ADVERTISEMENT

ದೇವಾಲಯ ತೆರವುಗೊಳಿಸದಂತೆ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 6 ಮಾರ್ಚ್ 2020, 14:34 IST
Last Updated 6 ಮಾರ್ಚ್ 2020, 14:34 IST
ವಿಜಯಪುರದಲ್ಲಿ ನಿರ್ಮಾಣಗೊಂಡಿರುವ ದೇವಾಲಯಗಳನ್ನು ತೆರವುಗೊಳಿಸಬಾರದು ಎಂದು ವಿಶ್ವ ಹಿಂದೂ ಪರಿಷತ್ ಮತ್ತು ಬಜರಂಗದಳದ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು
ವಿಜಯಪುರದಲ್ಲಿ ನಿರ್ಮಾಣಗೊಂಡಿರುವ ದೇವಾಲಯಗಳನ್ನು ತೆರವುಗೊಳಿಸಬಾರದು ಎಂದು ವಿಶ್ವ ಹಿಂದೂ ಪರಿಷತ್ ಮತ್ತು ಬಜರಂಗದಳದ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು   

ವಿಜಯಪುರ: ‘ಇಲ್ಲಿನ ದೇವನಹಳ್ಳಿ ರಸ್ತೆಯಲ್ಲಿ ನಿರ್ಮಾಣವಾಗಿರುವ ಆಂಜನೇಯಸ್ವಾಮಿ ದೇವಾಲಯ ಹಾಗೂ ಮುನೇಶ್ವರಸ್ವಾಮಿ ದೇವಾಲಯಗಳನ್ನು ಯಾವುದೇ ಕಾರಣಕ್ಕೂ ತೆರವು ಮಾಡಬಾರದು’ ಎಂದು ವಿಶ್ವ ಹಿಂದೂ ಪರಿಷತ್ ಹಾಗೂ ಬಜರಂಗದಳ ಕಾರ್ಯಕರ್ತರು ತಾಲ್ಲೂಕು ಆಡಳಿತದ ವಿರುದ್ಧ ಪ್ರತಿಭಟನೆ ನಡೆಸಿದರು.

ಹಿನ್ನೆಲೆ: ವಿಜಯಪುರ ಸರ್ವೆ ನಂಬರ್ 161 ರಲ್ಲಿ 0.20 ಗುಂಟೆ ಜಮೀನಿನಲ್ಲಿ ಅನಧಿಕೃತವಾಗಿ ನಿರ್ಮಿಸಿರುವ ಮುನೇಶ್ವರ ಮತ್ತು ಆಂಜನೇಯಸ್ವಾಮಿ ದೇವಾಲಯವನ್ನು ತೆರವುಗೊಳಿಸಲು ಸೂಕ್ತ ಪೊಲೀಸ್ ಬಂದೋಬಸ್ತ್ ಒದಗಿಸುವಂತೆ ತಹಶೀಲ್ದಾರ್ ಅವರು ಸಬ್ ಇನ್‌ಸ್ಪೆಕ್ಟರ್ ಅವರಿಗೆ ಸೂಚಿಸಿರುವ ಹಿನ್ನಲೆಯಲ್ಲಿ ಹೋರಾಟಗಾರರು ಪ್ರತಿಭಟನೆ ನಡೆಸಿದರು.

ಕರ್ನಾಟಕ ಹೈಕೋರ್ಟ್‌ನಲ್ಲಿ ದಾಖಲಾಗಿರುವ ಸಾರ್ವಜನಿಕರ ಹಿತಾಸಕ್ತಿ ರಿಟ್ ಅರ್ಜಿಯಂತೆ ಸಾರ್ವಜನಿಕ ರಸ್ತೆ, ಉದ್ಯಾನವನ ಹಾಗೂ ಇತರ ಸಾರ್ವಜನಿಕ ಸ್ಥಳಗಳಲ್ಲಿ ಅನಧಿಕೃತವಾಗಿ ನಿರ್ಮಿಸಿರುವ ಧಾರ್ಮಿಕ ಕಟ್ಟಡಗಳನ್ನು ತೆರವುಗೊಳಿಸಬೇಕಾಗಿರುತ್ತದೆ. ಅದರಂತೆ ವಿಜಯಪುರ ಗ್ರಾಮದ ಸರ್ವೆ ನಂಬರ್ 161 ರಲ್ಲಿ 0.20 ಗುಂಟೆ ಜಮೀನನ್ನು ರೈತ ಸಂಪರ್ಕ ಕೇಂದ್ರ ವಿಜಯಪುರ ಕಚೇರಿ ಕಟ್ಟಡ ನಿರ್ಮಾಣ ಮಾಡುವ ಉದ್ದೇಶಕ್ಕಾಗಿ ಸಹಾಯಕ ಕೃಷಿ ನಿರ್ದೇಶಕರಿಗೆ ಹಸ್ತಾಂತರಿಸಲಾಗಿರುತ್ತದೆ. ಆದರೆ, ಪ್ರಸ್ತಾಪಿತ ಕೃಷಿ ಇಲಾಖೆಗೆ ಸೇರಿದ ಜಮೀನಿನಲ್ಲಿ ಅನಧಿಕೃತವಾಗಿ ನಿರ್ಮಿಸಿರುವ ದೇವಾಲಯಗಳನ್ನು ತೆರವುಗೊಳಿಸುವಂತೆ ಕೋರಿ ಮನವಿ ಸಲ್ಲಿಸಿರುವ ಮೇರೆಗೆ ತೆರವುಗೊಳಿಸಬೇಕು ಎಂದು ಸೂಚಿಸಿದ್ದರು.

ADVERTISEMENT

ಬಜರಂಗಳ ಜಿಲ್ಲಾ ಮುಖಂಡ ವಿ.ಕೃಷ್ಣಮೂರ್ತಿ ಮಾತನಾಡಿ, ‘ವಿಜಯಪುರ ದೇವಾಲಯಗಳ ನಗರ ಎಂದು ಖ್ಯಾತಿ ಪಡೆದುಕೊಂಡಿದೆ. ನಗರದಲ್ಲಿ ಈಗಾಗಲೇ ಕರಗ ಮಹೋತ್ಸವ, ರಥೋತ್ಸವ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಸಲಿಕ್ಕೆ ಚಾಲನೆ ಸಿಕ್ಕಿದೆ. ಈ ವೇಳೆಯಲ್ಲಿ ಮುನೇಶ್ವರ ಹಾಗೂ ಆಂಜನೇಯಸ್ವಾಮಿ ದೇವಾಲಯ ತೆರವುಗೊಳಿಸಲು ಸೂಚಿಸಿರುವುದನ್ನು ನಾವು ಖಂಡಿಸುತ್ತೇವೆ’ ಎಂದರು.

‘ನಾವು ಯಾವುದೇ ಕಾರಣಕ್ಕೂ ದೇವಾಲಯ ತೆರವುಗೊಳಿಸಲು ಬಿಡುವುದಿಲ್ಲ. ಈ ದೇವಾಲಯಗಳು ಮೂಲ ದೇವಾಲಯಗಳು. ಇದು ನಮ್ಮ ಸ್ವಾಭಿಮಾನದ ಪ್ರಶ್ನೆ. ದೇವಾಲಯಗಳನ್ನು ತೆರವುಗೊಳಿಸಿದರೆ, ಹಿಂದೂ ಧರ್ಮಕ್ಕೆ ಅಪಚಾರವೆಸಗಿದಂತಾಗುತ್ತದೆ. ಇಲ್ಲಿನ ಜನರ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಂತೆ ಆಗುತ್ತದೆ. ಈ ಬಗ್ಗೆ ತಾಲ್ಲೂಕು ಆಡಳಿತ ಮತ್ತೊಮ್ಮೆ ಪರಿಶೀಲನೆ ನಡೆಸಿದ ನಂತರವೇ ನಿರ್ಧಾರ ಕೈಗೊಳ್ಳಬೇಕು ಎಂದರು.

ಮುಖಂಡರಾದ ಕನಕರಾಜು, ವಿ.ಎಸ್.ಆರ್.ರಮೇಶ್, ಮುನೀಂದ್ರ, ವಿ.ಶ್ರೀನಿವಾಸ್, ಗುರುಪ್ರಸಾದ್, ಚತ್ರಪತಿ ರಮೇಶ್, ಶಿವಕುಮಾರ್, ಉಮೇಶ್, ರವಿಕುಮಾರ್, ಸಾಗರ್, ಲೋಕೇಶ್, ಗಂಗಾಧರ್, ಕೃಷ್ಣಪ್ಪ, ವೆಂಕಟೇಶ್, ಗೋಪಿ, ಮಣಿ, ಚಂದನ್, ಮುರಳಿ, ಪ್ರದೀಪ್‌ಬಾಬು, ವಿಜಯಕುಮಾರ್, ಪ್ರಸನ್ನ, ನಾರಾಯಣ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.