ADVERTISEMENT

‘ದುರ್ಬಲರಿಗೆ ನ್ಯಾಯ ಒದಗಿಸಿ‘

ರಾಜ್ಯ ಕಾನೂನು ವಿಶ್ವವಿದ್ಯಾಲಯದ ಉಪಕುಲಪತಿ ಡಾ.ಪಿ.ಈಶ್ವರ ಭಟ್‌ ಕಿವಿಮಾತು

​ಪ್ರಜಾವಾಣಿ ವಾರ್ತೆ
Published 31 ಜನವರಿ 2021, 4:15 IST
Last Updated 31 ಜನವರಿ 2021, 4:15 IST
ಆನೇಕಲ್ ತಾಲ್ಲೂಕಿನ ಎಲೆಕ್ಟ್ರಾನಿಕ್‌ಸಿಟಿಯ ಐಎಸ್‌ಬಿಆರ್‌ ಕಾನೂನು ಕಾಲೇಜಿನಲ್ಲಿ ಆಯೋಜಿಸಿದ್ದ ಮಾನವ ಹಕ್ಕುಗಳ ತರಬೇತಿ ಕಾರ್ಯಾಗಾರವನ್ನು ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯದ ಉಪಕುಲಪತಿ ಡಾ.ಪಿ.ಈಶ್ವರ ಭಟ್ ಉದ್ಘಾಟಿಸಿದರು
ಆನೇಕಲ್ ತಾಲ್ಲೂಕಿನ ಎಲೆಕ್ಟ್ರಾನಿಕ್‌ಸಿಟಿಯ ಐಎಸ್‌ಬಿಆರ್‌ ಕಾನೂನು ಕಾಲೇಜಿನಲ್ಲಿ ಆಯೋಜಿಸಿದ್ದ ಮಾನವ ಹಕ್ಕುಗಳ ತರಬೇತಿ ಕಾರ್ಯಾಗಾರವನ್ನು ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯದ ಉಪಕುಲಪತಿ ಡಾ.ಪಿ.ಈಶ್ವರ ಭಟ್ ಉದ್ಘಾಟಿಸಿದರು   

ಆನೇಕಲ್: ಸಾರ್ವನಿಕರು ಸಮಾಜದಲ್ಲಿ ಯಾವುದೇ ಅಡೆ ತಡೆಯಿಲ್ಲದೆ ಜೀವನ ನಡೆಸಲು ಮಾನವ ಹಕ್ಕುಗಳು ಅವಶ್ಯಕ. ಶೋಷಿತರಿಗೆ, ಹಿಂದುಳಿದವರಿಗೆ ಮತ್ತು ದುರ್ಬಲರಿಗೆ ನ್ಯಾಯ ದೊರಕಿಸುವ ನಿಟ್ಟಿನಲ್ಲಿ ಮಾನವ ಹಕ್ಕುಗಳು ಪ್ರಮುಖ ಪಾತ್ರ ವಹಿಸುತ್ತವೆ ಎಂದು ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯದ ಉಪಕುಲಪತಿ ಡಾ.ಪಿ.ಈಶ್ವರ ಭಟ್‌ ತಿಳಿಸಿದರು.

ಅವರು ತಾಲ್ಲೂಕಿನ ಎಲೆಕ್ಟ್ರಾನಿಕ್‌ಸಿಟಿ ಐಎಸ್‌ಬಿಆರ್ ಕಾನೂನು ಕಾಲೇಜಿನಲ್ಲಿ ಆಯೋಜಿಸಿದ್ದ ಮಾನವ ಹಕ್ಕುಗಳ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.

ಭಗವದ್ಗೀತೆ, ಬೈಬಲ್‌, ಕುರಾನ್‌ ಸೇರಿದಂತೆ ವಿವಿಧ ಧಾರ್ಮಿಕ ಗ್ರಂಥಗಳಲ್ಲಿ ಮಾನವ ಹಕ್ಕುಗಳ ರಕ್ಷಣೆ ಬಗ್ಗೆ ಉಲ್ಲೇಖವಿದೆ. ಧರ್ಮದ ಮೂಲ ಸಮಾನತೆಯಾಗಿದೆ. ಕಾನೂನಿನ ಮೂಲಕ ಎಲ್ಲರಿಗೂ ಸಮಾನತೆ ದೊರಯುವಂತೆ ಆಗಿರುವುದು ಕಾನೂನಿನ ಹೆಗ್ಗಳಿಕೆಯಾಗಿದೆ. ಸಮಾಜದ ಪ್ರತಿಯೊಬ್ಬರು ಕಾನೂನು ಪರಿಪಾಲನೆ ಮಾಡುವ ಮೂಲಕ ಆರೋಗ್ಯಕರ ಸಮಾಜ ನಿರ್ಮಿಸಬೇಕು ಎಂದರು.

ADVERTISEMENT

ಐಎಸ್‌ಬಿಆರ್‌ ಶಿಕ್ಷಣ ಸಂಸ್ಥೆಗಳ ವ್ಯವಸ್ಥಾಪಕ ನಿರ್ದೇಶಕ ಡಾ.ಮನೀಷ್‌ ಕೊಠಾರಿ ಮಾತನಾಡಿ, ಭಾರತ ಕಂಡ ಶ್ರೇಷ್ಠ ದಾರ್ಶನಿಕರಾದ ಮಹಾವೀರ, ಬುದ್ಧ ಸೇರಿದಂತೆ ಪ್ರತಿಯೊಬ್ಬರ ತತ್ವವೂ ಮಾನವ ಹಕ್ಕುಗಳ ರಕ್ಷಣೆಯಾಗಿದೆ. ಬದುಕಿ ಮತ್ತು ಬದಕಲು ಬಿಡಿ ಎಂಬ ತತ್ವದಡಿಯಲ್ಲಿ ಬಲಿಷ್ಠ ಭಾರತ ನಿರ್ಮಾಣಕ್ಕೆ ಅಡಿಪಾಯ ಹಾಕಿದ್ದಾರೆ ಎಂದು ಹೇಳಿದರು.

‘ಈಚ್‌ ಒನ್‌ ಟೀಚ್‌ ಒನ್‌’ ಎಂಬಂತೆ ಪ್ರತಿಯೊಬ್ಬರು ತಮ್ಮಲ್ಲಿರುವ ಜ್ಞಾನ ಹಂಚುವ ಮೂಲಕ ಸುಸಂಸ್ಕೃತ ಸಮಾಜದ ನಿರ್ಮಾಣಕ್ಕ ಕೊಡುಗೆ ನೀಡಬೇಕು. ಐಎಸ್‌ಬಿಆರ್‌ ಶಿಕ್ಷಣ ಸಂಸ್ಥೆ ವತಿಯಿಂದ ಪಿಯು ಕಾಲೇಜು ಪ್ರಾರಂಭಿಸಲಾಗುತ್ತಿದ್ದು ಶೈಕ್ಷಣಿಕ ವಿಷಯಗಳ ಜತೆಗೆ ಕಾರ್ಪೇಂಟರಿ, ಫ್ಯಾಷನ್‌ ಡಿಸೈನಿಂಗ್‌ ಸೇರಿದಂತೆ ವೃತ್ತಿ ಪರ ತರಬೇತಿ ನೀಡಲಾಗುವುದು ಎಂದರು.

ಕಾನೂನು ವಿಶ್ವವಿದ್ಯಾಲಯದ ನಿವೃತ್ತ ಡೀನ್‌ ಡಾ.ಕೆ.ಆರ್‌.ಐತಾಲ್‌, ಎಂ.ಎಸ್‌.ರಾಮಯ್ಯ ಕಾನೂನು ಕಾಲೇಜಿನ ಸಹಾಯಕ ಪ್ರಾಧ್ಯಾಪಕಿ ಡಾ.ಅನಿತಾ.ಎ.ಪಾಟೀಲ್‌, ಕ್ರಿಸ್ತು ಜಯಂತಿ ಕಾನೂನು ಶಾಲೆ ಪ್ರಾಚಾರ್ಯ ಡಾ.ಮೋಹನ್‌.ಆರ್‌.ಬೊಳ್ಳ, ಹೈಕೋರ್ಟ್‌ ವಕೀಲರಾದ ಗಿರೀಶ್‌ ಪಾಟೀಲ್‌, ಎಂ.ಸಿ.ನಾಗಶ್ರೀ ಸಂಪನ್ಮೂಲ ವ್ಯಕ್ತಿಗಳಾಗಿ ಪಾಲ್ಗೊಂಡಿದ್ದರು.

ಐಎಸ್‌ಬಿಆರ್‌ ಕಾಲೇಜಿನ ಆಡಳಿತ ಮಂಡಳಿ ಡಾ.ವೈ.ಲಕ್ಷ್ಮಣ್‌ಕುಮಾರ್‌, ಪ್ರೊ.ತಪನ್‌ ನಾಯಕ್‌, ಪ್ರಾಚಾರ್ಯ ಡಾ.ಬಲವಂತ್‌.ಎಸ್‌.ಕಲಸ್ಕರ್‌, ವ್ಯವಸ್ಥಾಪನ ಸಮಿತಿ ಎಂ.ಲೋಕೇಶ್‌ರೆಡ್ಡಿ, ಬಿ.ಲಕ್ಷ್ಮೀನಾರಾಯಣ್‌, ಭಾರ್ಗಬಿ ಬರುಬಾ, ಅರಿಫಾ ಚೌಧರಿ, ಕೆ.ಪ್ರತಾಪ್‌, ಕೀರ್ತನ್‌.ಕೆ.ಶೆಣೈ ಇತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.