ADVERTISEMENT

ಹೊಸಕೋಟೆಗೆ ಶಾಶ್ವತ ನೀರಾವರಿ: ಎಂಟಿಬಿ ಭರವಸೆ

​ಪ್ರಜಾವಾಣಿ ವಾರ್ತೆ
Published 19 ನವೆಂಬರ್ 2019, 14:40 IST
Last Updated 19 ನವೆಂಬರ್ 2019, 14:40 IST
ನಂದಗುಡಿ ಹೋಬಳಿ ಇ.ಹೊಸಹಳ್ಳಿ ಗ್ರಾಮದಲ್ಲಿ ಎಂಟಿಬಿ ನಾಗರಾಜ್ ಮತ್ತು ಕಟ್ಟಾ ಸುಬ್ರಮಣ್ಯ ನಾಯ್ಡು ಅವರಿಗೆ ಗ್ರಾಮಸ್ಥರು ಮೈಸೂರು ಪೇಟ ತೊಡಿಸಿ ಸನ್ಮಾನಿಸಿದರು
ನಂದಗುಡಿ ಹೋಬಳಿ ಇ.ಹೊಸಹಳ್ಳಿ ಗ್ರಾಮದಲ್ಲಿ ಎಂಟಿಬಿ ನಾಗರಾಜ್ ಮತ್ತು ಕಟ್ಟಾ ಸುಬ್ರಮಣ್ಯ ನಾಯ್ಡು ಅವರಿಗೆ ಗ್ರಾಮಸ್ಥರು ಮೈಸೂರು ಪೇಟ ತೊಡಿಸಿ ಸನ್ಮಾನಿಸಿದರು   

ಸೂಲಿಬೆಲೆ: 10 ಸಾವಿರ ರೂಪಾಯಿಗಳ ಸಾಲ ಮನ್ನಾ ಮಾಡುವ ಯೋಜನೆಗಳಿಂದ ರೈತರ ಕಷ್ಟ ಪರಿಹಾರ ಆಗುವುದಿಲ್ಲ, ರೈತರಿಗೆ ಶಾಶ್ವತ ಪರಿಹಾರವನ್ನು ನೀಡುವ ಕೆಲಸವಾಗಬೇಕು ಎಂದು ಹೊಸಕೋಟೆ ವಿಧಾನ ಸಭಾ ಉಪ ಚುನಾವಣೆಯ ಬಿಜೆಪಿ ಅಭ್ಯರ್ಥಿ ಎಂಟಿಬಿ ನಾಗರಾಜ್ ಪರೋಕ್ಷವಾಗಿ ಮಾಜಿ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಅವರ ಹೆಸರು ಹೇಳದೆ ಟೀಕಿಸಿದರು.

ನಂದಗುಡಿ ಹೋಬಳಿಯ ಇಟ್ಟಸಂದ್ರ ಗ್ರಾಮದಲ್ಲಿ ಅವರು ಮಾತನಾಡಿದರು.

ನಾನು ಕ್ಷೇತ್ರದ ಅಭಿವೃದ್ಧಿಗಾಗಿ ರಾಜೀನಾಮೆ ನೀಡಿದ್ದೇ ಹೊರತು, ನನ್ನ ಸ್ವಾರ್ಥಕ್ಕಾಗಿ ಅಲ್ಲ. ಇಂದು ದೊಡ್ಡ ದೊಡ್ಡ ಭಾಷಣ ಮಾಡುವ ನಾಯಕರು ನನ್ನ ಬಳಿ ಚುನಾವಣೆಗಳಿಗೆ ಹಣದ ಸಹಾಯವನ್ನು ಪಡೆದವರು. ಇವತ್ತಿನ ದಿನ ಅವರು ನನ್ನ ವಿರುದ್ಧ ಮಾತನಾಡುತ್ತಿದ್ದಾರೆ’ ಎಂದು ಇಟ್ಟಸಂದ್ರ ಗ್ರಾಮದ ವೇಣುಗೋಪಾಲ ಸ್ವಾಮಿ ದೇವರ ಮೇಲೆ ಪ್ರಮಾಣ ಮಾಡಿ ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರ ಹೆಸರನ್ನು ಪ್ರಸ್ತಾಪಿಸದೆ ಕಿಡಿಕಾರಿದರು.

ADVERTISEMENT

ನಾನು ಹೆಚ್ಚಾಗಿ ತಿರುಪತಿ ವೆಂಕಟೇಶ್ವರ ಸ್ವಾಮಿ ಮತ್ತು ಧರ್ಮಸ್ಥಳ ಮಂಜುನಾಥ ಸ್ವಾಮಿಯನ್ನು ನಂಬುತ್ತೇನೆ. ನನಗೆ ದೈವದ ಮೇಲೆ ತುಂಬಾ ನಂಬಿಕೆ ಇದೆ ಆದರೆ ನಾನು ವರ್ಷದಲ್ಲಿ ಎರಡು ಬಾರಿ ಎರಡು ದೇವಸ್ಥಾನಗಳಿಗೆ ಭೇಟಿ ನೀಡುತ್ತೇನೆ. ಆದರೆ ಕೆಲವರು ದಿನಾಲು ದೇವಸ್ಥಾನಗಳಿಗೆ ಭೆಟಿ ನೀಡುತ್ತಾರೆ. ಇದರಿಂದ ಯಾವುದೇ ಉಪಯೋಗವಿಲ್ಲ. ಮನಸ್ಸು ಪರಿಶುದ್ಧವಾಗಿರಬೇಕು ಎಂದು ಪರೋಕ್ಷವಾಗಿ ಶರತ್ ಬಚ್ಚೇಗೌಡ ಅವರ ದೇವಾಲಯ ಮತ್ತು ಮಠಗಳ ಭೇಟಿ ಕುರಿತು ಕುಟುಕಿದರು.

ಮಾಜಿ ಸಚಿವ ಕಟ್ಟಾ ಸುಬ್ರಹ್ಮಣ್ಯ ನಾಯ್ಡು ಮಾತನಾಡಿ, ‘ನಿಜವಾದ ಸ್ವಾಭಿಮಾನಿ ನಿಮ್ಮ ಕ್ಷೇತ್ರದ ನಾಯಕ ಎಂಟಿಬಿ ನಾಗರಾಜ್. ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದ ಮೈತ್ರಿ ಸರ್ಕಾರದ ಅವಧಿಯಲ್ಲಿ ಕ್ಷೇತ್ರದ ಕಾಳಜಿ ಹೊಂದಿದ್ದ, ಎಂಟಿಬಿ ನಾಗರಾಜ್ ಅವರ ಮಾತಿಗೆ ಕವಡೆ ಕಿಮ್ಮತ್ತು ಇಲ್ಲದ ಕಾರಣ ಅವರ ಸ್ವಾಭಿಮಾನಕ್ಕೆ ಧಕ್ಕೆಯಾಗಿ ಸಚಿವ ಸ್ಥಾನ ಮತ್ತು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದರು’ ಎಂದರು.

‘ಬಿಜೆಪಿ ಸರ್ಕಾರದ ಅವಧಿಯಲ್ಲಿ ನರಸಾಪುರ ಮತ್ತು ವೇಮಗಲ್ ಕೈಗಾರಿಕಾ ಪ್ರದೇಶಗಳನ್ನು ನಿರ್ಮಾಣ ಮಾಡಲಾಯಿತು. ಮುಂದಿನ ದಿನಗಳಲ್ಲಿ ನಂದಗುಡಿ ಪ್ರದೇಶದಲ್ಲಿಯೂ ಕೈಗಾರಿಕೆಗಳನ್ನು ಸ್ಥಾಪಿಸಲಾಗುವುದು. ಇದರಿಂದ ಇಲ್ಲಿನ ಜನರ ಜೀವನಮಟ್ಟ ಸುಧಾರಿಸಲು ಸಹ ಕಾರಣವಾಗಿದೆ’ ಎಂದರು.

ಪ್ರಚಾರ ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯಿತಿ ಸದಸ್ಯ ಸಿ.ನಾಗರಾಜ್, ನಾಗೇಶ್ ಗೌಡ, ನಾಗರಾಜ್ ಹಾಗೂ ವೆಂಕಟೇಶ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.