ADVERTISEMENT

ದೇವನಹಳ್ಳಿ | ಗುಣಮಟ್ಟದ ಶಿಕ್ಷಣ ಅಗ್ಗದ ದರಲ್ಲಿ ಸಿಗಲಿ: ಸುಧಾಮೂರ್ತಿ

​ಪ್ರಜಾವಾಣಿ ವಾರ್ತೆ
Published 14 ಅಕ್ಟೋಬರ್ 2025, 2:02 IST
Last Updated 14 ಅಕ್ಟೋಬರ್ 2025, 2:02 IST
ದೇವನಹಳ್ಳಿಯ ತಿಂಡ್ಲು ಗ್ರಾಮದಲ್ಲಿ ಮೂರ್ತಿ ಟ್ರಸ್ಟ್‌ ವತಿಯಿಂದ ₹1.50 ಕೋಟಿ ವೆಚ್ಚದಲ್ಲಿ ನಿರ್ಮಿಸಿರುವ ನಮ್ಮೂರ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆಯನ್ನು ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಚ್‌.ಮುನಿಯಪ್ಪ ಹಾಗೂ ಮೂರ್ತಿ ಟ್ರಸ್ಟ್‌ ಅಧ್ಯಕ್ಷೆ ಸುಧಾ ಮೂರ್ತಿ ಉದ್ಘಾಟಿಸಿದರು
ದೇವನಹಳ್ಳಿಯ ತಿಂಡ್ಲು ಗ್ರಾಮದಲ್ಲಿ ಮೂರ್ತಿ ಟ್ರಸ್ಟ್‌ ವತಿಯಿಂದ ₹1.50 ಕೋಟಿ ವೆಚ್ಚದಲ್ಲಿ ನಿರ್ಮಿಸಿರುವ ನಮ್ಮೂರ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆಯನ್ನು ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಚ್‌.ಮುನಿಯಪ್ಪ ಹಾಗೂ ಮೂರ್ತಿ ಟ್ರಸ್ಟ್‌ ಅಧ್ಯಕ್ಷೆ ಸುಧಾ ಮೂರ್ತಿ ಉದ್ಘಾಟಿಸಿದರು   

ದೇವನಹಳ್ಳಿ: ದೇಶದಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಕಷ್ಟು ಜ್ವಲಂತ ಸಮಸ್ಯೆಗಳು ಇದೆ. ಇವುಗಳಿಗೆ ನಮ್ಮ ದೇಶದಲ್ಲಿರುವ ಯುವ ಜನರೇ ಪರಿಹಾರ. ಅವರಿಗೆ ಕೌಶಲ್ಯತೆ, ನಾವೀನ್ಯತೆ ಹೆಚ್ಚಿಸಲು ಗುಣಮಟ್ಟದ ಶಿಕ್ಷಣ ಅನಿವಾರ್ಯ ಅದು ಅಗ್ಗದ ದರದಲ್ಲಿ ಸಿಗಬೇಕಿದೆ ಎಂದು ಮೂರ್ತಿ ಟ್ರಸ್ಟ್‌ ಅಧ್ಯಕ್ಷೆ ಸುಧಾಮೂರ್ತಿ ಹೇಳಿದರು.

ತಾಲ್ಲೂಕಿನ ಕುಂದಾಣ ಹೋಬಳಿಯ ಜಾಲಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿರುವ ತಿಂಡ್ಲು ಗ್ರಾಮದಲ್ಲಿ ಮೂರ್ತಿ ಟ್ರಸ್ಟ್‌ ವತಿಯಿಂದ ₹1.50 ಕೋಟಿ ವೆಚ್ಚದಲ್ಲಿ ನಿರ್ಮಿಸಿರುವ ನಮ್ಮೂರ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆ ಉದ್ಘಾಟನೆ ಕಾರ್ಯಕ್ರಮದಲ್ಲಿ ಮಾತನಾಡಿದರು.

‘ಸಮಾಜವೂ ನಮಗೆ ಸಾಕಷ್ಟು ಸವಲತ್ತು ನೀಡಿದೆ. ಅವುಗಳನ್ನು ಸಮಾಜಕ್ಕೆ ವಾಪಸ್ ನೀಡುತ್ತಿದ್ದೇವೆ ಅಷ್ಟೇ, ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ದೊರೆತರೆ ಇಡೀ ವಿಶ್ವವೇ ಅವರತ್ತ ನೋಡುವಂತಹ ಪ್ರತಿಭೆಯಾಗಿ ಅವರು ಬೆಳೆಯಲಿದ್ದಾರೆ’ ಎಂದು ತಿಳಿಸಿದರು.

ADVERTISEMENT

ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಚ್‌.ಮುನಿಯಪ್ಪ ಮಾತನಾಡಿ, ಈಗಾಗಲೇ ಹಲವೆಡೆ ಮೂರ್ತಿ ಟ್ರಸ್ಟ್‌ನವರು ಈ ರೀತಿಯ ಸಮಾಜಮುಖಿ ಕೆಲಸಗಳನ್ನು ಮಾಡುತ್ತಿದ್ದಾರೆ. ಇಂತಹ ಕೆಲಸವೂ ಎಲ್ಲರಿಗೂ ಆದರ್ಶಪ್ರಾಯ ಹಾಗೂ ಅನುಕರಣೀಯ. ಅವರ ಸೇವಾ ಮನೋಭಾವನೆ ಇತರರಿಗೆ ಪ್ರೇರಣೆಯಾಗಲಿದೆ ಎಂದು ಅಭಿಪ್ರಾಯಪಟ್ಟರು.

ಜಾಲಿಗೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಎಸ್‌.ಎಂ. ಆನಂದ್ ಕುಮಾರ್, ಸರ್ಕಾರಿ ಶಾಲೆಗಳನ್ನು ಖಾಸಗಿ ಟ್ರಸ್ಟ್‌ ಮೂಲಕ ಉನ್ನತೀಕರಣ ಮಾಡುತ್ತಿರುವುದು ಅಭಿನಂದನಾರ್ಹ. ಮೂರ್ತಿ ಟ್ರಸ್ಟ್ ವತಿಯಿಂದ ನಿರ್ಮಿಸಿರುವ ನಮ್ಮೂರ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆಯ ನೂತನ ಕಟ್ಟಡವು ನಾಲ್ಕು ಕೊಠಡಿ ಒಳಗೊಂಡಿದೆ ಎಂದು ತಿಳಿಸಿದರು.

ಬಯಪ್ಪ ಅಧ್ಯಕ್ಷ ವಿ.ಶಾಂತ ಕುಮಾರ್‌, ಬ್ಲಾಕ್‌ ಕಾಂಗ್ರೆಸ್ ಅಧ್ಯಕ್ಷ ಕೆ.ಸಿ.ಮಂಜುನಾಥ್‌, ತಾಲ್ಲೂಕು ಗ್ಯಾರಂಟಿ ಸಮಿತಿ ಅಧ್ಯಕ್ಷ ಸಿ. ಜಗನ್ನಾಥ್‌, ಮುಖಂಡರಾದ ನಾಗೇಗೌಡ, ಜಾಲಿಗೆ ಗ್ರಾಪಂ ಉಪಾಧ್ಯಕ್ಷ ಭವ್ಯ ಕೆ ಪ್ರಶಾಂತ್, ಪಿಡಿಒ ಪ್ರಕಾಶ್‌, ಜಿಪಂ ಉಪ ಕಾರ್ಯದರ್ಶಿ ಶಿವಕುಮಾರ್‌, ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಬೈಲಾಂಜಿನಪ್ಪ, ತಹಶೀಲ್ದಾರ್ ಎಂ. ಅನಿಲ್‌, ಇಒ ಶ್ರೀನಾಥ್‌ ಗೌಡ, ಬಿಇಒ ಲಲಿತಮ್ಮ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.