ADVERTISEMENT

ದೇವನಹಳ್ಳಿ: 77 ಕೆರೆಗಳ ಅಂಗಳದಲ್ಲಿ ಗಣರಾಜ್ಯೋತ್ಸವ ಸಂಭ್ರಮ

​ಪ್ರಜಾವಾಣಿ ವಾರ್ತೆ
Published 27 ಜನವರಿ 2023, 5:23 IST
Last Updated 27 ಜನವರಿ 2023, 5:23 IST
ದೇವನಹಳ್ಳಿಯ ವಿಶ್ವನಾಥಪುರ ಕೆರೆ ಅಂಗಳದಲ್ಲಿ ಗಣರಾಜ್ಯೋತ್ಸವ ಪ್ರಯುಕ್ತ ಮಕ್ಕಳು ಸಾಂಸ್ಕೃತಿಕ ನೃತ್ಯ ಪ್ರದರ್ಶಿಸಿದರು
ದೇವನಹಳ್ಳಿಯ ವಿಶ್ವನಾಥಪುರ ಕೆರೆ ಅಂಗಳದಲ್ಲಿ ಗಣರಾಜ್ಯೋತ್ಸವ ಪ್ರಯುಕ್ತ ಮಕ್ಕಳು ಸಾಂಸ್ಕೃತಿಕ ನೃತ್ಯ ಪ್ರದರ್ಶಿಸಿದರು   

ದೇವನಹಳ್ಳಿ: ಜಿಲ್ಲಾ ಪಂಚಾಯಿತಿಯಿಂದ ಅಮೃತ ಸರೋವರ ಯೋಜನೆಯಡಿ ಅಭಿವೃದ್ಧಿಪಡಿಸುತ್ತಿರುವ 77 ಕೆರೆಗಳ ಅಂಗಳದಲ್ಲಿ ಗಣರಾಜ್ಯೋತ್ಸವ ಆಚರಣೆ ಆಯೋಜಿಸಿ ರಾಷ್ಟ್ರಧ್ವಜ ಹಾರಿಸಲಾಗಿದೆ ಎಂದು ಜಿ.ಪಂ. ಉಪ ಕಾರ್ಯದರ್ಶಿ ಡಾ.ನಾಗರಾಜ್‌ ತಿಳಿಸಿದರು.

ವಿಶ್ವನಾಥಪುರ ಗ್ರಾ.ಪಂ.ನಿಂದ ಗಣರಾಜ್ಯೋತ್ಸವ ಪ್ರಯುಕ್ತ ಹಮ್ಮಿ ಕೊಂಡಿದ್ದ ಉಚಿತ ಆರೋಗ್ಯ ತಪಾಸಣಾ ಶಿಬಿರಕ್ಕೆ ಭೇಟಿ ನೀಡಿ ಮಾತನಾಡಿದರು.

ಅಮೃತ ಸರೋವರ ಯೋಜನೆಯೂ ಜಿಲ್ಲೆಯ ಸಾಂಪ್ರದಾಯಿಕ ಜಲಮೂಲಗಳನ್ನು ಪುನಶ್ಚೇತನಗೊಳಿಸುವ ಮಹತ್ವಾಕಾಂಕ್ಷಿ ಯೋಜನೆಯಾಗಿದೆ. ಈಗಾಗಲೇ, ಜಿಲ್ಲೆಯ 77 ಕೆರೆಗಳಿಗೆ ಹೊಸ ರೂಪ ನೀಡಲಾಗಿದೆ. ಈ ವರ್ಷದೊಳಗೆ 150 ಕೆರೆಗಳನ್ನು ಸಂರಕ್ಷಣೆ ಮಾಡುವ ಗುರಿ ಹೊಂದಿದ್ದೇವೆ ಎಂದು ಮಾಹಿತಿ ನೀಡಿದರು.

ADVERTISEMENT

ಅಂತರ್ಜಲ ಹೆಚ್ಚಳಕ್ಕೆ ಕ್ರಮ, ಗ್ರಾಮೀಣ ಜಲ ಭದ್ರತೆಯನ್ನು ಗಮನದಲ್ಲಿಸಿಕೊಂಡು ಭವಿಷ್ಯದಲ್ಲಿ ನೀರನ ಬವಣೆ ಪರಿಹರಿಸುವ ಸದುದ್ದೇಶದಿಂದ 2022ರ ಏಪ್ರಿಲ್‌ನಿಂದಲೇ ಕೆರೆಗಳ ಅಭಿವೃದ್ಧಿಗೆ ಕ್ರಮವಹಿಸಲಾಗಿತ್ತು. ದೇವನಹಳ್ಳಿ 12, ದೊಡ್ಡಬಳ್ಳಾಪುರ 30, ನೆಲಮಂಗಲ 16 ಹಾಗೂ ಹೊಸಕೋಟೆ ತಾಲ್ಲೂಕಿನ 19 ಕೆರೆಗಳನ್ನು ಅಭಿವೃದ್ಧಿಪಡಿಸಲಾಗುತ್ತಿದೆ. ಈ ಬಾರಿ ಕೆರೆ ಅಂಗಳದಲ್ಲಿ ಮಾಜಿ ಸೈನಿಕರು, ಹಿರಿಯ ನಾಗರಿಕರಿಂದ ಧ್ವಜಾರೋಹಣ ನೆರವೇರಿಸಲಾಗಿದೆ ಎಂದು ತಿಳಿಸಿದರು.

ಪಂಚಾಯಿತಿ ಅಧ್ಯಕ್ಷೆ ಕಲ್ಪನಾ ನಾರಾಯಣಸ್ವಾಮಿ, ಮಾಜಿ ಅಧ್ಯಕ್ಷೆ ಮಂಗಳಾ ನಾರಾಯಣಸ್ವಾಮಿ, ಉಪಾಧ್ಯಕ್ಷ ವಿಜಯ್‌ ಕುಮಾರ್‌, ಕಾರ್ಯದರ್ಶಿ ಪದ್ಮಮ್ಮ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.