ADVERTISEMENT

ಜಿಲ್ಲಾಧಿಕಾರಿ ಕಚೇರಿಗೆ ಮುತ್ತಿಗೆಗೆ ಸಿದ್ಧತೆ

ಮಾತುಕತೆಗೆ ಬರಲು ರೈತರಿಗೆ ಸಚಿವ ನಿರಾಣಿ ಆಹ್ವಾನ

​ಪ್ರಜಾವಾಣಿ ವಾರ್ತೆ
Published 5 ಜುಲೈ 2022, 4:39 IST
Last Updated 5 ಜುಲೈ 2022, 4:39 IST
ಚನ್ನರಾಯಪಟ್ಟಣದಲ್ಲಿ ರೈತರು ನಡೆಸುತ್ತಿರುವ ಅನಿರ್ದಿಷ್ಟಾವಧಿ ಧರಣಿಯ 92ನೇ ದಿನದಲ್ಲಿ ರೈತರು ಭಾಗವಹಿಸಿ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು
ಚನ್ನರಾಯಪಟ್ಟಣದಲ್ಲಿ ರೈತರು ನಡೆಸುತ್ತಿರುವ ಅನಿರ್ದಿಷ್ಟಾವಧಿ ಧರಣಿಯ 92ನೇ ದಿನದಲ್ಲಿ ರೈತರು ಭಾಗವಹಿಸಿ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು   

ವಿಜಯಪುರ:ಚನ್ನರಾಯಪಟ್ಟಣದಲ್ಲಿ ಭೂಸ್ವಾಧೀನ ವಿರೋಧಿ ಹೋರಾಟ ಸಮಿತಿಯಿಂದ ಕೈಗಾರಿಕಾ ವಲಯ ಸ್ಥಾಪನೆಗೆ ವಿರೋಧಿಸಿ ನಡೆಸುತ್ತಿರುವ ಅನಿರ್ದಿಷ್ಟಾವಧಿ ಧರಣಿಗೆ ಸರ್ಕಾರ ಮಣಿಯದಿದ್ದರೆ 100ನೇ ದಿನದಂದು ಜಿಲ್ಲಾಧಿಕಾರಿ ಕಚೇರಿಗೆ ಮುತ್ತಿಗೆ ಹಾಕುವುದು ಸೇರಿದಂತೆ ರಾಷ್ಟ್ರೀಯ ಹೆದ್ದಾರಿ ಬಂದ್ ಮಾಡುವ ಮೂಲಕ ಸರ್ಕಾರಕ್ಕೆ ಬಿಸಿ ಮುಟ್ಟಿಸಲು ರೈತರು ಸಜ್ಜಾಗುತ್ತಿದ್ದಾರೆ.

ರೈತರ ಹೋರಾಟವು 92 ದಿನಗಳು ಪೂರೈಸಿದ್ದರೂ ಸರ್ಕಾರ ಯಾವುದೇ ತೀರ್ಮಾನ ಪ್ರಕಟಿಸದಿರುವುದು ರೈತರನ್ನು ಕೆರಳಿಸುತ್ತಿದೆ. ಶಾಂತಿಯುತವಾಗಿ ನಡೆಸುತ್ತಿರುವ ಹೋರಾಟವನ್ನು ಉಗ್ರರೂಪಕ್ಕೆ ತರಲು ಸರ್ಕಾರವೇ ರಹದಾರಿ ಮಾಡಿಕೊಡುತ್ತಿದೆ. ರೈತರು ಬೀದಿಗಿಳಿದರೆ ಮುಂದಿನ ದಿನಗಳಲ್ಲಿ ಆಗುವಂತಹ ಪರಿಣಾಮಗಳಿಗೆ ಸರ್ಕಾರವೇ ನೇರ ಹೊಣೆಯಾಗಲಿದೆ ಎಂದು ಹೋರಾಟಗಾರ ಕಾರಹಳ್ಳಿ ಶ್ರೀನಿವಾಸ್ ತಿಳಿಸಿದರು.

ವಿವಿಧ ದಲಿತಪರ ಸಂಘಟನೆಗಳು, ಕನ್ನಡಪರ ಸಂಘಟನೆಗಳು, ಮಹಿಳಾ ಸಂಘಟನೆಗಳು, ರೈತ ಸಂಘಟನೆಗಳು ಸೇರಿದಂತೆ ರಾಜ್ಯದ ಮೂಲೆ ಮೂಲೆಗಳಿಂದ ಸಾವಿರಾರು ರೈತರು ಹೋರಾಟದಲ್ಲಿ ಭಾಗವಹಿಸಲಿದ್ದಾರೆ. ಯಾವುದೇ ಕಾರಣಕ್ಕೂ ಸರ್ಕಾರದ ಬೆದರಿಕೆಗೆ ಬೆದರುವುದಿಲ್ಲ. ಪೊಲೀಸರ ತಂತ್ರಗಾರಿಕೆಗಳಿಗೆ ಮಣಿಯುವುದಿಲ್ಲ. ಶತಾಯಗತಾಯ ಏನಾಗುತ್ತೋ ಆಗಲಿ. ಬೀದಿಗಿಳಿಯುವುದು ಶತಸಿದ್ಧ. ಸರ್ಕಾರ ನಮ್ಮ ಭೂಮಿಯನ್ನು ನಮಗೆ ಬಿಟ್ಟು ಕೊಡಬೇಕು. ಇಲ್ಲವೇ ಕುರ್ಚಿ ಖಾಲಿ ಮಾಡಬೇಕು ಎಂದು ಹೋರಾಟಗಾರ ಮಾರೇಗೌಡ ಆಗ್ರಹಿಸಿದರು.

ADVERTISEMENT

ಮಾತುಕತೆಗೆ ಆಹ್ವಾನ: ರೈತರು ಹೋರಾಟ ಆರಂಭಿಸುವುದಕ್ಕೂ ಮುನ್ನಾ ಕೈಗಾರಿಕಾ ಸಚಿವ ಮುರುಗೇಶ ನಿರಾಣಿ ಅವರನ್ನು ಭೇಟಿ ಮಾಡಿ ನಾವು ಭೂಮಿ ಕೊಡುವುದಿಲ್ಲ. ಅಧಿಸೂಚನೆ ವಾಪಸ್‌ ಪಡೆಯುವಂತೆ ಮನವಿ ಮಾಡಿದ್ದೆವು. ವಾಪಸ್‌ ಪಡೆಯದಿದ್ದರೆ ಅನಿರ್ದಿಷ್ಟಾವಧಿ ಧರಣಿ ನಡೆಸುವುದಾಗಿ ಎಚ್ಚರಿಕೆ ನೀಡಿ ಬಂದಿದ್ದರು.

‘ಹೋರಾಟ ಆರಂಭಗೊಂಡು 92 ದಿನಗಳಾದರೂ ಸ್ಥಳಕ್ಕೆ ಬಾರದ ಸಚಿವರು, ಬುಧವಾರ ಬೆಂಗಳೂರಿಗೆ ಬಂದು ಮಾತುಕತೆಗೆ ಬರುವಂತೆ ಕೆಐಎಡಿಬಿ ಉಪ ವಿಭಾಗಾಧಿಕಾರಿ ಮೂಲಕ ರೈತರಿಗೆ ಆಹ್ವಾನ ನೀಡಿದ್ದಾರೆ. ಈ ವೇಳೆ ರೈತರ ಬೇಡಿಕೆ ಈಡೇರದಿದ್ದರೆ ಹೋರಾಟದ ಸ್ವರೂಪ ಬದಲಾಗಲಿದೆ’ ಎಂದು ಹೋರಾಟಗಾರ ಆಂಜನೇಯರೆಡ್ಡಿ ತಿಳಿಸಿದ್ದಾರೆ.

ಪೌರಾಡಳಿತ ಸಚಿವ ಎಂ.ಟಿ.ಬಿ. ನಾಗರಾಜ್ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ.ಕೆ. ಸುಧಾಕರ್ ಅವರು, ರೈತರಿಗೆ ಮುಖ್ಯಮಂತ್ರಿಯನ್ನು ಭೇಟಿ ಮಾಡಿಸಿ ಹೋರಾಟ ಕುರಿತು ಚರ್ಚೆ ಮಾಡಲು ಒಂದು ವಾರದೊಳಗೆ ಅವಕಾಶ ಮಾಡಿಕೊಡುವುದಾಗಿ ಭರವಸೆ ನೀಡಿದ್ದರು. 19 ದಿನಗಳಾದರೂ ಮುಖ್ಯಮಂತ್ರಿ ಭೇಟಿಗೆ ಸಮಯ ನಿಗದಿಪಡಿಸಿಲ್ಲ. ಅವರು ನೀಡಿರುವ ಭರವಸೆಗಳು ಸುಳ್ಳಾಗಿವೆ ಎಂದು ಹೋರಾಟಗಾರರು ಆಕ್ರೋಶ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.