ಡಾ.ನಾ.ಸೋಮೇಶ್ವರ
ದೊಡ್ಡಬಳ್ಳಾಪುರ: ಕಷ್ಟುಪಟ್ಟು ಓದುವುದಕ್ಕಿಂತ ಇಷ್ಟಪಟ್ಟು ಓದುವ ಪರಿಪಾಠ ಬೆಳೆಸಿಕೊಳ್ಳಬೇಕು. ಒತ್ತಡಕ್ಕೊಳಗಾಗದೆ ಧನಾತ್ಮಕ ಆಲೋಚನೆಗಳ ಮೂಲಕ ಸಾಧನೆಯ ಹಾದಿಯಲ್ಲಿ ಮುನ್ನಡೆಯಬೇಕು ಎಂದು ಬೆಂಗಳೂರು ದೂರದರ್ಶನ ಕೇಂದ್ರದ ಥಟ್ ಅಂತ ಹೇಳಿ ಖ್ಯಾತಿಯ ಡಾ.ನಾ.ಸೋಮೇಶ್ವರ ಹೇಳಿದರು.
ಲಯನ್ಸ್ ಕ್ಲಬ್ ಆಫ್ ದೊಡ್ಡಬಳ್ಳಾಪುರ ಆರ್.ಎಲ್.ಜಾಲಪ್ಪ ಇನ್ಸ್‌ಟ್ಯೂಷನ್ಸ್, ಭಾರತೀಯ ವೈದ್ಯಕೀಯ ಸಂಘ, ಭಾರತ ವಿದ್ಯಾರ್ಥಿ ಫೆಡರೇಶನ್ ಹಾಗೂ ಶ್ರೀದೇವರಾಜ ಅರಸ್ ಅಂತರರಾಷ್ಟ್ರೀಯ ವಸತಿ ಪ್ರೌಢಶಾಲೆಯ ಸಹಯೋಗದಲ್ಲಿ ನಡೆದ ಎಸ್‌ಎಸ್‌ಎಲ್‌ಸಿ ಮಕ್ಕಳು ಹಾಗೂ ಅವರ ಪೋಷಕರಿಗೆ ಮಾರ್ಗದರ್ಶನ ಕಾರ್ಯಾಗಾರದಲ್ಲಿ ಮಾತನಾಡಿದರು.
ಜಗತ್ತಿನಲ್ಲಿ ಯಾವ ವಿದ್ಯಾರ್ಥಿಯೂ ದಡ್ಡನಲ್ಲ ಎಂಬ ಸತ್ಯವನ್ನು ಬೋಧಕರು ಮತ್ತು ಪೋಷಕರು ಅರ್ಥ ಮಾಡಿಕೊಳ್ಳಬೇಕು. ನಮ್ಮ ಆಲೋಚನೆ, ವಿಚಾರ, ಸಾಮಾಜಿಕ ವರ್ತನೆ ಹಾಗೂ ನಡವಳಿಕೆ ನಮ್ಮ ಮಕ್ಕಳ ವ್ಯಕ್ತಿತ್ವದ ಮೇಲೆ ಪರಿಣಾಮ ಬೀರುತ್ತದೆ. ಅವರ ಶೈಕ್ಷಣಿಕ ಬೆಳವಣಿಗೆಯನ್ನು ಅದು ಪ್ರಭಾವಿಸುತ್ತದೆ. ಸಾಧನೆಯ ಹಾದಿಯಲ್ಲಿ ಮುನ್ನಡೆವಾಗ ಸೋಲುಗಳನ್ನು ಸಮರ್ಥವಾಗಿ ಎದುರಿಸುವ ಧೈರ್ಯ ಅಗತ್ಯ ಎಂದರು.
ಮಕ್ಕಳ ಸ್ನೇಹಕೂಟ, ಹವ್ಯಾಸಗಳು ಮತ್ತು ಅವರ ದೈನಂದಿನ ಕಾರ್ಯಚಟುವಟಿಕೆಗಳ ಮೇಲೆ ನಿಗಾ ವಹಿಸುವುದರಿಂದ ಅಡ್ಡದಾರಿ ಹಿಡಿಯುವುದನ್ನು ತಪ್ಪಿಸಬಹುದು. ತಪ್ಪುಗಳನ್ನು ತಿದ್ದುವ ಮೂಲಕ ಆತ್ಮವಿಶ್ವಾಸ ಹೆಚ್ಚಿಸುವ ಮತ್ತು ಮಾರ್ಗದರ್ಶನ ಮಾಡುವ ಹೊಣೆಗಾರಿಕೆಯಿಂದ ಪೋಷಕರು ಹಾಗೂ ಶಿಕ್ಷಕರು ದೂರ ಉಳಿಯಬಾರದು ಎಂದರು.
ಲಯನ್ಸ್ ಕ್ಲಬ್ ಆಫ್ ದೊಡ್ಡಬಳ್ಳಾಪುರ ಆರ್.ಎಲ್.ಜಾಲಪ್ಪ ಇನ್ಸ್‌ಟಿಟ್ಯೂಷನ್ಸ್ ಅಧ್ಯಕ್ಷ ಪ್ರೊ.ಕೆ.ಆರ್.ರವಿಕಿರಣ್, ಹಿರಿಯ ವೈದ್ಯೆ ಡಾ.ಆರ್.ಇಂದಿರಾ, ಮಾನವ ಸಂಪನ್ಮೂಲ ನಿರ್ದೇಶಕ ಎನ್.ಎಸ್.ಬಾಬುರೆಡ್ಡಿ, ಲಯನ್ಸ್ ಪ್ರಾಂತೀಯ ಅಧ್ಯಕ್ಷ ಎಲ್.ಎನ್.ಪ್ರದೀಪ್‌ಕುಮಾರ್, ಕಾರ್ಯದರ್ಶಿ ಎ.ಎಸ್.ಸುಮಾ, ಖಜಾಂಚಿ ಕೆ.ಸಿ.ನಾಗರಾಜ್, ಶಾಲಾ ಮುಖ್ಯಶಿಕ್ಷಕ ಜಿಯಾವುಲ್ಲಾಖಾನ್, ಭಾರತ ವಿದ್ಯಾರ್ಥಿ ಫೆಡರೇಶನ್‌ನ ನಟರಾಜ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.