ದೊಡ್ಡಬಳ್ಳಾಪುರದಲ್ಲಿ ಜಿಲ್ಲಾಡಳಿತ, ಪೊಲೀಸ್ ಇಲಾಖೆ ವತಿಯಿಂದ ಗೌರಿ ಗಣೇಶ, ಈದ್ ಮಿಲಾದ್ ಶಾಂತಿ ಸಭೆ ನಡೆಯಿತು
ದೊಡ್ಡಬಳ್ಳಾಪುರ: ಜಿಲ್ಲೆಯಲ್ಲಿ ಪಿಒಪಿ ಗಣೇಶ ಮೂರ್ತಿ ಪ್ರತಿಷ್ಠಾಪನೆ ನಿಷೇಧಿಸಲಾಗಿದೆ. ಪ್ರತಿಷ್ಠಾಪನೆಗೆ ಕಡ್ಡಾಯವಾಗಿ ಅನುಮತಿ ಪಡೆಯುವುದರೊಂದಿಗೆ ಪರಿಸರ ಸ್ನೇಹಿಯಾಗಿ ಗಣೇಶೋತ್ಸವ ಆಚರಿಸಬೇಕು ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿ ಎ.ಬಿ.ಬಸವರಾಜು ಹೇಳಿದರು.
ನಗರದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪೊಲೀಸ್ ಇಲಾಖೆ ವತಿಯಿಂದ ನಡೆದ ಗೌರಿ ಗಣೇಶ, ಈದ್ ಮಿಲಾದ್ ಶಾಂತಿ ಸಭೆಯಲ್ಲಿ ಮಾತನಾಡಿದರು.
ಪರಿಸರಕ್ಕೆ ಮಾರಕವಾಗಿರುವ ಪಿಒಪಿ ಗಣೇಶ ಮೂರ್ತಿಗಳನ್ನು ಪ್ರತಿಷ್ಠಾಪಿಸುವುದನ್ನು ಕಡ್ಡಾಯವಾಗಿ ನಿಷೇಧ ಮಾಡಲಾಗಿದೆ. ರಾಸಾಯನಿಕಯುಕ್ತ ಬಣ್ಣದ ಗಣಪ ಬಳಸಬಾರದು. ಮಣ್ಣಿನ ಗಣಪಗಳಿಗೆ ಆದ್ಯತೆ ನೀಡಬೇಕು. ಗಣೇಶ ಪ್ರತಿಷ್ಠಾಪನೆಗೆ ಅನುಮತಿ ಕಡ್ಡಾಯವಾಗಿ ಪಡೆಯಬೇಕು. ಅವಘಡ ಸಂಭವಿಸಿದರೆ ಮುಖ್ಯಸ್ಥರೇ ಜವಾಬ್ದಾರಿಯಾಗಿರುತ್ತಾರೆ. ಪರಿಸರಕ್ಕೆ ಧಕ್ಕೆಯಾಗದಂತೆ ವಿಸರ್ಜನೆ ಮಾಡಬೇಕು. ಡಿಜೆಗೆ ಸರ್ಕಾರದ ಸೂಚನೆ ಪ್ರಕಾರ ಅನುಮತಿ ಪಡೆಯಬೇಕು. ಎಲ್ಲ ಇಲಾಖೆಗಳ ಅನುಮತಿ ಏಕ ಗವಾಕ್ಷಿ ಮೂಲಕ ನೀಡಲಾಗುವುದು. ಪ್ರತಿ ವರ್ಷದಂತೆ ಸೌಹಾರ್ದಯುತವಾಗಿ ಹಬ್ಬ ಆಚರಿಸಬೇಕು. ಯಾರೊಬ್ಬರ ಮನಸ್ಸಿಗೂ ನೋವಾಗದಂತೆ ಪ್ರೀತಿ, ವಿಶ್ವಾಸದಿಂದ ಹಬ್ಬ ಆಚರಿಸಬೇಕು ಎಂದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಕೆ.ಬಾಬಾ ಮಾತನಾಡಿ, ಜಿಲ್ಲೆಯ ಜನರ ಸುರಕ್ಷತೆ ಮುಖ್ಯ. ಆಚರಣೆ ಸಂತೋಷದಿಂದ ಕೂಡಿರಬೇಕು. ಸರ್ಕಾರದ ನಿಯಮಾನುಸರ ಆಚರಿಸುವುದು ಸೂಕ್ತ. ಪರಿಸರಕ್ಕೆ ಹಾನಿಯಾಗದ ಮಣ್ಣಿನ ಗಣಪ ಬಳಸಬೇಕು. ಗಣೇಶ ವಿಸರ್ಜನೆಯನ್ನು ತಾಲ್ಲೂಕು ಪಂಚಾಯಿತಿ, ನಗರಸಭೆ, ಪುರಸಭೆಗಳಿಂದ ಗುರುತಿಸಿದ ಸ್ಥಳಗಳಲ್ಲಿಯೇ ವಿಸರ್ಜಿಸಬೇಕು. ಡಿಜೆ ಬಳಕೆ ವಿಚಾರದಲ್ಲಿ ಸರ್ಕಾರ ಹೊರಡಿಸಿರುವ ಸುತ್ತೋಲೆ ಪಾಲಿಸಲೇಬೇಕು ಎಂದರು.
ಸಭೆಯಲ್ಲಿ ಸೌಂಡ್ ಸಿಸ್ಟಂ ಮಾಲೀಕರು ಡಿಜೆಗೆ ಅವಕಾಶ ನೀಡಬೇಕು ಎಂದು ಮನವಿ ಮಾಡಿದರು. ಇದಕ್ಕೆ ಉತ್ತರಿಸಿದ ಎಸ್ಪಿ ಬಾಬಾ, ರಾಜ್ಯದಾದ್ಯಂತ ಸರ್ಕಾರದ ಆದೇಶ ಇದೆ. ನಿರ್ದಿಷ್ಟವಾದ ಸೂಚನೆಗಳಿವೆ. ಇದರ ಪ್ರಕಾರ ಪಾಲನೆ ಮಾಡಬೇಕು ಎಂದರು.
ಈದ್ ಮಿಲಾದ್ ಕುರಿತಾಗಿ ತಾಲ್ಲೂಕಿನಲ್ಲಿ ಈವರೆಗೆ ಯಾವುದೇ ಅಹಿತಕರ ಘಟನೆ ನಡೆದ ಇತಿಹಾಸವಿಲ್ಲ. ಹಿಂದೂ–ಮುಸ್ಲಿಮರು ಅಣ್ಣ ತಮ್ಮಂದಿರಂತೆ ಇದ್ದೇವೆ. ಈದ್ ಮಿಲಾದ್ ದಿನದಂದು ನಗರದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡಲಾಗುವುದು. ಸಿಹಿ ಹಂಚಿ ಅನ್ನಸಂತರ್ಪಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು ಎಂದು ಮುಸ್ಲಿಂ ಸಮುದಾಯದ ಮುಖಂಡರು ತಿಳಿಸಿದರು.
ಪೌರಾಯುಕ್ತ ಕಾರ್ತಿಕೇಶ್ವರ ಮಾತನಾಡಿ, ನಗರ ವ್ಯಾಪ್ತಿಯಲ್ಲಿ ಗಣೇಶ ವಿಸರ್ಜನೆಗೆ ತಾತ್ಕಾಲಿಕ ಹೊಂಡ ತೆರೆಯಲಾಗುವುದು. ಬೆಸ್ಕಾಂ, ಅಗ್ನಿಶಾಮಕ, ಪೊಲೀಸ ಇಲಾಖೆಗಳಿಂದ ಏಕ ಗವಾಕ್ಷಿ ಪದ್ಧತಿ ಮೂಲಕ ಅನುಮತಿ ನೀಡಲಾಗುವುದು ಎಂದರು.
ಸಭೆಯಲ್ಲಿ ಉಪವಿಭಾಗಾಧಿಕಾರಿ ಎನ್.ದುರ್ಗಾಶ್ರೀ, ತಹಶೀಲ್ದಾರ್ ವಿಭಾ ವಿದ್ಯಾರಾಥೋಡ್, ಡಿವೈಎಸ್ಪಿ ರವಿ, ಜಗದೀಶ್, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಮಂಜುನಾಥ ಹರ್ತಿ, ನಗರಸಭೆ ಅಧ್ಯಕ್ಷೆ ಕೆ.ಸುಮಿತ್ರಾ,ವಿವಿಧ ಪೊಲೀಸ್ ಠಾಣೆಗಳ ಇನ್‌ಸ್ಪೆಕ್ಟರ್ ಎಂ.ಬಿ.ನವೀನ್‌ಕುಮಾರ್, ಅಮರೇಶ್‌ಗೌಡ, ಸಾದಿಕ್ ಪಾಷಾ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.