ADVERTISEMENT

ಬಾಲಕಾರ್ಮಿಕ ಪದ್ಧತಿಗೆ ಬಡತನ ಕಾರಣ

​ಪ್ರಜಾವಾಣಿ ವಾರ್ತೆ
Published 3 ಜುಲೈ 2019, 13:33 IST
Last Updated 3 ಜುಲೈ 2019, 13:33 IST
ಬಾಲ ಕಾರ್ಮಿಕ ವಿರೋಧಿ ಅರಿವು ಜಾಥಾಕ್ಕೆ ನ್ಯಾಯಾಧೀಶ ಎ.ಹರೀಶ್ ಹಸಿರು ನಿಶಾನೆ ತೋರಿದರು.
ಬಾಲ ಕಾರ್ಮಿಕ ವಿರೋಧಿ ಅರಿವು ಜಾಥಾಕ್ಕೆ ನ್ಯಾಯಾಧೀಶ ಎ.ಹರೀಶ್ ಹಸಿರು ನಿಶಾನೆ ತೋರಿದರು.   

ದೇವನಹಳ್ಳಿ: ದೇಶದಲ್ಲಿ ಹೆಚ್ಚುತ್ತಿರುವ ಬಡತನ ಮತ್ತು ಅನಕ್ಷರತೆಯಿಂದಾಗಿ ಬಾಲಕಾರ್ಮಿಕ ಪದ್ಧತಿಗೆ ಮುಖ್ಯ ಕಾರಣವಾಗಿದೆ ಎಂದು ಐದನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್‌ ನ್ಯಾಯಾಧೀಶ ಎ.ಹರೀಶ್ ಕಳವಳ ವ್ಯಕ್ತಪಡಿಸಿದರು.

ಇಲ್ಲಿನ ನ್ಯಾಯಾಲಯದ ಆವರಣದಲ್ಲಿ ತಾಲ್ಲೂಕು ಕಾನೂನು ಸೇವೆಗಳ ಸಮಿತಿ, ಜಿಲ್ಲಾ ಕಾರ್ಮಿಕ ಇಲಾಖೆ ಸಹಯೋಗದಲ್ಲಿ ನಡೆದ ‘ವಿಶ್ವ ಬಾಲಕಾರ್ಮಿಕ ಪದ್ಧತಿ ವಿರೋಧಿ ದಿನಾಚರಣೆ’ ಪ್ರಯುಕ್ತ ಜಾಗೃತಿ ಮತ್ತು ಅರಿವು ಜಾಥಾಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ದೇಶದಲ್ಲಿ 15 ಕೋಟಿ ಬಾಲಕಾರ್ಮಿಕರಿದ್ದಾರೆ ಎಂದು 2016 ಸಮೀಕ್ಷೆಯೊಂದರಲ್ಲಿ ಹೇಳಲಾಗಿದೆ. ಪ್ರಸ್ತುತ ಅದಕ್ಕಿಂತ ಹೆಚ್ಚು ಇರಬಹುದು. ಅನಕ್ಷರಸ್ಥ ಅಲೆಮಾರಿಗಳ ಮಕ್ಕಳು ಅತಿಹೆಚ್ಚು ಬಾಲಕಾರ್ಮಿಕರಾಗಿದ್ದಾರೆ. ಇಟ್ಟಿಗೆ ಕಾರ್ಖಾನೆ, ಕಲ್ಲುಕ್ವಾರಿ, ಕಟ್ಟಡ ನಿರ್ಮಾಣ, ಬಾರ್ ಆ್ಯಂಡ್‌ ರೆಸ್ಟೋರೆಂಟ್, ಹೋಟೆಲ್, ವಾಹನಗಳ ದುರಸ್ತಿ ಮಳಿಗೆಗಳಲ್ಲಿ ಕಂಡು ಬರುತ್ತಾರೆ. ಇದು ದೇಶದ ಪ್ರಗತಿಗೆ ಮಾರಕ ಎಂದು ಹೇಳಿದರು.

ADVERTISEMENT

ಕಾನೂನು ಸೇವಾ ಸಮಿತಿ ಸದಸ್ಯ ಕಾರ್ಯದರ್ಶಿ ಕೆ.ಸಂದೇಶ್ ಮಾತನಾಡಿ, ‘ಮಕ್ಕಳು ಈ ದೇಶದ ಸಂಪತ್ತು, ಬಾಲ್ಯಾವಸ್ಥೆಯಲ್ಲಿ ಕಾರ್ಮಿಕ ಪದ್ಧತಿಯು ದೈಹಿಕವಾಗಿ, ನೈತಿಕವಾಗಿ, ಮಾನಸಿಕವಾಗಿ ಮತ್ತು ಆರ್ಥಿಕವಾಗಿ ಶೋಷಣೆಗೆ ಒಳಪಡಿಸಿ ಅವರ ಶಿಕ್ಷಣದ ಅವಕಾಶವನ್ನು ಕಸಿದುಕೊಳ್ಳುತ್ತದೆ. ಶಿಕ್ಷಣ ವಂಚಿತ ಹಾಗೂ ದುಡಿಮೆಯಲ್ಲಿ ತೊಡಗಿರುವ ಮಕ್ಕಳನ್ನು ಸಮಾಜದ ಮುಖ್ಯವಾಹಿನಿಗೆ ತರಲು ಸಂಘಟಿತರಾಗಿ ಪ್ರತಿಯೊಬ್ಬರು ಪ್ರಯತ್ನಿಸಬೇಕಿದೆ’ ಎಂದು ಹೇಳಿದರು.

ತಾಲ್ಲೂಕು ವಕೀಲರ ಸಂಘ ಅಧ್ಯಕ್ಷ ಮಾರೇಗೌಡ, ಕ್ಷೇತ್ರ ಶಿಕ್ಷಣಾಧಿಕಾರಿ ಗಾಯಿತ್ರಿ ದೇವಿ ಮಾತನಾಡಿದರು. ತಾಲ್ಲೂಕು ಕಾನೂನು ಸೇವಾ ಸಮಿತಿ ಅಧ್ಯಕ್ಷ ದಿಲೀಪ್ ಕುಮಾರ್, ಅಪರ ಸಿವಿಲ್ ನ್ಯಾಯಾಧೀಶರಾದ ಯೋಗೇಶ್ವರಿ, ಸಹಾಯಕ ಕಾರ್ಮಿಕ ಆಯುಕ್ತ ದೇವರಾಜ್, ಕಾರ್ಮಿಕ ಇಲಾಖೆ ಅಧಿಕಾರಿ ರವಿಕುಮಾರ್, ವಕೀಲರ ಸಂಘ ಕಾರ್ಯದರ್ಶಿ ಆನಂದ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.