ADVERTISEMENT

ಊಟಕ್ಕಾಗಿ ಪರದಾಡಿದ ಜನರು

ಪಾರ್ಸಲ್‌ಗೆ ಅವಕಾಶ ನೀಡಲು ಸಾರ್ವಜನಿಕರ ಒತ್ತಾಯ

​ಪ್ರಜಾವಾಣಿ ವಾರ್ತೆ
Published 25 ಏಪ್ರಿಲ್ 2021, 4:01 IST
Last Updated 25 ಏಪ್ರಿಲ್ 2021, 4:01 IST
ವಿಜಯಪುರದ ಗಾಂಧಿಚೌಕದಲ್ಲಿ ಲಾಕ್‌ಡೌನ್ ಪರಿಣಾಮವಾಗಿ ಬಂದ್ ಮಾಡಿದ್ದರಿಂದ ಹೊಟೇಲ್‌ಗೆ ಹೋಗಿ ವಾಪಸ್ಸು ಬರುತ್ತಿರುವ ಜನ
ವಿಜಯಪುರದ ಗಾಂಧಿಚೌಕದಲ್ಲಿ ಲಾಕ್‌ಡೌನ್ ಪರಿಣಾಮವಾಗಿ ಬಂದ್ ಮಾಡಿದ್ದರಿಂದ ಹೊಟೇಲ್‌ಗೆ ಹೋಗಿ ವಾಪಸ್ಸು ಬರುತ್ತಿರುವ ಜನ   

ವಿಜಯಪುರ: ಸರ್ಕಾರ ಲಾಕ್‌ಡೌನ್ ಘೋಷಣೆ ಮಾಡಿದ್ದರಿಂದ ಹೊಟೇಲ್‌ಗಳಲ್ಲಿ ಬೆಳಿಗ್ಗೆ 10 ಗಂಟೆಯವರೆಗೆ ಮಾತ್ರವೇ ಪಾರ್ಸಲ್ ನೀಡಲು ಅವಕಾಶ ನೀಡಿರುವುದರಿಂದ ಮಧ್ಯಾಹ್ನ ಹಾಗೂ ಸಂಜೆ ಊಟ ಸಿಗದೆ ಕೆಲವು ಮಂದಿ ಪರದಾಡುತ್ತಿದ್ದ ದೃಶ್ಯಗಳು ಕಂಡು ಬಂದವು.

ಬೆಳಗಿನ ವೇಳೆ ಹೊಟೇಲ್‌ಗಳಲ್ಲಿ ಪಾರ್ಸಲ್ ತೆಗೆದುಕೊಂಡಿದ್ದ ಕೆಲ ವಲಸೆ ಕಾರ್ಮಿಕರು ಸೇರಿದಂತೆ ಬೀದಿಗಳಲ್ಲಿರುವ ಕೆಲವು ಮಂದಿ ಮಧ್ಯಾಹ್ನ ಹೊಟೇಲ್‌ಗಳು ಬಂದ್ ಆಗಿರುವುದನ್ನು ಕಂಡು ಅಂಗಡಿಗಳ ಮುಂದೆ ಉಪವಾಸ ಮಲಗಿಕೊಂಡಿದ್ದರು.

ಕಳೆದ ಬಾರಿ ಲಾಕ್‌ಡೌನ್ ಆದ ಸಂದರ್ಭದಲ್ಲಿ ಕೆಲ ಸಂಘ ಸಂಸ್ಥೆಗಳು, ದಾನಿಗಳು, ಆಹಾರ ಪಾಕೇಟ್‌ಗಳನ್ನು ವಿತರಣೆ ಮಾಡುತ್ತಿದ್ದರು. ಕೆಲವರು ಆಹಾರ ಧಾನ್ಯಗಳ ಕಿಟ್ ವಿತರಣೆ ಮಾಡಿದ್ದರು. ಇದರಿಂದ ಜನರಿಗೆ ಊಟಕ್ಕೆ ತೊಂದರೆಯಾಗಿರಲಿಲ್ಲ. ಶುಕ್ರವಾರದಿಂದಲೇ ಅಂಗಡಿಗಳನ್ನು ಬಂದ್ ಮಾಡಿದ್ದರಿಂದ ಸಂಜೆಯ ವೇಳೆ ಬೀದಿ ಬದಿಯಲ್ಲಿ ತಳ್ಳುವ ಗಾಡಿಗಳಲ್ಲಿ ಆಹಾರ ಮಾರಾಟ ಮಾಡುತ್ತಿದ್ದ ಬಂಡಿಗಳ ಬಳಿಯಲ್ಲಿ ಊಟ ಪಡೆದುಕೊಂಡು ಹಸಿವು ನೀಗಿಸಿಕೊಳ್ಳುತ್ತಿದ್ದರು. ಹೊಟೇಲ್‌ಗಳಿಂದ ಪಾರ್ಸಲ್ ಮಾಡಲು ಅವಕಾಶ ನೀಡಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

ADVERTISEMENT

ಊಟಕ್ಕಾಗಿ ಅಲೆದಾಟ

‘ಮಾರುಕಟ್ಟೆಯಲ್ಲಿ ಮೂಟೆಗಳನ್ನು ಹೊತ್ತು ಜೀವನ ಮಾಡುತ್ತಿದ್ದೆ. ಮನೆ ಇಲ್ಲ, ಸಂತೆ ಮೈದಾನದಲ್ಲಿರುವ ಶೆಡ್‌ನಲ್ಲೆ ರಾತ್ರಿ ಹೊತ್ತು ಮಲಗುತ್ತೇನೆ. ಲಾಕ್‌ಡೌನ್ ಮಾಡಿರುವುದರಿಂದ ಸಂತೆಯನ್ನು ರದ್ದು ಮಾಡಿದ್ದಾರೆ. ಕೂಲಿ ಕೆಲಸವೂ ಇಲ್ಲ, ಬಂಡಿಗಳಿಂದ ಊಟ ತರುತ್ತಿದ್ದೆ. ಈಗ ಅವು ಇಲ್ಲ, ಊಟಕ್ಕೋಸ್ಕರ ಸುತ್ತಾಡಿ ಬಂದು ಕುಳಿತಿದ್ದೇನೆ’ ಎಂದು ಕಾರ್ಮಿಕ ಹನುಮಂತರಾಯಪ್ಪ ತಮ್ಮ ನೋವು ತೋಡಿಕೊಂಡರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.