ADVERTISEMENT

ವಶಪಡಿಸಿದ ವಸ್ತು ವಾರಸುದಾರರಿಗೆ

23 ಆರೋಪಿಗಳ ಬಂಧನ: ದ್ವಿಚಕ್ರ, ನಗದು, ಆಭರಣ ವಶ

​ಪ್ರಜಾವಾಣಿ ವಾರ್ತೆ
Published 3 ಸೆಪ್ಟೆಂಬರ್ 2020, 8:19 IST
Last Updated 3 ಸೆಪ್ಟೆಂಬರ್ 2020, 8:19 IST
ಆನೇಕಲ್ ತಾಲ್ಲೂಕಿನ ಹೆಬ್ಬಗೋಡಿಯಲ್ಲಿ ಆರೋಪಿಗಳಿಂದ ವಶಪಡಿಸಿಕೊಂಡ ಆಭರಣ ಮತ್ತಿತರ ವಸ್ತುಗಳನ್ನು ವಾರಸುದಾರರಿಗೆ ಕೇಂದ್ರ ವಲಯ ಐಜಿಪಿ ಸೀಮಂತ್‌ಕುಮಾರ್ ಸಿಂಗ್ ವಿತರಿಸಿದರು. ಎಸ್ಪಿ ರವಿ ಡಿ. ಚನ್ನಣ್ಣನವರ್ ಚಿತ್ರದಲ್ಲಿದ್ದಾರೆ
ಆನೇಕಲ್ ತಾಲ್ಲೂಕಿನ ಹೆಬ್ಬಗೋಡಿಯಲ್ಲಿ ಆರೋಪಿಗಳಿಂದ ವಶಪಡಿಸಿಕೊಂಡ ಆಭರಣ ಮತ್ತಿತರ ವಸ್ತುಗಳನ್ನು ವಾರಸುದಾರರಿಗೆ ಕೇಂದ್ರ ವಲಯ ಐಜಿಪಿ ಸೀಮಂತ್‌ಕುಮಾರ್ ಸಿಂಗ್ ವಿತರಿಸಿದರು. ಎಸ್ಪಿ ರವಿ ಡಿ. ಚನ್ನಣ್ಣನವರ್ ಚಿತ್ರದಲ್ಲಿದ್ದಾರೆ   

ಆನೇಕಲ್: ತಾಲ್ಲೂಕಿನ ವಿವಿಧ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ದರೋಡೆ ಮತ್ತಿತರ ಪ್ರಕರಣಗಳಲ್ಲಿ ಭಾಗಿಗಳಾಗಿದ್ದ 23 ಆರೋಪಿಗಳನ್ನು ಬಂಧಿಸಿ ಆರೋಪಿಗಳಿಂದ ₹15.25 ಲಕ್ಷ ನಗದು, 20 ಬೈಕ್‌, ಚಿನ್ನದ ಆಭರಣಗಳು, ಮೊಬೈಲ್ ವಶಪಡಿಸಿಕೊಂಡಿದ್ದಾರೆ ಎಂದು ಕೇಂದ್ರ ವಲಯ ಐಜಿಪಿ ಸೀಮಂತ್‌ಕುಮಾರ್‌ ಸಿಂಗ್‌ ತಿಳಿಸಿದರು.

ತಾಲ್ಲೂಕಿನ ಹೆಬ್ಬಗೋಡಿಯಲ್ಲಿ ಆರೋಪಿಗಳಿಂದ ವಶಪಡಿಸಿಕೊಂಡ ಆಭರಣ ಮತ್ತಿತರ ವಸ್ತುಗಳನ್ನು ವಾರಸುದಾರರಿಗೆ ವಿತರಿಸಿ ಅವರು ಮಾತನಾಡಿದರು.

ಅತ್ತಿಬೆಲೆ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ಉದ್ಯಮಿಯೊಬ್ಬರನ್ನು ಅಪಹರಿಸಿ ಹಣಕ್ಕಾಗಿ ಬೇಡಿಕೆ ಇಟ್ಟಿದ್ದ ಆರು ಮಂದಿ ಆರೋಪಿಗಳನ್ನು ಬಂಧಿಸಲಾಗಿದೆ. ಆರೋಪಿಗಳಿಂದ ₹15 ಲಕ್ಷ ನಗದು, ಎರಡು ಕಾರು, ಮೂರು ದ್ವಿಚಕ್ರ ವಾಹನ ವಶಪಡಿಸಿಕೊಳ್ಳಲಾಗಿದೆ. ಆರೋಪಿಗಳನ್ನು ಪ್ರಭುದೇವ್‌, ಕಿರಣ್‌ ರಾವ್‌, ಶಿವ, ಜಿಮ್‌ ಮೂರ್ತಿ, ರೋಹಿತ್‌, ದಿಲೀಪ್‌ ಎಂದು ಗುರುತಿಸಲಾಗಿದೆ. ಉಳಿದ ಏಳು ಮಂದಿ ತಲೆ ಮರೆಸಿಕೊಂಡಿದ್ದಾರೆ.

ADVERTISEMENT

ಬನ್ನೇರುಘಟ್ಟ ಠಾಣೆ ವ್ಯಾಪ್ತಿಯಲ್ಲಿ ಐಷಾರಾಮಿ ಜೀವನ ನಡೆಸಲು ಆರೋಪಿಗಳು ಬೈಕ್‌ಗಳನ್ನು ಕಳವು ಮಾಡುತ್ತಿದ್ದರು. ಇಲ್ಲಿ ಸಿಕ್ಕಿಬಿದ್ದ ಮೂವರು ಆರೋಪಿಗಳಿಂದ 3 ರಾಯಲ್‌ ಎನ್‌ಫೀಲ್ಡ್‌ ಬೈಕ್‌ಗಳು, ಎರಡು ಬಜಾಜ್‌ ಪಲ್ಸರ್‌, ಆರು ಸ್ಕೂಟರ್‌ಗಳು ಸೇರಿದಂತೆ ಒಟ್ಟು 11 ದ್ವಿಚಕ್ರ ವಾಹನಗಳು, ಒಂದು ಕಾರು ವಶಪಡಿಸಿಕೊಳ್ಳಲಾಗಿದೆ. ಆರೋಪಿಗಳನ್ನು ಕಾರ್ತೀಕ್‌, ಜಯಂತ್‌, ಕಿಶೋರ್‌ ಎಂದು ಗುರುತಿಸಲಾಗಿದ್ದು ಬಂಧಿಸಲಾಗಿದೆ. ಈ ಪ್ರಕರಣ ಸಂಬಂಧಿಸಿ ಇಬ್ಬರು ಆರೋಪಿಗಳು ತಲೆಮರೆಸಿಕೊಂಡಿದ್ದಾರೆ.

ಜಿಗಣಿ ಠಾಣೆ ವ್ಯಾಪ್ತಿಯಲ್ಲಿ ರಾತ್ರಿ ವೇಳೆಯಲ್ಲಿ ದರೋಡೆ ಮಾಡುತ್ತಿದ್ದ ಸಂತೋಷ್‌, ರಾಜೇಶ್‌, ಪವನ್‌, ಶ್ರೀಧರ್‌ ಎಂಬ ನಾಲ್ವರು ಆರೋಪಿಗಳನ್ನು ಬಂಧಿಸಿ ಆರೋಪಿಗಳಿಂದ ₹ 25 ಸಾವಿರ ನಗದು, ನಾಲ್ಕು ಬೈಕ್‌ ವಶಪಡಿಸಿಕೊಳ್ಳಲಾಗಿದೆ. ರಂಜಿತ್‌ ಎಂಬ ಮೊಬೈಲ್‌ ಕಳ್ಳನನ್ನು ಬಂಧಿಸಿ 23 ಮೊಬೈಲ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ.

ಹೆಬ್ಬಗೋಡಿ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ರಾತ್ರಿ ವೇಳೆಯಲ್ಲಿ ಒಂಟಿ ಮನೆಗಳ ಒಳಗಡೆ ನುಗ್ಗಿ ಮತ್ತು ಜನರನ್ನು ಬೆದರಿಸಿ ದರೋಡೆ ಮಾಡುತ್ತಿದ್ದ ಮೂರು ಮಂದಿ ಆರೋಪಿಗಳನ್ನು ಬಂಧಿಸಿ ಆರೋಪಿಗಳಿಂದ ₹ 4 ಲಕ್ಷ ಬೆಲೆ ಬಾಳುವ ಚಿನ್ನದ ಆಭರಣಗಳು, ಒಂದು ಮೊಬೈಲ್‌, ಒಂದು ಆಟೋ ವಶಪಡಿಸಿಕೊಳ್ಳಲಾಗಿದೆ. ಆರೋಪಿಗಳನ್ನು ಹೀಲಲಿಗೆ ಮನೋಜ್‌ ಕುಮಾರ್‌, ಬೊಮ್ಮಸಂದ್ರದ ಚೇತನ್‌ ಮತ್ತು ಗೋಪಾಲ ಎಂದು ಗುರುತಿಸಲಾಗಿದೆ.

ಸರ್ಜಾಪುರ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ಕಳವು ಪ್ರಕರಣಗಳಲ್ಲಿ ಭಾಗಿಯಾಗಿದ್ದ ಆರೋಪಿಗಳಾದ ಉಮಾಶಂಕರ್‌ ಮತ್ತು ಜಗದೀಶ್‌ ಎಂಬ ಆರೋಪಿಗಳನ್ನು ಬಂಧಿಸಿ ಆರೋಪಿಗಳಿಂದ ₹1.20 ಲಕ್ಷ ಬೆಲೆ ಬಾಳುವ ತಾಮ್ರದ ತಂತಿ ವಶಪಡಿಸಿಕೊಳ್ಳಲಾಗಿದೆ. ಕುಮಾರ್‌, ಯೋಗೀಶ್‌ ಮತ್ತು ರಕ್ಷಿತ್‌ ಎಂಬ ಬೈಕ್‌ ಕಳ್ಳರನ್ನು ಬಂಧಿಸಿ ಆರೋಪಿಗಳಿಂದ ಐದು ದ್ವಿಚಕ್ರ ವಾಹನಮತ್ತು ಲ್ಯಾಪ್‌ಟಾಪ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ.

ಸೂರ್ಯನಗರ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ಇಬ್ಬರು ಬಾಲಕರನ್ನು ಬಂಧಿಸಲಾಗಿದ್ದು 9 ಲಕ್ಷ ಬೆಲೆ ಬಾಳುವ ಐದು ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ. ಆರೋಪಿಗಳು ಬಾಲಕರಾಗಿದ್ದು ಬಾಲನ್ಯಾಯಮಂಡಳಿ ಆದೇಶದಂತೆ ನ್ಯಾಯಮಂಡಳಿಯ ವಶಕ್ಕೆ ನೀಡಲಾಗಿದೆ ಎಂದು ತಿಳಿಸಿದರು.

ಬೆಂಗಳೂರು ಗ್ರಾಮಾಂತರ ಎಸ್ಪಿ ರವಿ ಡಿ.ಚನ್ನಣ್ಣನವರ್, ಡಿವೈಎಸ್ಪಿಗಳಾದ ನಂಜುಂಡೇಗೌಡ, ಎಚ್‌.ಎಂ.ಮಹದೇವಪ್ಪ, ಸರ್ಕಲ್‌ ಇನ್‌ಸ್ಪೆಕ್ಟರ್‌ಗಳಾದ ಶೇಖರ್‌, ಕೆ.ವಿಶ್ವನಾಥ್‌, ಸತೀಶ್‌, ನಾಗರಾಜು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.