ADVERTISEMENT

ಟಿ‌ಎಚ್‌ಒ ನಾಪತ್ತೆ: ಹುಡುಕಿಕೊಡಲು ಪ್ರತಿಭಟನೆ

ಹೊಸಕೋಟೆಯಲ್ಲಿ ನಕಲಿ ಕ್ಲಿನಿಕ್‌ಗಳ ಮೇಲೆ ದಾಳಿ ಪ್ರಕರಣ

​ಪ್ರಜಾವಾಣಿ ವಾರ್ತೆ
Published 18 ಡಿಸೆಂಬರ್ 2020, 1:57 IST
Last Updated 18 ಡಿಸೆಂಬರ್ 2020, 1:57 IST
 ಪ್ರತಿಭಟನೆ ನಡೆಸುತ್ತಿರುವ ಆರೋಗ್ಯ ಇಲಾಖೆ ಸಿಬ್ಬಂದಿಗಳು.
 ಪ್ರತಿಭಟನೆ ನಡೆಸುತ್ತಿರುವ ಆರೋಗ್ಯ ಇಲಾಖೆ ಸಿಬ್ಬಂದಿಗಳು.   

ದೇವನಹಳ್ಳಿ: ಹೊಸಕೋಟೆ ತಾಲೂಕು ಆರೋಗ್ಯಾಧಿಕಾರಿ ಡಾ.ಮಂಜುನಾಥ್ ಅವರನ್ನು ಹುಡುಕಿಕೊಡುವಂತೆ ಒತ್ತಾಯಿಸಿ ಆಶಾ ಕಾರ್ಯಕರ್ತೆಯರು ಮತ್ತು ಆರೋಗ್ಯ ಇಲಾಖೆ ಸಿಬ್ಬಂದಿ ಇಲ್ಲಿನ ಜಿಲ್ಲಾಡಳಿತ ಭವನದ ಮುಂಭಾಗದಲ್ಲಿ ಗುರುವಾರ ಪ್ರತಿಭಟನೆ ನಡೆಸಿದರು.

ತಾಲ್ಲೂಕು ಆರೋಗ್ಯಧಿಕಾರಿ ಮಂಜುನಾಥ್ ಡಿ.9 ರಂದು ದಿನವಹಿ ಹಾಜರಾತಿ ಪುಸ್ತಕದಲ್ಲಿ ಸಹಿ ಮಾಡಿರುವ ಪತ್ರವನ್ನು ಜಿಲ್ಲಾಧಿಕಾರಿಗೆ ನೀಡಿರುತ್ತಾರೆ. ಪತ್ರ ಡಿ.11ರಂದು ಅನಧಿಕೃತವಾಗಿ ₹10ಲಕ್ಷ ಮೌಲ್ಯದ ಆಲೋಪತಿ ಔಷಧಿಗಳನ್ನು ಸುಜಾತಾ ಕ್ಲಿನಿಕ್‌ನಲ್ಲಿ ಸಂಗ್ರಹಿಸಿರುತ್ತಾರೆ ಎಂಬ ದೂರಿನನ್ವಯ ಅವರ ವಿರುದ್ಧ ತಕ್ಷಣ ಜಿಲ್ಲಾ ಆರೋಗ್ಯಾಧಿಕಾರಿ ಕೆ.ಮಂಜುಳಾ ಅವರಿಗೆ ಸೂಕ್ತಕ್ರಮ ಜರುಗಿಸುವಂತೆ ಅದೇಶ ನೀಡಿದ್ದರು.

ಜಿಲ್ಲಾ ಆರೋಗ್ಯಧಿಕಾರಿ ಡಾ. ಮಂಜುಳಾದೇವಿ ಸುಜಾತ ಕ್ಲಿನಿಕ್‌ನಲ್ಲಿದ್ದ ಅಕ್ರಮ ಔಷಧಿಗಳನ್ನು ವಶಕ್ಕೆ ಪಡೆದು ಕ್ಲಿನಿಕ್ ಮುಚ್ಚುವಂತೆ ಸೂಚಿಸಿರುತ್ತಾರೆ. ಈ ಘಟನೆ ನಡೆದ ಹಿನ್ನಲೆಯಲ್ಲಿ ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಮಂಜುನಾಥ್ ನಾಪತ್ತೆಯಾಗಿರುವುದು ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ ಎಂದು ದೂರಿದರು.

ADVERTISEMENT

ಆಶಾ ಕಾರ್ಯಕರ್ತೆಯರಾದ ಲಕ್ಷ್ಮಮ್ಮ, ಅಂಬಿಕಾ, ಮರಿಯಂ ಮಾತನಾಡಿ, ಡಾ.ಮಂಜುನಾಥ್ ಒಬ್ಬ ದಕ್ಷ ಅಧಿಕಾರಿ. ಅವರು ನಾಪತ್ತೆಯಾಗಿದ್ದಾರೆ. ಅವರು ಎಲ್ಲಿದ್ದಾರೆ, ಹೇಗಿದ್ದಾರೆ ಮತ್ತು ಏನಾಗಿದೆ ಎಂಬುದು ತಿಳಿಯುತ್ತಿಲ್ಲ ಎಂದು ತಿಳಿಸಿದರು.

ಜಿಲ್ಲಾಧಿಕಾರಿ ಪಿ.ಎನ್.ರವೀಂದ್ರ ಮಾತನಾಡಿ, ತಾಲ್ಲೂಕು ಆರೋಗ್ಯಾಧಿಕಾರಿ ಬಗ್ಗೆ ಪೊಲೀಸ್ ಇಲಾಖೆಯಿಂದ ಮಾಹಿತಿ ಪಡೆಯಲಾಗುತ್ತಿದೆ. ವೈಯಕ್ತಿಕ ಕಾರಣಕ್ಕಾಗಿ ರಜೆ ಹಾಕಿದ್ದಾರೆ ಎಂಬುದನ್ನು ಪರಿಶೀಲಿಸಲಾಗುತ್ತಿದೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.