ಎಕೆ ಕಾಲೊನಿಯ ಸಮುದಾಯ ಭವನದಲ್ಲಿ ಆರಂಭಗೊಂಡಿರುವ ನಮ್ಮ ಕ್ಲಿನಿಕ್‌ಗೆ ಬೀಗ ಹಾಕಿರುವುದು
ವಿಜಯಪುರ (ದೇವನಹಳ್ಳಿ): ಒಂದು ತಿಂಗಳ ಹಿಂದೆಯಷ್ಟೇ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಚ್.ಮುನಿಯಪ್ಪ ಅವರು ಆರೋಗ್ಯ ಕುಟುಂಬ ಕಲ್ಯಾಣ ಇಲಾಖೆಯಿಂದ ಉದ್ಘಾಟಿಸಿದ ‘ನಮ್ಮ ಕ್ಲಿನಿಕ್’ ಆಸ್ಪತ್ರೆಯಲ್ಲಿ ಇಂದಿಗೂ ರೋಗಿಗಳಿಗೆ ಸಮರ್ಪಕ ಆರೋಗ್ಯ ಸೇವೆ ಸಿಗುತ್ತಿಲ್ಲ.
ಆಗಸ್ಟ್ 2 ರಂದು ವಿಜಯಪುರ ಪಟ್ಟಣದ ಇಂದಿರಾ ಕ್ಯಾಂಟೀನ್ ಉದ್ಘಾಟನೆಗೆ ಬಂದಿದ್ದ ಸಚಿವ ಕೆ.ಎಚ್.ಮುನಿಯಪ್ಪ ಅವರು ಅಲ್ಲಿಯೇ ಪಟ್ಟಣದ 14ನೇ ವಾರ್ಡ್‍ನ ವಿವೇಕಾನಂದನಗರ (ರಾಯಲ್ ಪಬ್ಲಿಕ್ ಸ್ಕೂಲ್) ಮತ್ತು 12ನೇ ವಾರ್ಡ್ ಎಕೆ ಕಾಲೊನಿಯ ಸಮುದಾಯ ಭವನದ ಎರಡು ಕಡೆ ‘ನಮ್ಮ ಕ್ಲಿನಿಕ್’ ಆಸ್ಪತ್ರೆಗೂ ಚಾಲನೆ ನೀಡಿದ್ದರು.
ಅಂದು ಆರಂಭಗೊಂಡ ‘ನಮ್ಮ ಕ್ಲಿನಿಕ್’ನಲ್ಲಿದ್ದ ವೈದ್ಯರು, ಸಿಬ್ಬಂದಿ ಸ್ಥಳೀಯ ರೋಗಿಗಳಿಗೆ ಆರೋಗ್ಯ ಸೇವೆ ನೀಡಿದರು. ಈಗ ಅಲ್ಲಿನ ಆಸ್ಪತ್ರೆಯಲ್ಲಿ ಮಾತ್ರೆ, ಬಿಪಿ ತಪಾಸಣೆ ಬಿಟ್ಟರೆ ಬೇರೆ ಯಾವ ಚಿಕಿತ್ಸೆಯೂ ಸಿಗುತ್ತಿಲ್ಲ. ಸಮರ್ಪಕ ಆರೋಗ್ಯ ಸೇವೆ ಸಿಗದ ಕಾರಣ ರೋಗಿಗಳು ಇತ್ತ ಸುಳಿಯುತ್ತಿಲ್ಲ. ಇದು ರೋಗಿಗಳ ಪಾಲಿಗೆ ಆಸ್ಪತ್ರೆ ಇದ್ದು, ಇಲ್ಲದಂತಾಗಿದೆ ಎಂದು ಸ್ಥಳೀಯರ ಆರೋಪ.
ನಾಲ್ಕು ಕೊಠಡಿ ಹೊಂದಿರುವ ‘ನಮ್ಮ ಕ್ಲಿನಿಕ್’ಗೆ ವಾರದ ಹಿಂದೆಯಷ್ಟೇ ಮಹಿಳಾ ವೈದ್ಯರೊಬ್ಬರ ನೇಮಕವಾಗಿದೆ. ಜೊತೆಗೆ ಡಿ ಗ್ರೂಪ್‌ನ ಒಬ್ಬ ಮಹಿಳೆ ಇದ್ದಾರೆ. ಪ್ರತಿ ದಿನ ನಾಲ್ಕೈದು ರೋಗಿಗಳು ಆಸ್ಪತ್ರೆಗೆ ಚಿಕಿತ್ಸೆ ಬರುತ್ತಾರೆ. ಸಣ್ಣ ಪುಟ್ಟ ಕಾಯಿಲೆಗೆ ಮಾತ್ರೆ ನೀಡಲಾಗುತ್ತಿದೆ ಎಂದು ಆಸ್ಪತ್ರೆಯಲ್ಲಿದ್ದ ವೈದ್ಯೆ, ಸಿಬ್ಬಂದಿ ಹೇಳುತ್ತಾರೆ.
ಬಡವರಿಗೆ ಸಿಗದ ಸೇವೆ: ಆಸ್ಪತ್ರೆ ಆರಂಭಗೊಂಡಿರುವ ಸ್ಥಳದ ವಾಸಿಸುತ್ತಿರುವ ಬಹುತೇಕರು ಬಡವರು, ದಲಿತರು, ಹಿಂದುಳಿದವರು, ಕೂಲಿ ಕಾರ್ಮಿಕರು, ಬೀದಿಬದಿ ವ್ಯಾಪಾರಿಗಳಾಗಿದ್ದಾರೆ. ಇಂತಹ ಸ್ಥಳದಲ್ಲಿ ‘ನಮ್ಮ ಕ್ಲಿನಿಕ್’ ಉದ್ಘಾಟನೆ ಮಾಡಿದ್ದರಿಂದ ಸಾರ್ವಜನಿಕರಿಗೆ ಹೆಚ್ಚು ಅನುಕೂಲ ಎಂದುಕೊಂಡಿದ್ದೆವು. ಆದರೆ ಆರೋಗ್ಯ ಸೇವೆ ಸಿಗದಿರುವುದು ನಿರಾಸೆ ಮೂಡಿಸಿದೆ ಎಂದು 12ನೇ ವಾರ್ಡ್ ನಿವಾಸಿ ಶಿವಕುಮಾರ್ ದೂರಿದರು.
ಶೀಘ್ರದಲ್ಲಿ ಆರೋಗ್ಯ ಸೇವೆ
ವಿಜಯಪುರ ಪಟ್ಟಣದಲ್ಲಿ ಬಡವರು ಹೆಚ್ಚು ವಾಸಿಸುವ ಸ್ಥಳದಲ್ಲಿ ನಮ್ಮ ಕ್ಲಿನಿಕ್ ತೆರೆಯಲಾಗಿದೆ. ಎಕೆ ಕಾಲೋನಿಯ ಸಮುದಾಯ ಭವನದ ಕಟ್ಟಡವನ್ನು ನಮ್ಮ ಕ್ಲಿನಿಕ್ ಆಸ್ಪತ್ರೆಯಾಗಿ ಮಾರ್ಪಡಿಸಲಾಗಿದೆ. ಶೀಘ್ರದಲ್ಲಿ ಸಾರ್ವಜನಿಕರಿಗೆ ಆರೋಗ್ಯ ಸೇವೆ ನೀಡಲಿದೆ.ನಂದಕುಮಾರ್, 12ನೇ ವಾರ್ಡ್ ಪುರಸಭೆ ಸದಸ್ಯ
ಸಮರ್ಪಕ ಸೇವೆ ಸಿಗುತ್ತಿಲ್ಲ
ಒಂದು ಕಡೆ ರಾಯಲ್ ಪಬ್ಲಿಕ್ ಶಾಲೆಯನ್ನು ಬಾಡಿಗೆಗೆ ಪಡೆದು ನಮ್ಮ ಕ್ಲಿನಿಕ್ ಆರಂಭಿಸಲಾಗಿದೆ. ಮತ್ತೊಂದು ಕಡೆ ಸಮುದಾಯ ಭವನದ ಕಟ್ಟಡದಲ್ಲಿ ನಮ್ಮ ಕ್ಲಿನಿಕ್ ಆಸ್ಪತ್ರೆಯ ಬಳಕೆಗೆ ಇಡಲಾಗಿದೆ. ತಿಂಗಳಾದರೂ ಎರಡು ಕಡೆ ಸಾರ್ವಜನಿಕರಿಗೆ ಸಮರ್ಪಕ ಆರೋಗ್ಯ ಸೇವೆ ಸಿಗುತ್ತಿಲ್ಲ.ರಾಜಣ್ಣ, ವಿಜಯಪುರ ನಿವಾಸಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.