ADVERTISEMENT

ದೊಡ್ಡಬಳ್ಳಾಪುರ: ಕೆಂಪೇಗೌಡ ಜಯಂತಿ ಆಚರಣೆಗೆ ಸಿದ್ಧತೆ

ಬೆಳ್ಳಿ ಪಲ್ಲಕ್ಕಿ ಮೆರವಣಿಗೆಗೆ ನಿರ್ಧಾರ

​ಪ್ರಜಾವಾಣಿ ವಾರ್ತೆ
Published 26 ಜೂನ್ 2022, 7:32 IST
Last Updated 26 ಜೂನ್ 2022, 7:32 IST
ದೊಡ್ಡಬಳ್ಳಾಪುರದ ಒಕ್ಕಲಿಗರ ಸಮುದಾಯ ಭವನದಲ್ಲಿ ಶನಿವಾರ ನಡೆದ ಪೂರ್ವಭಾವಿ ಸಭೆಯಲ್ಲಿ ಕೆಂಪೇಗೌಡ ಜಯಂತ್ಯುತ್ಸವ ಆಚರಣಾ ಸಮಿತಿ ಅಧ್ಯಕ್ಷ ಟಿ.ವಿ. ಲಕ್ಷ್ಮಿನಾರಾಯಣ ಮಾತನಾಡಿದರು
ದೊಡ್ಡಬಳ್ಳಾಪುರದ ಒಕ್ಕಲಿಗರ ಸಮುದಾಯ ಭವನದಲ್ಲಿ ಶನಿವಾರ ನಡೆದ ಪೂರ್ವಭಾವಿ ಸಭೆಯಲ್ಲಿ ಕೆಂಪೇಗೌಡ ಜಯಂತ್ಯುತ್ಸವ ಆಚರಣಾ ಸಮಿತಿ ಅಧ್ಯಕ್ಷ ಟಿ.ವಿ. ಲಕ್ಷ್ಮಿನಾರಾಯಣ ಮಾತನಾಡಿದರು   

ದೊಡ್ಡಬಳ್ಳಾಪುರ:‘ನಾಡಪ್ರಭು ಕೆಂಪೇಗೌಡರ ಜಯಂತಿಯನ್ನು ಜೂನ್‌ 27ರಂದು ಅದ್ದೂರಿಯಾಗಿ ಆಚರಿಸಲಾಗುವುದು. ಜಯಂತಿ ಆಚರಣೆಗೆ ಪಕ್ಷಾತೀತವಾಗಿ ಸಮಿತಿ ರಚಿಸಲಾಗಿದೆ’ ಎಂದು ಕೆಂಪೇಗೌಡ ಜಯಂತ್ಯುತ್ಸವ ಆಚರಣಾ ಸಮಿತಿ ಅಧ್ಯಕ್ಷ ಟಿ.ವಿ. ಲಕ್ಷ್ಮಿನಾರಾಯಣ ಹೇಳಿದರು.

ನಗರದ ಒಕ್ಕಲಿಗರ ಸಮುದಾಯ ಭವನದಲ್ಲಿ ಶನಿವಾರ ನಡೆದ ಕೆಂಪೇಗೌಡ ಜಯಂತಿ ಆಚರಣೆಯ ಸಿದ್ಧತೆ ಕುರಿತ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು.

ನಗರದ ನೆಲದಾಂಜನೇಯ ಸ್ವಾಮಿ ದೇವಾಲಯದಿಂದ ಅಂದು ಬೆಳಿಗ್ಗೆ 9ಗಂಟೆಗೆ ಕೆಂಪೇಗೌಡರ ಭಾವಚಿತ್ರದ ಬೆಳ್ಳಿಪಲ್ಲಕ್ಕಿ ಮೆರವಣಿಗೆ ಆರಂಭವಾಗಲಿದೆ. ವಿವಿಧ ಜನಪದ ಕಲಾ ತಂಡಗೊಂದಿಗೆ ನಗರದ ಪ್ರಮುಖ ರಸ್ತೆಗಳಲ್ಲಿ ಸಾಗಲಿದೆ ಎಂದರು.

ADVERTISEMENT

ತಾಲ್ಲೂಕು ಕಚೇರಿ ಸಭಾಂಗಣದಲ್ಲಿ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯಿಂದ ಪೂಜಾ ಕಾರ್ಯಕ್ರಮ ನಡೆಯಲಿದೆ. ನಂತರ ಮೆರವಣಿಗೆಯು ಹಾಲು ಶಿಥಲೀಕರಣ ಕೇಂದ್ರದ ಸಮೀಪ ‘ಜಿ. ರಾಮೇಗೌಡ ವೃತ್ತ’ ನಾಮಫಲಕ ಅನಾವರಣದವರೆಗೂ ಮುಂದುವರಿಯಲಿದೆ ಎಂದು ತಿಳಿಸಿದರು.

ಇದೇ ಸ್ಥಳದಲ್ಲಿ ನಿರ್ಮಿಸಲಾಗಿರುವ ಬೃಹತ್‌ ವೇದಿಕೆಯಲ್ಲಿ ನಡೆಯಲಿರುವ ಸಮಾರಂಭದ ಅಧ್ಯಕ್ಷತೆಯನ್ನು ಶಾಸಕ ಟಿ. ವೆಂಕಟರಮಣಯ್ಯ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಸಂಸದ ಬಿ.ಎನ್‌. ಬಚ್ಚೇಗೌಡ, ಜಿಲ್ಲಾ ಉಸ್ತುವಾರಿ ಸಚಿವ ಡಾ.ಕೆ. ಸುಧಾಕರ್‌ ಸೇರಿದಂತೆ ವಿವಿಧ ಗಣ್ಯ ಭಾಗವಹಿಸಲಿದ್ದಾರೆ. ಸಮಾರಂಭದಲ್ಲಿ ಅಂತರರಾಷ್ಟ್ರೀಯ ಯೋಗಾಪಟು ಗಾನಶ್ರೀ ಮತ್ತು ಒಕ್ಕಲಿಗ ಸಮುದಾಯದ ನಗರಸಭಾ ಸದಸ್ಯರನ್ನು ಸನ್ಮಾನಿಸಲಾಗುವುದು ಎಂದು ಹೇಳಿದರು.

ಸಭೆಯಲ್ಲಿ ಶಾಸಕ ಟಿ. ವೆಂಕಟರಮಣಯ್ಯ, ಟಿಎಪಿಸಿಎಂಎಸ್‌ ಅಧ್ಯಕ್ಷ ವಿ. ಆಂಜನೇಗೌಡ, ನಿರ್ದೇಶಕ ಡಿ. ಸಿದ್ದರಾಮಯ್ಯ, ಮುಖಂಡರಾದ ಸಿ.ಡಿ. ಸತ್ಯನಾರಾಯಣ ಗೌಡ, ಎ. ನರಸಿಂಹಯ್ಯ, ತಿ. ರಂಗರಾಜು, ಕೆ.ಎಂ. ಮುನಿರಾಮೇಗೌಡ, ಡಾ.ಎಚ್‌.ಜಿ. ವಿಜಯಕುಮಾರ್‌, ಜಿ. ಚುಂಚೇಗೌಡ, ಎಂ. ಬೈರೇಗೌಡ, ಡಿ.ಜಿ. ರಾಜಗೋಪಾಲ್, ಡಿ.ಸಿ. ಶಶಿಧರ್‌, ಅಪ್ಪಿ ವೆಂಕಟೇಶ್‌, ಅಶೋಕ್‌ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.