ADVERTISEMENT

ಮರುಕಳಿಸಿದ ಅವ್ಯವಸ್ಥೆ: ರಾಗಿ ಖರೀದಿ ಕೇಂದ್ರದಲ್ಲಿ ರೈತರ ವನವಾಸ

ರಾಗಿ ಖರೀದಿ ಕೇಂದ್ರದಲ್ಲಿ ರೈತರ ವನವಾಸ

​ಪ್ರಜಾವಾಣಿ ವಾರ್ತೆ
Published 8 ಫೆಬ್ರುವರಿ 2021, 1:06 IST
Last Updated 8 ಫೆಬ್ರುವರಿ 2021, 1:06 IST
ಎಪಿಎಂಸಿ ಆವರಣದಲ್ಲಿನ ರಾಗಿ ಖರೀದಿ ಕೇಂದ್ರದ ಮುಂದೆ ಭಾನುವಾರ ರಾತ್ರಿ ರಾಗಿ ಚೀಲ ತುಂಬಿರುವ ಟ್ರ್ಯಾಕ್ಟರ್‌ಗಳು ಸಾಲುಗಟ್ಟಿ ನಿಂತಿರುವ ದೃಶ್ಯ
ಎಪಿಎಂಸಿ ಆವರಣದಲ್ಲಿನ ರಾಗಿ ಖರೀದಿ ಕೇಂದ್ರದ ಮುಂದೆ ಭಾನುವಾರ ರಾತ್ರಿ ರಾಗಿ ಚೀಲ ತುಂಬಿರುವ ಟ್ರ್ಯಾಕ್ಟರ್‌ಗಳು ಸಾಲುಗಟ್ಟಿ ನಿಂತಿರುವ ದೃಶ್ಯ   

ದೊಡ್ಡಬಳ್ಳಾಪುರ: ರಾಗಿ ಖರೀದಿ ಕೇಂದ್ರದಲ್ಲಿ ಮತ್ತೆ ಅವ್ಯವಸ್ಥೆ ಮರುಕಳಿಸಿದೆ. ರೈತರು ಚಳಿ, ಗಾಳಿ ಎನ್ನದೆ ಮೈನಡುಗಿಸುವ ಚಳಿಯಲ್ಲೇ ಖರೀದಿ ಕೇಂದ್ರದ ಮುಂದೆ ರಾತ್ರಿ ಹಗಲೆನ್ನದೆ ತಮ್ಮ ಸರದಿಗಾಗಿ ಕಾಯುವ ಪರಿಸ್ಥಿತಿ ಉಂಟಾಗಿದೆ.

ರಾಗಿ ಮಾರಾಟಕ್ಕೆ ಹೆಸರು ನೋಂದಣಿ ಮಾಡಿಕೊಂಡಿದ್ದ ರೈತರಿಗೆ ನಿಗದಿತ ದಿನಾಂಕದಂದೇ ಬರುವಂತೆ ಪತ್ರಗಳನ್ನು ನೀಡಲಾಗಿತ್ತು. ಅದರಂತೆ ಫೆ.1ರಿಂದಲೇ ಖರೀದಿ ಕೇಂದ್ರಕ್ಕೆ ರಾಗಿ ತರುವಂತೆ ಅಧಿಕೃತ ಪತ್ರಗಳನ್ನು ನೀಡಲಾಗಿದೆ. ಆದರೆ, ರಾಜಕೀಯ ಕಾರಣಗಳಿಂದಾಗಿ ಖರೀದಿ ಆರಂಭಿಸಿದ್ದು ಮಾತ್ರ ಫೆ.6ರಿಂದ. ಹೀಗಾಗಿ ಫೆ.1ರಂದು ರಾಗಿ ತರುವಂತೆ ತಿಳಿಸಲಾಗಿದ್ದ ರೈತರು ಸೇರಿದಂತೆ ಫೆ.8ವರೆಗಿನ ರೈತರು ಟ್ರ್ಯಾಕ್ಟರ್‌ಗಳಲ್ಲಿ ಖರೀದಿ ಕೇಂದ್ರಕ್ಕೆ ರಾಗಿ ತಂದು ಕಾದು ಕುಳಿತಿದ್ದಾರೆ.

ಖರೀದಿ ಕೇಂದ್ರದ ಉದ್ಘಾಟನೆ ಸಂದರ್ಭದಲ್ಲಿ ಭಾನುವಾರವೂ ಸಹ ರೈತರಿಂದ ರಾಗಿ ಖರೀದಿ ಮಾಡುವಂತೆ ಶಾಸಕರು ಅಧಿಕಾರಿಗಳಿಗೆ ಸೂಚನೆ ನೀಡಿದ್ದರು. ಈಗ ನೋಡಿದರೆ ಯಾರೊಬ್ಬ ಅಧಿಕಾರಿಗಳ ಸುಳಿವು ಇಲ್ಲದಾಗಿದೆ. ಖರೀದಿ ತಡವಾಗಿ ಆರಂಭಿಸಿದ್ದೇ ಇಷ್ಟೆಲ್ಲ ಅವ್ಯವಸ್ಥೆ ಉಂಟಾಗಲು ಕಾರಣ ಎನ್ನುವ ಆರೋಪ ರೈತರದ್ದು.

ADVERTISEMENT

ಕನಿಷ್ಠ ಒಂದೆರಡು ವಾರಗಳ ಕಾಲವಾದರೂ ಎರಡು ಪಾಳಿಯಲ್ಲಿ ಕಾರ್ಮಿಕರು ಕರ್ತವ್ಯ ನಿರ್ವಹಿಸುವಂತೆ ಮಾಡಿದರೆ ರೈತರು ಇಡೀ ರಾತ್ರಿ ಮೈನಡುಗಿಸುವ ಚಳಿಯಲ್ಲಿ ವನವಾಸ ಮಾಡುವುದಾದರು ತಪ್ಪಿಸಬಹುದಾಗಿತ್ತು. ಸೋಮವಾದಿಂದಲಾದರೂ ಅಧಿಕಾರಿಗಳು ಎಚ್ಚೆತ್ತು ಫೆ.1ರಂದು ಖರೀದಿ ಕೇಂದ್ರಕ್ಕೆ ಬರುವಂತೆ ಪತ್ರ ನೀಡಲಾಗಿರುವ ರೈತರಿಂದ ರಾಗಿ ಖರೀದಿ ಆರಂಭಿಸಿ ನೂಕು ನುಗ್ಗಲು ಉಂಟಾಗುವುದನ್ನು ತಪ್ಪಿಸಲು ಸೂಕ್ತ ಸಿಬ್ಬಂದಿ ವ್ಯವಸ್ಥೆ ಮಾಡಿಕೊಳ್ಳಬೇಕು. ಇಲ್ಲವಾದರೆ ಖರೀದಿ ಕೇಂದ್ರದ ಮುಂದೆ ಪ್ರತಿಭಟನೆ ನಡೆಸುವ ಎಚ್ಚರಿಕೆಯನ್ನು ರೈತರು ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.