ADVERTISEMENT

ಎತ್ತಂಗಡಿ ಭೀತಿಯಲ್ಲೇ ಬದುಕು

ನಂದಗುಡಿ ದೇವಸ್ಥಾನದ ಖಾಲಿ ಜಾಗವೇ ಈ ಕುಟುಂಬಗಳಿಗೆ ಆಸರೆ

ಸಾಧಿಕ್‌ ಪಾಷಾ
Published 23 ಮಾರ್ಚ್ 2021, 2:34 IST
Last Updated 23 ಮಾರ್ಚ್ 2021, 2:34 IST
ನಂದಗುಡಿಯಲ್ಲಿ ಗುಡಿಸಲು ನಿರ್ಮಿಸಿಕೊಂಡು ಜೀವನ ದೂಡುತ್ತಿರುವ ಕಮಲಮ್ಮ ಬಿದಿರಿನ ಬುಟ್ಟಿ ಹೆಣಿಯುತ್ತಿರುವ ಕಾಯಕದಲ್ಲಿ
ನಂದಗುಡಿಯಲ್ಲಿ ಗುಡಿಸಲು ನಿರ್ಮಿಸಿಕೊಂಡು ಜೀವನ ದೂಡುತ್ತಿರುವ ಕಮಲಮ್ಮ ಬಿದಿರಿನ ಬುಟ್ಟಿ ಹೆಣಿಯುತ್ತಿರುವ ಕಾಯಕದಲ್ಲಿ   

ಸೂಲಿಬೆಲೆ: ಚುನಾವಣೆ ಗುರುತಿನ ಚೀಟಿ, ಆಧಾರ್ ಕಾರ್ಡ್ ಇದ್ದರೂ ಪಡಿತರ ಚೀಟಿ ಇಲ್ಲಿವರೆಗೆ ಸಿಗಲಿಲ್ಲ. ಚುನಾವಣೆ ಸಂದರ್ಭದಲ್ಲಿ ಬರುವ ಜನಪ್ರತಿನಿಧಿಗಳು ಪಡಿತರ ಚೀಟಿ ಮಾಡಿಸಿಕೊಡುವ ಭರವಸೆ ನೀಡಿ ಹೋಗುತ್ತಾರೆ. ಆದರೆ, ಇಂದಿನವರೆಗೂ ಭರವಸೆಯಾಗಿಯೇ ಉಳಿದಿದೆ ಎನ್ನುತ್ತಾರೆ ಬಿದಿರಿನ ಬುಟ್ಟಿ ಹೆಣೆಯುವ ವೃಯೋವೃದ್ಧೆ ನಂದಗುಡಿ ಕಮಲಮ್ಮ.

’ಸುಮಾರು 20 ವರ್ಷಗಳ ಹಿಂದೆ ಪಕ್ಕದ ಆಂಧ್ರಪ್ರದೇಶದ ಪುಂಗನೂರಿನಿಂದ ನಿರಾಶ್ರಿತರಾಗಿ ನಂದಗುಡಿಗೆ ಬಂದೆವು. ಇಲ್ಲಿ ದೇವಸ್ಥಾನದ ಖಾಲಿ ಸ್ಥಳದಲ್ಲಿ ಗುಡಿಸಲು ನಿರ್ಮಿಸಿಕೊಂಡು ಬಿದಿರು ಮತ್ತು ಪ್ಲಾಸ್ಟಿಕ್ ಬುಟ್ಟಿಗಳನ್ನು ಹೆಣೆಯುವ ಕಾಯಕದೊಂದಿಗೆ ಜೀವನ ಸಾಗಿಸುತ್ತಿದ್ದೇವೆ. ಬುಟ್ಟಿಗಳನ್ನು ಹೆಣೆದು ಹೊಸಕೋಟೆಯಲ್ಲಿ ಸಗಟು ದರದಲ್ಲಿ ಮಾರುತ್ತೇವೆ. ಬಂದ ಹಣದಲ್ಲಿ ಜೀವನ ಸಾಗಿಸಲಾಗುತ್ತಿದೆ’ ಎನ್ನುತ್ತಾರೆ ಕಮಲ್ಲಮ್ಮನ ಪತಿ ಗಂಗಾಧರ.

ಇದೇ ಸ್ಥಳದಲ್ಲಿ ತುಮಕೂರಿನ ಶಿವಮ್ಮ ಅವರು ಸುಮಾರು ವರ್ಷಗಳಿಂದ ಗುಡಿಸಲು ನಿರ್ಮಿಸಿಕೊಂಡು ಜೀವನ ನಡೆಸುತ್ತಿದ್ದಾರೆ. ಇವರಿಗೆ ಮೂರ್ಛೆ ಕಾಯಿಲೆ ಇದೆ ಎಂದು ಸಣ್ಣ ಕೂಸಿನೊಂದಿಗೆ ಇವರ ಪತಿ ಇಲ್ಲಿ ತಂದು ಬಿಟ್ಟು ಹೋದವರು ಇಲ್ಲಿವರೆಗೂ ಬಂದಿಲ್ಲ ಎನ್ನುತ್ತಾರೆ. ಸರ್ಕಾರಿ ಕಚೇರಿಗಳಲ್ಲಿ ಸ್ವಚ್ಛತೆ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿರುವ ಇವರು ಪುತ್ರನಿಗೆ ಪಿಯುಸಿವರೆಗೆ ವಿದ್ಯಾಭ್ಯಾಸ ನೀಡಿದ್ದಾರೆ. ಪುತ್ರ ಖಾಸಗಿ ಕೈಗಾರಿಕೆಯಲ್ಲಿ ದುಡಿಯುತ್ತಿದ್ದಾನೆ. ಆಧಾರ್ ಕಾರ್ಡ್, ರೇಷನ್ ಕಾರ್ಡ್ ಇದೆ. ಸೂರಿಲ್ಲದೇ ಗುಡಿಸಲೇ ಇವರಿಗೆ ಆಸರೆಯಾಗಿದೆ.

ADVERTISEMENT

ಸುಮಾರು ಹತ್ತಾರು ಕುಟುಂಬಗಳು ಗುಡಿಸಲಗಳನ್ನು ನಿರ್ಮಿಸಿಕೊಂಡು ಬುಟ್ಟಿ ಹೆಣಿಯುವ ಹಾಗೂ ಇನ್ನಿತರ ಜೀವನೋಪಾಯಗಳಿಂದ ಬದುಕು ದೂಡುತ್ತಿರುವ ಇಲ್ಲಿನ ಕೆಲ ಕುಟುಂಬಗಳಿಗೆ ಪಡಿತರ ಚೀಟಿ ಸೇರಿದಂತೆ ಇನ್ನಿತರ ಸರ್ಕಾರದ ಯೋಜನೆಗಳು ತಲುಪಿಲ್ಲ. ಗುಡಿಸಲಿನ ನೆಲೆಯೂ ಯಾವಾಗ ತಪ್ಪಿ ಹೋಗುತ್ತದೆಯೋ ಎನ್ನುವ ಅತಂತ್ರ ಸ್ಥಿತಿಯಲ್ಲಿ ಬದುಕು ದೂಡುತ್ತಿದ್ದಾರೆ.

ಪಡಿತರ ಚೀಟಿಗೆ ಅರ್ಜಿ ಸ್ವೀಕರಿಸಲು ಸರ್ಕಾರ ಸೂಚಿಸಿದೆ. ಭೇಟಿ ನೀಡಿ ಪಡಿತರ ಚೀಟಿಗೆ ಅರ್ಜಿ ಹಾಕಿಸಲು ವ್ಯವಸ್ಥೆ ಮಾಡಲಾಗುವುದು ಎನ್ನುತ್ತಾರೆ ಆಹಾರ ನಿರೀಕ್ಷಕ ಶಿವಕುಮಾರ್.

ಸರ್ಕಾರಿ ಗೋಮಾಳದಲ್ಲಿ ಮನೆ ಹಾಕ್ಕೊಂಡಿದ್ದರೆ ಮನೆ ಮಂಜೂರು ಮಾಡಲು ಅವಕಾಶವಿತ್ತು. ದೇವಸ್ಥಾನದ ಸ್ಥಳದಲ್ಲಿ ಇರುವುದರಿಂದ ಏನು ಮಾಡಲು ಅವಕಾಶವಿಲ್ಲ ಎನ್ನುತ್ತಾರೆ ಪಿಡಿಒ ಪುಷ್ಪ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.