ADVERTISEMENT

ರಂಗಮಂದಿರ ನಿರ್ಮಾಣಕ್ಕೆ ಅನುದಾನದ ಭರವಸೆ

ಕೃಷ್ಣರಾಜ್ ವಿಶಾಲಾಕ್ಷಿ ಪ್ರೌಢಶಾಲೆ ಆವರಣದಲ್ಲಿ ಮಕ್ಕಳಿಗೆ ಸೈಕಲ್ ವಿತರಣೆ

​ಪ್ರಜಾವಾಣಿ ವಾರ್ತೆ
Published 4 ಆಗಸ್ಟ್ 2019, 13:18 IST
Last Updated 4 ಆಗಸ್ಟ್ 2019, 13:18 IST
ಸೈಕಲ್ ವಿತರಣೆ ಕಾರ್ಯಕ್ರಮದಲ್ಲಿ ಶಾಸಕ ನಿಸರ್ಗ ನಾರಾಯಣಸ್ವಾಮಿ, ಶಿಕ್ಷಕರು, ಗಣ್ಯರು ಇದ್ದರು
ಸೈಕಲ್ ವಿತರಣೆ ಕಾರ್ಯಕ್ರಮದಲ್ಲಿ ಶಾಸಕ ನಿಸರ್ಗ ನಾರಾಯಣಸ್ವಾಮಿ, ಶಿಕ್ಷಕರು, ಗಣ್ಯರು ಇದ್ದರು   

ದೇವನಹಳ್ಳಿ: ಶೈಕ್ಷಣಿಕ ಚಟುವಟಿಕೆಗೆ ಪೂರಕವಾಗಿ ಶಾಲಾ ಆವರಣದಲ್ಲಿ ರಂಗಮಂದಿರ ನಿರ್ಮಾಣ ಮಾಡಲು ಶಾಸಕರ ಅನುದಾನದಲ್ಲಿ ಹಣ ನೀಡಲಾಗುವುದು ಎಂದು ಶಾಸಕ ನಿಸರ್ಗ ನಾರಾಯಣಸ್ವಾಮಿ ಭರವಸೆ ನೀಡಿದರು.

ಇಲ್ಲಿನ ತಿಂಡ್ಲು ಗ್ರಾಮದ ಅನುದಾನಿತ ಕೃಷ್ಣರಾಜ್ ವಿಶಾಲಾಕ್ಷಿ ಪ್ರೌಢಶಾಲೆ ಆವರಣದಲ್ಲಿ 8ನೇ ತರಗತಿ ಮಕ್ಕಳಿಗೆ ಉಚಿತ ಸೈಕಲ್ ವಿತರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ’ತರಗತಿಯಲ್ಲಿ ಬೋಧನೆ ಮಾಡುವಷ್ಟೇ ಪಠ್ಯೇತರ ಚಟುವಟಿಗಳಿಗೆ ಒತ್ತು ನೀಡುವ ಅಗತ್ಯವಿದೆ. ಮಕ್ಕಳಿಗೆ ಪಠ್ಯ ವಿಷಯದ ಜತೆಗೆ ನೀತಿ ಶಿಕ್ಷಣವನ್ನೂ ಕಲಿಸಬೇಕು‘ ಎಂದು ಸಲಹೆ ನೀಡಿದರು.

’ಸರ್ಕಾರ ಸಾರ್ವಜನಿಕ ಶಿಕ್ಷಣ ಇಲಾಖೆಯಲ್ಲಿ ಗುಣಮಟ್ಟದ ಶಿಕ್ಷಣ ನೀಡಲು ವಾರ್ಷಿಕ ಸಾವಿರಾರು ಕೋಟಿ ವೆಚ್ಚ ಮಾಡುತ್ತಿದೆ. ಉಚಿತವಾಗಿ ಅನೇಕ ಸವಲತ್ತು ಮಕ್ಕಳಿಗೆ ನೀಡಲಾಗುತ್ತಿದೆ. ಸರ್ಕಾರಿ ಶಾಲೆಗಳು ಸಾಮಾಜಿಕ ಹೊಣೆಗಾರಿಕೆ ಯೋಜನೆಯಡಿ ಅತ್ಯಾಧುನಿಕ ಶಾಲೆಗಳಾಗಿ ಹೊಸರೂಪ ಪಡೆಯುತ್ತಿವೆ. ಗ್ರಾಮೀಣ ಪ್ರದೇಶದ ಗ್ರಾಮಗಳಲ್ಲಿ ಸಿಮೆಂಟ್ ರಸ್ತೆ, ರಂಗಮಂದಿರ, ಸಮುದಾಯ ಭವನ, ಸಮಗ್ರ ಅಭಿವೃದ್ಧಿಗೆ ಒತ್ತು ನೀಡಲಾಗುತ್ತಿದೆ‘ ಎಂದು ಹೇಳಿದರು.

ADVERTISEMENT

ಚೇತನ್ ಗೌಡ ಮಾತನಾಡಿ, ‘ನಾಲ್ಕೈದು ದಶಕಗಳ ಹಿಂದೆ ಇಂತಹ ಉಚಿತ ಶೈಕ್ಷಣಿಕ ಸವಲತ್ತು ಇರಲಿಲ್ಲ. ಅನೇಕ ಕಡೆ ಮರಗಳ ನೆರಳಿನ ಆಸರೆಗಳಲ್ಲಿ ಬೋಧನೆ ನಡೆಯುತ್ತಿತ್ತು. ಪರಿಸ್ಥಿತಿ ಬದಲಾಗಿದೆ ಉತ್ತಮ ಅವಕಾಶ ಸಿಗುತ್ತಿದೆ. ಮಕ್ಕಳು ಪ್ರಯೋಜನ ಪಡೆದುಕೊಳ್ಳಬೇಕು‘ ಎಂದರು.

ಶಾಲಾ ಆಡಳಿತ ಮಂಡಳಿ ಅಧ್ಯಕ್ಷ ಮುನಿರಾಜು ಮಾತನಾಡಿ, ’1992–93ನೇ ಸಾಲಿನಲ್ಲಿ ಸ್ಥಳೀಯ ಮಕ್ಕಳ ಹಿತದೃಷ್ಟಿಯಿಂದ ಖಾಸಗಿಯಾಗಿ ಶಾಲೆ ಆರಂಭಗೊಂಡು ಹಲವು ವರ್ಷಗಳ ನಂತರ ಸರ್ಕಾರದ ಅನುದಾನಕ್ಕೆ ಒಳಪಟ್ಟಿದೆ. ಉತ್ತಮ ಬೋಧನೆಯಿಂದ ಗುಣಮಟ್ಟದ ಫಲಿತಾಂಶ ಸಿಗುತ್ತಿದೆ. ಉತ್ತಮ ಆಡಳಿತ ನಿರ್ವಹಣೆ ಮಾಡುತ್ತಿರುವ ಕ್ಷೇತ್ರ ಶಿಕ್ಷಣಾ ಇಲಾಖೆಯಲ್ಲಿ ಕೆಲವು ನ್ಯೂನತೆ ಇದೆ. ಸರಿಪಡಿಸುವ ಕೆಲಸ ಆಗಬೇಕು‘ ಎಂದು ಹೇಳಿದರು.

ತಾಲ್ಲೂಕು ಪಂಚಾಯಿತಿ ಸದಸ್ಯ ಗೋಪಾಲಸ್ವಾಮಿ, ಡಿ.ಸಿ.ಸಿ. ಬ್ಯಾಂಕ್ ನಿರ್ದೇಶಕ ಸೊಣ್ಣಪ್ಪ, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸೌಮ್ಯಾ ಬಾಬು, ಕ್ಷೇತ್ರ ಶಿಕ್ಷಣಾಧಿಕಾರಿ ಗಾಯಿತ್ರಿದೇವಿ, ಮುಖ್ಯ ಶಿಕ್ಷಕ ಮುನೇಗೌಡ, ಮುಖಂಡರಾದ ನಾರಾಯಣಸ್ವಾಮಿ, ಕೆಂಪರಾಜು, ಲಕ್ಷ್ಮಣ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.