
ಆನೇಕಲ್: ಬಂಜರು ಭೂಮಿ ಎಂದು ನೀವು ಸರ್ಕಾರಕ್ಕೆ ವರದಿ ನೀಡಿದ್ದೀರಿ. ಆ ಬಂಜರು ಭೂಮಿಯಲ್ಲಿಯೇ ನಾವು ಸಮೃದ್ಧ ರಾಗಿ ಬೆಳೆದ್ದೇವೆ ನೋಡಿ...
ತಮ್ಮ ಹೊಲದಲ್ಲಿ ಬೆಳೆದ ರಾಗಿ ರಾಶಿಗೆ ಪೂಜೆ ಸಲ್ಲಿಸುವ ಮೂಲಕ ಮೇಡಹಳ್ಳಿ ಗ್ರಾಮದ ಪ್ರಗತಿಪರ ರೈತ ಮುರುಗೇಶ್ ಅವರು ಸರ್ಕಾರಿ ಅಧಿಕಾರಿಗಳಿಗೆ ನೀಡಿದ ಮೌನ ಮಾರುತ್ತರವಿದು!
ಆನೇಕಲ್ ತಾಲೂಕಿನ ಫಲವತ್ತಾದ ಕೃಷಿ ಭೂಮಿಗಳನ್ನು ಬಂಜರು ಭೂಮಿಗಳು ಎಂದು ವರದಿ ನೀಡಿರುವ ಅಧಿಕಾರಿಗಳಿಗೆ ಅವರು ತಮ್ಮ ಸಮೃದ್ಧ ರಾಗಿ ಬೆಳೆ ರಾಶಿ ಮೂಲಕ ತಿರುಗೇಟು ನೀಡಿದ್ದಾರೆ. ತಾಲ್ಲೂಕಿನ ಭೂಮಿ ಬಂಜರು ಅಲ್ಲ. ಫಲವತ್ತಾದ ಹಸಿರು ಭೂಮಿ ಎಂಬ ಸಂದೇಶ ರವಾನಿಸಿದ್ದಾರೆ.
ತಾಲ್ಲೂಕಿನ ಮಾಯಸಂದ್ರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮೇಡಹಳ್ಳಿಯ ಮುರುಗೇಶ್ ಅವರಿಗೆ ಈ ಬಾರಿ ಉತ್ತಮ ಫಸಲು ಬಂದಿದೆ. ರಾಗಿಕಣ ಮತ್ತು ಗೋಪೂಜೆ ಮೂಲಕ ತಾಲ್ಲೂಕಿನ ಫಲವತ್ತಾದ ಕೃಷಿ ಭೂಮಿ ಸ್ವಾಧೀನಕ್ಕೆ ಮುಂದಾದ ಸರ್ಕಾರಕ್ಕೆ ಸವಾಲು ಎಸೆದಿದ್ದಾರೆ.
ಅಪಾರ್ಟ್‌ಮೆಂಟ್, ವಿಲ್ಲಾ, ಲೇಔಟ್‌ಗಳಿಂದ ಆನೇಕಲ್ ತಾಲ್ಲೂಕಿನ ಬಹುತೇಕ ಭೂಮಿ ಶ್ರೀಮಂತರು ಹಾಗೂ ಬಂಡವಾಳಗಾರರ ಪಾಲಾಗಿದೆ. ಕೃಷಿ ಇಲಾಖೆ, ತೋಟಗಾರಿಕೆ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ತಾಲ್ಲೂಕಿನ ಭೂಮಿ ಬಂಜರು ಭೂಮಿ ಎಂದು ವರದಿ ನೀಡಿದ್ದಾರೆ.
ಈ ಅಧಿಕಾರಿಗಳ ವರದಿಯನ್ನು ವಿರೋಧಿಸುವ ಸಲುವಾಗಿ ರಾಗಿ ಕಣದ ಪೂಜೆಯನ್ನು ನಡೆಸಲಾಗಿದೆ. ಈ ಮೂಲಕ ಅಧಿಕಾರಿಗಳ ಕಣ್ಣು ತೆರೆಸುವ ಪ್ರಯತ್ನ ಮಾಡಲಾಗಿದೆ ಎಂದು ಮುರುಗೇಶ್ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.