ADVERTISEMENT

ಅಂಗನವಾಡಿ ಕೇಂದ್ರಕ್ಕೆ ಸೌಲಭ್ಯ ಕಲ್ಪಿಸಲು ಒತ್ತಾಯ

​ಪ್ರಜಾವಾಣಿ ವಾರ್ತೆ
Published 15 ಫೆಬ್ರುವರಿ 2020, 14:11 IST
Last Updated 15 ಫೆಬ್ರುವರಿ 2020, 14:11 IST
ವಿಜಯಪುರದ ರಹಮತ್ ನಗರದಲ್ಲಿರುವ ಅಂಗನವಾಡಿ ಕೇಂದ್ರದಲ್ಲಿ ಮಕ್ಕಳು ಕುಳಿತಿರುವ ಪಕ್ಕದಲ್ಲೆ ಅಡುಗೆ ತಯಾರಿಸುತ್ತಿರುವುದು
ವಿಜಯಪುರದ ರಹಮತ್ ನಗರದಲ್ಲಿರುವ ಅಂಗನವಾಡಿ ಕೇಂದ್ರದಲ್ಲಿ ಮಕ್ಕಳು ಕುಳಿತಿರುವ ಪಕ್ಕದಲ್ಲೆ ಅಡುಗೆ ತಯಾರಿಸುತ್ತಿರುವುದು   

ವಿಜಯಪುರ: ಸಮಗ್ರ ಶಿಶು ಅಭಿವೃದ್ಧಿ ಯೋಜನೆಅಡಿಯಲ್ಲಿ ಬರುವ ಫಲಾನುಭವಿಗಳಿಗೆ ಯೋಜನೆಯ ಒಳಾಂಗಣ ಹಾಗೂ ಹೊರಾಂಗಣ ಚಟುವಟಿಕೆಗಳನ್ನು ಸಮರ್ಪಕವಾಗಿ ನಡೆಸಲು ಅಂಗನವಾಡಿ ಕೇಂದ್ರಗಳಿಗೆ ಮೂಲಸೌಕರ್ಯಗಳ ಕೊರತೆ ಕಾಡುತ್ತಿದೆ.

ಇಲ್ಲಿನ ರಹಮತ್‌ನಗರದ ಅಂಗನವಾಡಿ ಕೇಂದ್ರದಲ್ಲಿ ಮೂಲಸೌಕರ್ಯದ ಕೊರತೆಯಿಂದಾಗಿ ಇಲ್ಲಿನ ಮಕ್ಕಳು ಕಲಿಯುತ್ತಿರುವ ವಾತಾವರಣ ಕಲುಷಿತವಾಗಿದೆ. ಇರುವ ಒಂದು ಕೊಠಡಿಯಲ್ಲೆ 40 ಮಕ್ಕಳು ಕುಳಿತುಕೊಳ್ಳಬೇಕು. ಮಕ್ಕಳು ಕುಳಿತುಕೊಂಡಿರುವ ಕಡೆ ಅಡುಗೆ ಅನಿಲದ ಸಿಲಿಂಡರ್ ಇಟ್ಟುಕೊಂಡು ಅಡುಗೆ ಮಾಡುತ್ತಾರೆ. ಇದರಿಂದ ಮಕ್ಕಳ ಆರೋಗ್ಯ ಮತ್ತು ಜೀವಕ್ಕೆ ರಕ್ಷಣೆಯಿಲ್ಲದಂತಾಗಿದೆ. ಇಲಾಖೆಯಿಂದ ಪೂರೈಕೆ ಮಾಡುವ ಎಲ್ಲಾ ಸರಕುಗಳನ್ನು ದಾಸ್ತಾನು ಮಾಡಲಿಕ್ಕೆ ಪ್ರತ್ಯೇಕವಾದ ಕೋಣೆಯಿಲ್ಲದ ಕಾರಣ, ಗರ್ಭಿಣಿಯರು, ಬಾಣಂತಿಯರು, ಕಿಶೋರಿಯರಿಗೆ ವಿತರಿಸಲು ಬರುವ ಆಹಾರ ಪದಾರ್ಥಗಳನ್ನು ದಾಸ್ತಾನು ಮಾಡಿಕೊಳ್ಳಲಿಕ್ಕೂ ಜಾಗವಿಲ್ಲ.

‘ಮಕ್ಕಳಿಗೆ ಶೌಚಾಲಯವಿಲ್ಲ. ಸರ್ಕಾರಿ ಕಟ್ಟಡವಾದರೂ ಅಗತ್ಯ ಮೂಲಸೌಕರ್ಯಗಳಿಲ್ಲದ ಕಾರಣ ಮಕ್ಕಳು ಅನಿಲದ ವಾಸನೆಯ ನಡುವೆಯೇ ಕಲಿಯಬೇಕಾಗಿದೆ. ಎದುರಿಗೆ ಇರುವ ಕಟ್ಟಡಕ್ಕೆ ಮೇಲ್ಛಾವಣಿ ಅಳವಡಿಸಿಕೊಟ್ಟರೆ, ಅಡುಗೆ ಮನೆ, ಹಾಗೂ ದಾಸ್ತಾನು ಕೊಠಡಿ ಮಾಡಿಕೊಂಡರೆ ಮಕ್ಕಳ ಕಲಿಕೆಗೆ ಉತ್ತಮವಾದ ವಾತಾವರಣ ನಿರ್ಮಾಣವಾಗುತ್ತದೆ’ ಎಂದು ಕಾರ್ಯಕರ್ತೆ ನಿರ್ಮಲಮ್ಮ ಹೇಳಿದರು.

ADVERTISEMENT

ಮುಖಂಡ ಅಶ್ವಥಪ್ಪ ಮಾತನಾಡಿ, ‘ಮಕ್ಕಳಿಗೆ ಉತ್ತಮ ಭವಿಷ್ಯವೇ ಭಾರತದ ಭವಿಷ್ಯ ಎಂಬ ದೂರದೃಷ್ಟಿಯ ಹಿನ್ನೆಲೆಯಲ್ಲಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಮೂಲಕ ಅಭಿವೃದ್ಧಿಗಾಗಿ ಜಾರಿಗೆ ತಂದಿರುವ ಕಾರ್ಯಕ್ರಮಗಳನ್ನು ಸಮರ್ಪಕವಾಗಿ ಅನುಷ್ಟಾನಗೊಳಿಸುವಲ್ಲಿ ಇಲಾಖೆಯ ಅಧಿಕಾರಿಗಳು ಎಡವುತ್ತಿದ್ದಾರೆ.
ಮಗುವಿನ ದೈಹಿಕ, ಮಾನಸಿಕ ಮತ್ತು ಸಾಮಾಜಿಕ ಬೆಳವಣಿಗೆಗೆ ಭದ್ರ ಅಡಿಪಾಯ ಹಾಕುವುದು, ಮಕ್ಕಳಲ್ಲಿ ಸಾವು, ಅನಾರೋಗ್ಯ, ಅಪೌಷ್ಟಿಕತೆ ಮತ್ತು ಶಾಲೆಯಿಂದ ಹೊರಗುಳಿಯುವುದನ್ನು ತಡೆಗಟ್ಟುವ ಉದ್ದೇಶದಿಂದ ಸರ್ಕಾರ ಪೂರ್ವ ಪ್ರಾಥಮಿಕ ಶಾಲಾ ಶಿಕ್ಷಣ ಜಾರಿಗೆ ತಂದಿದೆ. ಇದು ಪರಿಣಾಮಕಾರಿಯಾಗಿ ಜಾರಿಯಾಗಬೇಕು. ಆಗ ಮಾತ್ರವೇ ಶಿಕ್ಷಣ ಕ್ಷೇತ್ರಕ್ಕೆ ಹೆಚ್ಚು ಶಕ್ತಿ ಬರಲಿಕ್ಕೆ ಸಾಧ್ಯ’ ಎಂದರು.

ಮುಖಂಡ ಲೋಕೇಶ್ ಮಾತನಾಡಿ, ‘ಶಾಲಾ ಪೂರ್ವ ಶಿಕ್ಷಣದಿಂದ ಮನೆಯ ಕಲಿಕೆಯಿಂದ ಬದಲಾವಣೆಯನ್ನು ಹೊಂದಿ ಮಕ್ಕಳಿಗೆ ಇಲ್ಲಿ ವಿದ್ಯುಕ್ತ ಕಲಿಕೆಯ ಆರಂಭವಾಗುತ್ತದೆ. ಮಕ್ಕಳಿಗೆ ಮೂಲ ಸಾಮರ್ಥ್ಯ ಹಾಗೂ ಜ್ಞಾನವನ್ನು ಸೃಜನಾತ್ಮಕ ಆಟ ಹಾಗೂ ಸಾಮಾಜಿಕವಾಗಿ ಪರಸ್ಪರ ಮಾತುಕತೆ ಹಾಗು ಕೆಲವೊಂದು ಬಾರಿ ವಿದ್ಯುಕ್ತ ಕಲಿಕೆಗಳ ಮೂಲಕ ಅಭಿವೃದ್ಧಿಪಡಿಸಿಕೊಳ್ಳಲು ಹೇಳಿಕೊಡಲಾಗುತ್ತದೆ. ಇಂತಹ ಉತ್ತಮ ಹಂತಕ್ಕೆ ಸರ್ಕಾರ ಪೂರಕವಾಗಿ ಸ್ಪಂದಿಸಬೇಕು’ ಎಂದು ಒತ್ತಾಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.