ADVERTISEMENT

ಹಲ್ಲೆ ಖಂಡಿಸಿ 14 ರಂದು ಪ್ರತಿಭಟನೆ

ಚೀಮಾಚನಹಳ್ಳಿ ನಾರಾಯಣಸ್ವಾಮಿ ಮೇಲೆ ಹಲ್ಲೆ ಆರೋಪಿಗಳ ಬಂಧನಕ್ಕೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 7 ಆಗಸ್ಟ್ 2019, 14:28 IST
Last Updated 7 ಆಗಸ್ಟ್ 2019, 14:28 IST
ದಲಿತ ಸಂಘಟನೆಗಳ ಮುಖಂಡರು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು
ದಲಿತ ಸಂಘಟನೆಗಳ ಮುಖಂಡರು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು   

ದೇವನಹಳ್ಳಿ: ಚೀಮಾಚನಹಳ್ಳಿ ನಾರಾಯಣಸ್ವಾಮಿ ಮೇಲೆ ಗಂಭೀರ ಪ್ರಮಾಣದ ಹಲ್ಲೆ ಘಟನೆ ಖಂಡಿಸಿ ಕರ್ನಾಟಕ ಪ್ರಗತಿಪರ ಹಾಗೂ ದಲಿತ ಸಂಘಟನೆಗಳ ಒಕ್ಕೂಟ ವತಿಯಿಂದ ಆ.14 ರಂದು ದೇವನಹಳ್ಳಿ ಅಂಬೇಡ್ಕರ್ ಪ್ರತಿಮೆ ಮುಂಭಾಗ ಪ್ರತಿಭಟನೆ ನಡೆಯಲಿದೆ ಎಂದು ಪ್ರಜಾ ವಿಮೋಚನಾ ಚಳವಳಿ (ಸ್ವಾಭಿಮಾನ) ರಾಜ್ಯ ಘಟಕದ ಅಧ್ಯಕ್ಷ ಮುನಿಆಂಜಿನಪ್ಪ ಹೇಳಿದರು.

ಇಲ್ಲಿನ ಪತ್ರಕರ್ತರ ಭವನದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಮಾನವೀಯತೆ ಇಲ್ಲದೆ ಮರಕ್ಕೆ ಕಟ್ಟಿಹಾಕಿ ಸವರ್ಣೀಯರು ಹಲ್ಲೆ ನಡೆಸಿ ಮಹಿಳೆಯರ ಮೇಲೆ ದೌರ್ಜನ್ಯ ನಡೆಸಿರುವ ಕ್ರಮದಿಂದ ನಾಗರಿಕ ಸಮಾಜ ತಲೆ ತಗ್ಗಿಸುವಂತಾಗಿದೆ. ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಅನತಿ ದೂರದಲ್ಲಿ ಎಂದರೆ ಕಾನೂನು ಸುವ್ಯವಸ್ಥೆ ಯಾವ ಮಟ್ಟದಲ್ಲಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಈ ಹಿಂದಿನಂತೆ ಜೀತ ಪದ್ಧತಿ ಇಲ್ಲ. ದೌರ್ಜನ್ಯ, ಹತ್ಯೆ, ಹಲ್ಲೆ ರಾಜ್ಯದಲ್ಲಿ ನಿರಂತರವಾಗಿದೆ. ಪರಿಶಿಷ್ಟ ಜಾತಿ ಎಂಬ ಏಕೈಕ ಕಾರಣಗಳಿಂದ ಗ್ರಾಮದಿಂದ ಹೊರಹಾಕುವ ಪ್ರಯತ್ನದಿಂದ ಈ ಕೃತ್ಯ ಎಸಗಲಾಗಿದೆ. ಪೊಲೀಸರ ನಡೆ ಸಂಶಯಕ್ಕೆ ಎಡೆ ಮಾಡಿಕೊಡುವಂತಿದೆ ಎಂದು ದೂರಿದರು.

ADVERTISEMENT

ಮಾನವ ಹಕ್ಕುಗಳ ವೇದಿಕೆ ರಾಜ್ಯ ಘಟಕ ಅಧ್ಯಕ್ಷ ಕೆ.ಆರ್.ಮುನಿರಾಜು ಮತ್ತು ಅಖಿಲ ಭಾರತ ಜೈಭೀಮ್ ರಾಜ್ಯ ಘಟಕ ಅಧ್ಯಕ್ಷ ಬಿ.ಆರ್.ಮುನಿರಾಜು ಮಾತನಾಡಿ, ಘಟನೆ ಬಗ್ಗೆ ಸಂಕ್ಷಿಪ್ತವಾಗಿ ದೂರು ನೀಡಿದ್ದು ಏಳು ಆರೋಪಿಗಳನ್ನು ಬಂಧಿಸುವಂತೆ ಒತ್ತಾಯಿಸಿದ್ದರೂ ಆರೋಪಿಗಳಿಗೆ ಅನುಕೂಲವಾಗುವ ರೀತಿಯಲ್ಲಿ ಕೇವಲ ಮೂವರ ಮೇಲೆ ಎಫ್.ಐ.ಆರ್.ದಾಖಲಿಸಿದ್ದಾರೆ. ಸಮರ್ಪಕವಲ್ಲದ ಸೆಕ್ಷನ್ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿರುವುದರಿಂದ ಮೂವರು ಆರೋಪಿಗಳಿಗೆ ಜಾಮೀನು ಸಿಕ್ಕಿದೆ ಎಂದು ಆರೋಪಿಸಿದರು.

ರಾಜ್ಯದಲ್ಲಿ ಬಿಹಾರ ಮಾದರಿಯಲ್ಲಿ ದಲಿತರ ಮೇಲೆ ಗೂಂಡಾ ರೀತಿಯಲ್ಲಿ ಹಲ್ಲೆ ನಡೆಯುತ್ತಿದೆ, ಮೀಸಲು ವಿಧಾನಸಭಾ ಕ್ಷೇತ್ರದಲ್ಲಿ ಆಯ್ಕೆಗೊಂಡಿರುವ ಶಾಸಕರು ಆರೋಪಿಗಳ ಮನೆಗಳಿಗೆ ಹೋಗುತ್ತಾರೆ ಎಂದರೆ ದಲಿತರ ಪಾಡೇನು ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸಮತಾ ಸೈನಿಕ ದಳ ರಾಜ್ಯ ಘಟಕ ಅಧ್ಯಕ್ಷ ಚನ್ನಕೃಷ್ಣಪ್ಪ ಮತ್ತು ಭಾರತ ಜನಜಾಗೃತಿ ಸೇನೆ ರಾಜ್ಯ ಸಂಸ್ಥಾಪಕ ಅಧ್ಯಕ್ಷ ಸಿ.ಮುನಿಯಪ್ಪ ಮಾತನಾಡಿ, ರಾಜ್ಯದಲ್ಲಿ ದಲಿತರ ಮೆಲೆ ನಡೆಯುತ್ತಿರುವ ಪ್ರಕರಣಗಳ ದಾಖಲಾತಿಯಂತೆ ಬೆಂಗಳೂರು ಗ್ರಾಮಾಂತರ ಜಿಲ್ಲೆ ಎರಡನೇ ಸ್ಥಾನದಲ್ಲಿದೆ. ಒಂದು ಕುಟುಂಬಕ್ಕೆ ಒಂದು ನಿವೇಶನ, 4.38 ಎಕರೆ ಜಮೀನಿಗೆ ಅವಕಾಶವಿದೆಯೇ ಹೊರತು ನಾಲ್ಕಾರು ನಿವೇಶನ, ಹತ್ತಾರು ಎಕರೆ ಜಮೀನು ಕಬಳಿಸುವುದಲ್ಲ. ಅಂಬೇಡ್ಕರ್ ಭವನದ ನಿವೇಶನದಲ್ಲಿನ ಅತಿಕ್ರಮಣವನ್ನು ಪ್ರಶ್ನೆ ಮಾಡುವಂತಿಲ್ಲವೆಂದರೆ ಹೇಗೆ. ಸಮಗ್ರ ತನಿಖೆ ನಡೆಸಿ ನಕಲಿ ದಾಖಲೆಯನ್ನು ಸರ್ಕಾರ ವಶಕ್ಕೆ ಪಡೆಯಬೇಕು ಎಂದು ಒತ್ತಾಯಿಸಿದರು.

ಮುಖಂಡರಾದ ಹೆಬ್ಬಾಳ ವೆಂಟಕೇಶ್, ಸಿದ್ಧಾರ್ಥ, ತಿಮ್ಮರಾಯಪ್ಪ, ನಾರಾಯಣಸ್ವಾಮಿ, ಹಲ್ಲೆಗೊಳಗಾಗಿದ್ದ ನಾರಾಯಣಸ್ವಾಮಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.