. ಬಾಂಬ್ ಪತ್ತೆ ದಳಗಳು ವಿಮಾನ ಹಾಗೂ ಸರಕು ಸಾಮಗ್ರಿಗಳನ್ನು ಸಂಪೂರ್ಣವಾಗಿ ಪರಿಶೀಲಿಸಿದವು. ಪರಿಶೀಲನೆಯಲ್ಲಿ ಯಾವುದೇ ಸ್ಫೋಟಕ ವಸ್ತುಗಳು ಪತ್ತೆಯಾಗಲಿಲ್ಲ. ಇದರಿಂದ ಎಲ್ಲರೂ ನಿಟ್ಟುಸಿರು ಬಿಟ್ಟರು. ಆದರೆ, ಈ ಘಟನೆಯಿಂದ ವಿಮಾನ ಟೇಕ್‌ ಆಫ್‌ ಆಗಲು ಸುಮಾರು ಎರಡು ತಾಸು ವಿಳಂಬವಾಯಿತು.

ಈ ಘಟನೆ ಇಂಡಿಗೊ ಸಂಸ್ಥೆಯ ಬೆಳಗಿನ ವೇಳಾಪಟ್ಟಿಯ ಮೇಲೂ ಪರಿಣಾಮ ಬೀರಿತು. ಬಾಂಬ್ ಕುರಿತು ಹಗುರವಾಗಿ ಮಾತನಾಡಿದ ಆರೋಪದಡಿ ಬೆಂಗಳೂರಿನ 52 ವರ್ಷದ ಸಿದ್ಧ ಉಡುಪು ವ್ಯಾಪಾರಿಯನ್ನು ಪೊಲೀಸರು ಬಂಧಿಸಿದರು.

ನಂತರ ಠಾಣಾ ಜಾಮೀನಿನಲ್ಲಿ ಬಿಡುಗಡೆ ಮಾಡಲಾಗಿದೆ. ವಿಮಾನದ ಭದ್ರತೆಯನ್ನು ಅಪಾಯಕ್ಕೆ ಒಡ್ಡಿದ ಆರೋಪದಡಿ ಭಾರತೀಯ ವಿಮಾನ ಕಾಯ್ದೆಯಡಿ ಪ್ರಯಾಣಿಕನ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.

ಭದ್ರತಾ ವಿಚಾರದಲ್ಲಿ ಭಾರತದಲ್ಲಿ ಶೂನ್ಯ ಸಹಿಷ್ಣುತೆ ನೀತಿ ಜಾರಿಯಲ್ಲಿದೆ. ಈ ಹಿಂದೆ ದೆಹಲಿಯಲ್ಲಿ ಹಾಗೂ ಗೋವಾದಲ್ಲಿ ನಡೆದ ಇಂತಹ ಘಟನೆಗಳು ಗಮಟೆಗಟ್ಟಲೇ ವಿಮಾನ ಸಂಚಾರ ವ್ಯತ್ಯಯಕ್ಕೆ ಕಾರಣವಾಗಿದ್ದವು. ಕೆಲ ಪ್ರಯಾಣಿಕರನ್ನು ಬ್ಲ್ಯಾಕ್‌ಲಿಸ್ಟ್‌ಗೆ ಕೂಡ ಸೇರಿಸಲಾಗಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.