ದೇವನಹಳ್ಳಿ: ಮೇಲೂ–ಕೀಳು ಭಾವನೆ ತೊಲಗಿ ಸಮಾಜದಲ್ಲಿ ಸಮಾನತೆ ನಿರ್ಮಾಣ ಆಗಬೇಕು. ಎಲ್ಲರೂ ಮಾನವತ್ವದೊಂದಿಗೆ ಮನುಷ್ಯರಾಗಿ ಬಾಳಬೇಕೆಂಬ ತತ್ವವನ್ನು ವೀರಶೈವ ಧರ್ಮ ಸಂಸ್ಥಾಪಕ ಜಗದ್ಗುರು ರೇಣುಕಾಚಾರ್ಯರು ಮನುಕುಲಕ್ಕೆ ಸಾರಿದರು ಎಂದು ತಹಶೀಲ್ದಾರ್ ಎಚ್.ಬಾಲಕೃಷ್ಣ ಹೇಳಿದರು.
ಪಟ್ಟಣದ ತಾಲ್ಲೂಕು ಆಡಳಿತ ಸೌಧದ ನ್ಯಾಯಾಲಯ ಸಭಾಂಗಣದಲ್ಲಿ ತಾಲ್ಲೂಕು ಆಡಳಿತ, ತಾ.ಪಂ. ವತಿಯಿಂದ ಜಗದ್ಗುರು ರೇಣುಕಾಚಾರ್ಯರ ಜಯಂತೋತ್ಸವದಲ್ಲಿ ಮಾತನಾಡಿದರು.
ರೇಣುಕಾಚಾರ್ಯರು ಜನತೆಗೆ ಮಾನವೀಯ ಮೌಲ್ಯ ಬೋಧಿಸಿ ಧರ್ಮಪ್ರಜ್ಞೆಯೊಂದಿಗೆ ನೆಮ್ಮದಿ ಬದುಕಿಗೆ ಧಾರ್ಮಿಕ ಆಚರಣೆಗಳನ್ನು ಜಾರಿಗೊಳಿಸಿದರು. ರೇಣುಕಾಚಾರ್ಯರ ಮೌಲ್ಯಗಳನ್ನು ಪ್ರತಿಯೊಬ್ಬರು ಮೈಗೂಡಿಸಿಕೊಳ್ಳಬೇಕು ಎಂದು ಹೇಳಿದರು.
ವ್ಯಕ್ತಿ ತಿಳುವಳಿಕೆಗಿಂತ ನಡವಳಿಕೆ ಶ್ರೇಷ್ಠ. ತಿಳುವಳಿಕೆ ಸೋಲಬಹುದು ಆದರೆ ನಡವಳಿಕೆ ಇಂದಿಗೂ ಸೋಲಲ್ಲ ಎಂದರು.
ಗ್ರೇಡ್–2 ತಹಶೀಲ್ದಾರ್ ಜಯಕುಮಾರ್, ಪುರಸಭಾ ಸದಸ್ಯ ಕೋಡಿ ಮಂಚೇನಹಳ್ಳಿ ಎಸ್. ನಾಗೇಶ್, ದೇವನಹಳ್ಳಿ ತಾಲ್ಲೂಕು ವೀರಶೈವ ಲಿಂಗಾಯಿತ ಸಮಾಜದ ಪ್ರಧಾನ ಕಾರ್ಯದರ್ಶಿ ಪ್ರಸನ್ನಹಳ್ಳಿ, ವಿಜಯ ಕುಮಾರ್, ಅಖಿಲ ಭಾರತ ವೀರಶೈವ ಮಹಾಸಭಾ ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯ ವಿರೂಪಾಕ್ಷಯ್ಯ, ಜಿಲ್ಲಾ ಅಖಿಲ ಭಾರತ ವೀರಶೈವ ಮಹಾಸಭಾ ಮಾಜಿ ಅಧ್ಯಕ್ಷ ವಿರೂಪಾಕ್ಷ ಶಾಸ್ತ್ರಿ, ಅಖಿಲ ಭಾರತ ವೀರಶೈವ ಮಹಾಸಭಾದ ಜಿಲ್ಲಾ ನಿರ್ದೇಶಕರಾದ ಶಾಂತಮೂರ್ತಿ, ಅಶ್ವಿನಿ, ದೇವನಹಳ್ಳಿ ತಾಲ್ಲೂಕು ವೀರಶೈವ ಲಿಂಗಾಯಿತ ಸಮಾಜದ ಮಹಿಳಾ ಘಟಕದ ಅಧ್ಯಕ್ಷೆ ಶಶಿಕಲಾ ಕಾಂತರಾಜು, ಪ್ರಜಾ ವಿಮೋಚನ ಚಳುವಳಿ ಸ್ವಾಭಿಮಾನ ಅಧ್ಯಕ್ಷ ಸೋಲೂರು ನಾಗರಾಜ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.