ಆನೇಕಲ್: ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನದ ಕರಡಿ ರಕ್ಷಣಾ ಕೇಂದ್ರದಲ್ಲಿ ‘ವಸಿಕರನ್’ ಹೆಸರಿನ ಕರಡಿಗೆ ಮೂರು ದಿನಗಳಿಂದ ಕೈಗೊಳ್ಳಲಾಗಿದ್ದ ಕೃತಕ ಕಾಲು ಜೋಡಣೆ ಶಸ್ತ್ರಚಿಕಿತ್ಸೆ ಯಶಸ್ವಿಯಾಗಿದೆ.
ಇದರಿಂದಾಗಿ ಕರಡಿಯು ಮತ್ತೆ ಮೊದಲಿನಂತೆ ಮರ ಏರುವುದು, ನೆಲ ಕೆರೆಯುವುದು ಸೇರಿದಂತೆ ಇನ್ನಿತರ ಚಟುವಟಿಕೆಗಳಲ್ಲಿ ಸಕ್ರಿಯವಾಗಿದೆ. ಇದರೊಂದಿಗೆ ವಿಶ್ವದಲ್ಲೇ ಮೊಟ್ಟಮೊದಲ ಬಾರಿಗೆ ಈ ಶಸ್ತ್ರಚಿಕಿತ್ಸೆ ಒಳಗಾದ ಕೀರ್ತಿಗೆ ವಸಿಕರನ್ ಮುಡಿಗೇರಿದೆ.
ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನ ಮತ್ತು ಕರ್ನಾಟಕ ಅರಣ್ಯ ಇಲಾಖೆ ಸಹಯೋಗದಲ್ಲಿ ಈ ಶಸ್ತ್ರಚಿಕಿತ್ಸೆ ನಡೆದಿದೆ. ಬಳ್ಳಾರಿ ಜಿಲ್ಲೆಯ ಅರಣ್ಯ ಪ್ರದೇಶದಲ್ಲಿ 2019ರಲ್ಲಿ ಬೇಟೆಗಾರರ ಬಲೆಗೆ ಸಿಲುಕಿ ಜೀವನ್ಮರಣ ಹೋರಾಟದಲ್ಲಿದ್ದ ‘ವಸಿಕರನ್’ನನ್ನು ಇಲ್ಲಿಗೆ ತರಲಾಗಿತ್ತು.
ಕರಡಿಯ ಹಿಂಬದಿ ಎಡಗಾಲು ಮುರಿದಿತ್ತು. ನಡೆಯಲು ಆಗುತ್ತಿರಲಿಲ್ಲ. ಯಶಸ್ವಿ ಚಿಕಿತ್ಸೆ ಬಳಿಕ ಆರೋಗ್ಯವೇನೋ ಸುಧಾರಣೆಯಾಗಿತ್ತು. ಜೊತೆಗೆ ಹಿಂದಿನ ಎಡಗಾಲು ಮುರಿದಿದ್ದರಿಂದಾಗಿ ಮೂರು ಕಾಲಿನಲ್ಲಿ ನಡೆಯುವ ಅಭ್ಯಾಸ ಮಾಡಿಕೊಂಡಿತ್ತು.
2025ರಲ್ಲಿ ಜನವರಿ ತಿಂಗಳಿನಲ್ಲಿ ಬನ್ನೇರುಘಟ್ಟ ಉದ್ಯಾನಕ್ಕೆ ಭೇಟಿ ನೀಡಿದ್ದ ಪ್ರಾಣಿಗಳ ಜಾಗತಿಕ ಮೂಳೆ ತಜ್ಞರಾದ ಅಮೆರಿಕದ ಡೆರ್ರಿಕ್ ಕಂಪನಾ ‘ವಸಿಕರನ್’ ನಡಿಗೆ ಗಮನಿಸಿದ್ದಾರೆ. ಬಳಿಕ ‘ವಸಿಕರನ್’ ಮಣ್ಣು ತೋಡುವ, ಮರ ಹತ್ತಲು, ಮೇವು ಸಂಗ್ರಹಕ್ಕೆ ಅನುವಾಗುವ ಕೃತಕ ಕಾಲನ್ನು ಸಿದ್ಧಪಡಿಸಿದರು.
ಮೂರು ದಿನಗಳಿಂದ ಕೃತಕ ಕಾಲಿನ ಅಚ್ಚು, ಪರೀಕ್ಷೆ, ಅದನ್ನು ಲಯಬದ್ಧಗೊಳಿಸುವ ಚಟುವಟಿಕೆ ಮಾಡಲಾಯಿತು. ಈ ಮೂಲಕ ‘ವಸಿಕರನ್’ ಕೃತಕ ಕಾಲು ಜೋಡಣೆ ಶಸ್ತ್ರಚಿಕಿತ್ಸೆ ಯಶಸ್ವಿಯಾಗಿದೆ.
ಈ ಕುರಿತು ಪ್ರತಿಕ್ರಿಯಿಸಿದ ಡೆರ್ರಿಕ್ ಕಂಪನಾ, ‘ಕರ್ತವ್ಯದಲ್ಲಿ ನನಗೆ ಪ್ರ ಪ್ರಾಣಿ ನನಗೆ ಹೊಸ ವಿಷಯ ಕಲಿಸುತ್ತದೆ. ಆದರೆ, ವಸಿಕರನ್ ಪ್ರಕರಣವಂತೂ ಅತ್ಯದ್ಭುತವಾದದ್ದು. ಇತರ ಪ್ರಾಣಿಗಳಂತೆಯೇ ಕರಡಿಗೆ ಕೃತಕ ಕಾಲು ಸಿದ್ಧಪಡಿಸುವುದು ದೊಡ್ಡ ಸವಾಲಾಗಿತ್ತು. ಆದರೆ, ವಸಿಕರನ್ ನಡಿಗೆಯನ್ನು ಕಂಡು ನಮ್ಮ ಶ್ರಮಕ್ಕೆ ಬೆಲೆ ಸಿಕ್ಕಂತಾಗಿದೆ’ ಎಂದರು.
ಪ್ರಾಣಿಗಳ ಕಲ್ಯಾಣಕ್ಕಾಗಿ ವಿಜ್ಞಾನ ಹೊಸ ಶೋಧನೆ ಮತ್ತು ಸಂರಕ್ಷಣೆ ಮನೋಭಾವ ಹೇಗೆ ಒಗ್ಗೂಡಬಹುದು ಎಂಬುದಕ್ಕೆ ಈ ಬೆಳವಣಿಗೆ ಸಾಕ್ಷಿಯಾಗಿದೆ.– ಎ.ವಿ.ಸೂರ್ಯಸೇನ್, ಬನ್ನೇರುಘಟ್ಟ ಜೈವಿಕ ಉದ್ಯಾನದ ಕಾರ್ಯನಿರ್ವಾಹಕ ನಿರ್ದೇಶಕ
ಕೃತಕ ಕಾಲು ಜೋಡಣೆ ಶಸ್ತ್ರಚಿಕಿತ್ಸೆ ಬಳಿಕ ವಸಿಕರನ್‌ನ ಮೊದಲ ನಡಿಗೆ ಸಾಮಾನ್ಯ ಎಂಬಂತಿತ್ತು. ಇದು ಆಶ್ಚರ್ಯವನ್ನುಂಟು ಮಾಡಿದೆ. ಕೃತಕ ಕಾಲು ಜೋಡಣೆ ವಸಿಕರನ್‌ಗೆ ಸಿಕ್ಕ ಎರಡನೇ ಅವಕಾಶ.– ಕಾರ್ತಿಕ್ ಸತ್ಯನಾರಾಯಣ, ಸಹ ಸಂಸ್ಥಾಪಕ ಸಿಇಒ ವೈಲ್ಡ್‌ಲೈಫ್ ಎಸ್ಒಎಸ್
ಪಶು ವೈದ್ಯರಿಗೆ ಮಹತ್ವದ್ದು
‘ಕೃತಕ ಕಾಲು ಜೋಡಣೆ ವೈದ್ಯಕೀಯ ಕ್ಷೇತ್ರದಲ್ಲಿ ಮೈಲಿಗಲ್ಲಾಗಿದೆ. ಕೃತಕ ಕಾಲು ಜೋಡಣೆಯು ಕರಡಿ ನಡಿಗೆ ಭಂಗಿಯನ್ನು ಬದಲಿಸಿರುವುದಷ್ಟೇ ಅಲ್ಲದೆ ಅದರ ಭವಿಷ್ಯವನ್ನೂ ರಕ್ಷಿಸಿದೆ‘ ಎಂದು ವೈಲ್ಡ್‌ಲೈಫ್ ಎಸ್ಒಎಸ್ ಸಂಸ್ಥೆಯ ಹಿರಿಯ ಪಶು ವೈದ್ಯಾಧಿಕಾರಿ ಡಾ.ಅರುಣ್ ಶಾ ತಿಳಿಸಿದರು. ಕರಡಿಗೆ ಕೃತಕ ಕಾಲು ಜೋಡಣೆ ವಿಚಾರ ಪಶುವೈದ್ಯರ ಪಾಲಿಗೆ ಮಹತ್ವದ್ದು. ಮೂರು ಕಾಲಿನಿಂದ ನಡೆಯುವುದನ್ನೇ ಅಭ್ಯಾಸ ಮಾಡಿಕೊಂಡಿದ್ದ. ಇದು ಮಂಡಿ ಮತ್ತು ಬೆನ್ನುಮೂಳೆ ಮೇಲೆ ಒತ್ತಡ ಬೀರುತ್ತಿದ್ದು ಇದು ಆತಂಕ ಮೂಡಿಸಿತ್ತು ಎಂದು ಅವರು ಪ್ರತಿಕ್ರಿಯಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.