ಆನೇಕಲ್: ದೇವನಹಳ್ಳಿ ಚಲೋ ಹೋರಾಟನಿರತ ರೈತರ ಬಂಧನ ಖಂಡಿಸಿ ಗುರುವಾರ ಚಂದಾಪುರದಲ್ಲಿ ಕರ್ನಾಟಕ ಪ್ರಾಂತ ರೈತ ಸಂಘ, ಆನೇಕಲ್ ತಾಲ್ಲೂಕು ಭೂಸ್ವಾಧೀನ ವಿರೋಧ ಹೋರಾಟ ಸಮಿತಿ ಮತ್ತು ಸಿಐಟಿ ವತಿಯಿಂದ ಪ್ರತಿಭಟನೆ ನಡೆಯಿತು.
ರೈತರು ದೇಶದ ಆಸ್ತಿ. ಆದರೆ ರೈತರ ಪ್ರತಿಭಟನೆಯನ್ನು ಹತ್ತಿಕ್ಕಲು ಸರ್ಕಾರ ರೈತರನ್ನು ಬಂಧಿಸಿರುವುದು ಖಂಡನೀಯ. ರೈತರನ್ನು ಬಿಡುಗಡೆಗೊಳಿಸಬೇಕು. ಇಲ್ಲದಿದ್ದರೆ ಹೋರಾಟ ತೀವ್ರಗೊಳಿಸಲಾಗುವುದು ಎಂದು ಸಿಐಟಿಯು ತಾಲ್ಲೂಕು ಅಧ್ಯಕ್ಷ ಪಿ.ಸುರೇಶ್ ಎಚ್ಚರಿಕೆ ನೀಡಿದರು.
ಫಲವತ್ತಾದ ಕೃಷಿ ಭೂಮಿ ಸ್ವಾಧೀನ ವಿರೋಧಿಸಿ ರೈತರೆಲ್ಲಾ ಪ್ರತಿಭಟನೆ ನಡೆಸುತ್ತಿದ್ದಾರೆ. ರೈತರ ಪ್ರಾಮಾಣಿಕ ಬೇಡಿಕೆಗಳನ್ನು ಸರ್ಕಾರ ಈಡೇರಿಸಬೇಕು. ಭೂಸ್ವಾಧೀನ ಪ್ರಕ್ರಿಯೆಯ ಅಧಿಸೂಚನೆಯನ್ನು ವಾಪಸ್ ಪಡೆಯಸಬೇಕು ಎಂದು ಒತ್ತಾಯಿಸಿದರು.
ರಾಜ್ಯ ಸರ್ಕಾರ ರೈತ ವಿರೋಧಿ ಸರ್ಕಾರವಾಗಿದೆ. ರೈತರ ಹೋರಾಟ ಹತ್ತಿಕ್ಕುತ್ತಿರುವುದನ್ನು ಖಂಡಿಸಿ ರಾಜ್ಯದಾದ್ಯಂತ ಪ್ರತಿಭಟನೆ ನಡೆಯುತ್ತಿದೆ. ಕಾರ್ಪೋರೇಟ್ ಹೂಡಿಕೆದಾರರಿಗೆ ರೈತರ ಭೂಮಿ ಒತ್ತೆ ಇಡುತ್ತಿರುವುದು ಉತ್ತಮ ಬೆಳವಣಿಗೆಯಲ್ಲ. ಪ್ರಜಾಪ್ರಭುತ್ವದಲ್ಲಿ ಹೋರಾಟವನ್ನು ಹತ್ತಿಕ್ಕಲು ಪೊಲೀಸರು ರೈತರೊಂದಿಗೆ ಅಮಾನವೀಯವಾಗಿ ನಡೆದುಕೊಂಡಿದ್ದಾರೆ. ಬಲವಂತದ ಭೂಸ್ವಾಧೀನ ಪ್ರಕ್ರಿಯೆಗಳನ್ನು ಸರ್ಕಾರ ಕೈಬಿಡಬೇಕು ಎಂದರು.
ಡಿಎಚ್‌ಎಸ್ ಜಿಲ್ಲಾ ಕಾರ್ಯದರ್ಶಿ ಡಿ.ಮಹದೇಶ್, ಭೂಸ್ವಾಧೀನ ವಿರೋಧಿ ಹೋರಾಟ ಸಮಿತಿಯ ಚಂದ್ರಾರೆಡ್ಡಿ, ವೆಂಕಟೇಶ್ ರೆಡ್ಡಿ, ರೈತ ಸಂಘದ ತಾಲ್ಲೂಕು ಕಾರ್ಯದರ್ಶಿ ಬಾಲರಾಜು, ಸಿಐಟಿಯು ಪ್ರಧಾನ ಕಾರ್ಯದರ್ಶಿ ಸುನೀಲ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.