ADVERTISEMENT

ಮಳೆ ಕೊರತೆ ಬಿತ್ತನೆ ಗುರಿಗೆ ಹಿನ್ನಡೆ: ರೈತರಿಗೆ ಮತ್ತೊಮ್ಮೆ ಆತಂಕ

ಸತತ ನಾಲ್ಕು ವರ್ಷದಿಂದ ಬರ ಎದುರಿಸುತ್ತಿರುವ ರೈತರು

ವಡ್ಡನಹಳ್ಳಿ ಬೊಜ್ಯನಾಯ್ಕ
Published 24 ಆಗಸ್ಟ್ 2019, 19:45 IST
Last Updated 24 ಆಗಸ್ಟ್ 2019, 19:45 IST
ಬಿತ್ತನೆಯಾಗಿರುವ ರಾಗಿ ಬೆಳೆ ಪೈರು.
ಬಿತ್ತನೆಯಾಗಿರುವ ರಾಗಿ ಬೆಳೆ ಪೈರು.   

ದೇವನಹಳ್ಳಿ: ಗ್ರಾಮಾಂತರ ಜಿಲ್ಲೆಯಲ್ಲಿ ವಾಡಿಕೆ ಮಳೆ ಪ್ರಮಾಣದ ಕೊರತೆಯಿಂದ ಬಿತ್ತನೆ ಗುರಿಗೆ ಹಿನ್ನಡೆಯಾಗಿದೆ. ಜುಲೈನಲ್ಲಿ ಹದವಾದ ಮಳೆ ಸುರಿದಿರುವುದು ಹೊರತುಪಡಿಸಿದರೆ ಇದುವರೆಗೂ ಮಳೆ ಆಗಿಲ್ಲ.

ತುಂತುರು ಮಳೆ ನಂಬಿ ರೈತರು ರಾಗಿ ಬಿತ್ತನೆ ಮಾಡಿದ್ದಾರೆ. ಆದರೆ, ತುಂತುರು ಮಳೆ ಕೂಡ ಮಾಯವಾಗಿದೆ. ಜೋರು ಗಾಳಿ ಬೀಸುತ್ತಿರುವುದರಿಂದ ಭೂಮಿಯಲ್ಲಿರುವ ಅಲ್ಪಸ್ವಲ್ಪ ತೇವಾಂಶ ಬರಿದಾಗುತ್ತಿದ್ದು ರೈತರನ್ನು ಚಿಂತೆಗೀಡು ಮಾಡಿದೆ.

ಸತತ ನಾಲ್ಕು ವರ್ಷಗಳಿಂದ ಬರ ಎದುರಿಸುತ್ತಿರುವ ರೈತರಿಗೆ ಮತ್ತೊಮ್ಮೆ ಆತಂಕ ಎದುರಾಗಿದೆ. ಬೆಳೆದ ಪೈರಿಗೆ ಎಡೆಕುಂಟೆ ತಾಕಿಸಲಾಗಿದೆ. ಆದರೆ, ಮಳೆ ಕೈ ಕೊಡುವ ಪರಿಸ್ಥಿತಿ ಎಂದು ಆವತಿ ಗ್ರಾಮದ ಮಾಯಪ್ಪ ಹೇಳಿದರು.

ADVERTISEMENT

ಜಿಲ್ಲೆಯಲ್ಲಿ ಅಂದಾಜು ಎರಡೂವರೆ ಲಕ್ಷಕ್ಕೂ ಹೆಚ್ಚು ನಾಟಿ ಮಿಶ್ರತಳಿ ಪಶು, ಕರು ಇವೆ. ಈಗಾಗಲೇ ಮೇವಿನ ಕೊರತೆ ಜತೆಗೆ ಕುಡಿಯುವ ನೀರಿನ ಸಮಸ್ಯೆ ಬಿಗಾಡಯಿಸಿದೆ. ಮುಂಗಾರಿನಲ್ಲೇ ಈ ಸ್ಥಿತಿಯಾದರೆ ಇಡೀ ವರ್ಷದ ಪರಿಸ್ಥಿತಿ ಹೇಗೆ ? ಒಂದು ತಿಂಗಳು ಮಳೆ ಬಾರದಿದ್ದರೆ ಭೀಕರ ಬರಗಾಲದ ದವಡೆಗೆ ಜಿಲ್ಲೆ ಸಿಲುಕಲಿದೆ. ಜಿಲ್ಲಾಡಳಿತ ಇದರ ಬಗ್ಗೆ ಮುನ್ನಚರಿಕೆ ವಹಿಸಬೇಕೆಂದು ರೈತ ಸಂಘ ಮತ್ತು ಹಸಿರು ಸೇನೆ ಮುಖಂಡರು ಸರ್ಕಾರಕ್ಕೆ ಒತ್ತಾಯಿಸಿದರು.

ಎರಡು ವರ್ಷದಿಂದ ರಾಜ್ಯ ಸರ್ಕಾರ ಬೆಳೆ ನಷ್ಟದ ಪರಿಹಾರ ನೀಡಿಲ್ಲ. ಬೆಳೆ ವಿಸ್ತೀರ್ಣಕ್ಕೆ ನೋಂದಾಯಿಸಿದ್ದ ವಿಮೆ ಹಣ ಬಂದಿಲ್ಲ. ಕನಿಷ್ಠ ಕಂತಿನ ಹಣ ಹಿಂದಿರುಗಿಸಿಲ್ಲ ಎಂದು ಜಿಲ್ಲಾ ಹಸಿರು ಸೇನೆ ಘಟಕ ಅಧ್ಯಕ್ಷ ಕೆ.ಎಸ್ ಹರೀಶ್ ಆಕ್ರೋಶ ವ್ಯಕ್ತಪಡಿಸಿದರು.

ಜಿಲ್ಲೆಯಲ್ಲಿ 2005ರಲ್ಲಿ 84 ಸಾವಿರ ಹೆಕ್ಟೇರ್ ಕೃಷಿ ಚಟುವಟಿಕೆ ಭೂಮಿ ಇತ್ತು. 86 ಸಾವಿರ ಎಕರೆಯಲ್ಲಿ ರೈತರು ತಮ್ಮ ಖಾಸಗಿ ಜಮೀನಿನಲ್ಲಿ ನೀಲಗಿರಿ ಮರ ಬೆಳೆಸಿದ್ದಾರೆ. ಅಂದರೆ ಸರ್ಕಾರ ಸೌಲಭ್ಯ ಸಕಾಲದಲ್ಲಿ ಸಿಗದ ರೈತರು ಈ ನಿರ್ಧಾರ ಕೈಗೊಂಡಿದ್ದಾರೆ ಎಂದು ಹಿಂದಿನ ಜಿಲ್ಲಾಧಿಕಾರಿ ಕರೀಗೌಡ ಅವರೇ ಮಾಹಿತಿ ನೀಡಿದ್ದಾರೆ ಎಂದರು.

ಬೆಂಗಳೂರು ನಗರಕ್ಕೆ ಹೊಂದಿಕೊಂಡಿರುವ ನಾಲ್ಕು ತಾಲ್ಲೂಕಿನಲ್ಲಿ ರಿಯಲ್ ಎಸ್ಟೇಟ್‌ ದಂಧೆಯಿಂದ ಸಾವಿರಾರು ಎಕರೆ ಫಲವತ್ತಾದ ಭೂಮಿಯನ್ನು ರೈತರು ಕಳೆದುಕೊಂಡಿದ್ದಾರೆ. ಮಾರುಕಟ್ಟೆ ವ್ಯವಸ್ಥೆ ಇಲ್ಲ. ಸೂಕ್ತ ಬೆಲೆ ಇಲ್ಲ. ಮಧ್ಯವರ್ತಿಗಳ ಹಾವಳಿಯಿಂದ ರೈತರು ಬೇಸತ್ತಿದ್ದಾರೆ ಎಂದು ರೈತ ಸಂಘ ರಾಜ್ಯ ಘಟಕದ ಉಪಾಧ್ಯಕ್ಷ ವೆಂಕಟನಾರಾಯಣಪ್ಪ ಅಸಮಾಧಾನ ವ್ಯಕ್ತಪಡಿಸಿದರು.

ಜಿಲ್ಲೆಯಲ್ಲಿ 42,447 ಹೆಕ್ಟೇರ್‌ನಲ್ಲಿ ಬಿತ್ತನೆ: ಪ್ರಸ್ತುತ ಸಾಲಿನ ಮುಂಗಾರು ಹಂಗಾಮಿನಲ್ಲಿ ಆ.20ರವರೆಗೆ 42,447 ಹೆಕ್ಟೇರ್‌ನಲ್ಲಿ ಮಾತ್ರ ಬಿತ್ತನೆಯಾಗಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ 45,695 ಹೆಕ್ಟೇರ್‌ನಲ್ಲಿ ವಿವಿಧ ಬೆಳೆ ಬಿತ್ತನೆಯಾಗಿತ್ತು ಎಂದು ಜಿಲ್ಲಾ ಕೃಷಿ ಇಲಾಖೆ ಮಾಹಿತಿ ನೀಡಿದೆ.

(ಖಷ್ಕಿ ಮತ್ತು ನೀರಾವರಿ ಹೆಕ್ಟೇರ್‌ನಲ್ಲಿ ) ಭತ್ತ 13, ರಾಗಿ 34,940, ಮುಸುಕಿನ ಜೋಳ 4,698, ತೃಣಧಾನ್ಯಗಳು 18, ಮೇವಿನ ಜೋಳ 1011, ಪಾಪ್ ಕಾರ್ನ್ 301, ತೊಗರಿ 489, ಹುರುಳಿ 16, ಅಲಸಂದೆ 307, ಅವರೆ 446, ನೆಲಗಡಲೆ 89, ಹರಳು 42 ,ಹುಚ್ಚೆಳ್ಳು 10, ಸಾಸಿವೆ 55, ಕಬ್ಬು 12, ಒಟ್ಟು ಏಕದಳ ಧಾನ್ಯ 40,981, ದ್ವಿದಳಧಾನ್ಯ 1258, ಎಣ್ಣೆ ಕಾಳುಗಳು 196 ಹೆಕ್ಟೇರ್, ಶೇಕಡ 70ರಷ್ಟು ಬಿತ್ತನೆಯಾಗಿದ್ದು ಕಳೆದ ವರ್ಷ ಈ ಅವಧಿಯಲ್ಲಿ ಶೇ84ರಷ್ಟು ಆಗಿತ್ತು, ದೇವನಹಳ್ಳಿ ಶೇ 64, ದೊಡ್ಡಬಳ್ಳಾಪುರ ಶೇ72, ಹೊಸಕೋಟೆ ಶೇ65, ನೆಲಮಂಗಲ ಶೇ76 ರಷ್ಟು ಬಿತ್ತನೆಯಾಗಿದೆ ಎಂದು ಇಲಾಖೆ ಮಾಹಿತಿ ನೀಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.