ದೇವನಹಳ್ಳಿ: ಪ್ರಸ್ತುತ ನಗರದ ಪಾರಿವಾಳ ಗುಡ್ಡದಲ್ಲಿರುವ ಸರ್ಕಾರಿ 13.26 ಎಕರೆ ಜಾಗ ವಾರ್ಷಿಕ ಕಡಲೆಕಾಯಿ ಪರಿಷೆಗೆ ಕಂದಾಯ ಇಲಾಖೆ ಮೀಸಲು ಇಡಬೇಕು ಎಂದು ಹಿಂದುಳಿದ ವರ್ಗಗಳ ಘಟಕ ಅಧ್ಯಕ್ಷ ಸಿ.ಮುನಿರಾಜು ಒತ್ತಾಯಿಸಿದರು.
ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಸ್ತುತ ಇರುವ ಆಂಜನೇಯ ಸ್ವಾಮಿ ದೇವಾಲಯ ಪಾರಿವಾಳ ಗುಡ್ಡದ ವ್ಯಾಪ್ತಿಯಲ್ಲಿದ್ದು ಮುಜರಾಯಿ ಇಲಾಖೆಗೆ ಸೇರಿದೆ ಎಂದರು.
ಈಗಾಗಲೇ ಈ ಹಿಂದೆ ವಿವಿಧ ಸರ್ವೇ ನಂಬರ್ ನ ಒಟ್ಟು 44 ಎಕರೆ ಪೈಕಿ 30.09 ಎಕರೆ ಜೈನ ಮಂದಿರಕ್ಕೆ 99 ವರ್ಷಗಳಿಗೆ ಸರ್ಕಾರ ಗುತ್ತಿಗೆ ನೀಡಿದೆ. ಉಳಿದಿರುವ 13.26 ಎಕರೆ ಜಾಗದಲ್ಲಿ ಅಲ್ಲಲ್ಲಿ ಬೀರಲಿಂಗೇಶ್ವರ ಸ್ವಾಮಿ ದೇವಾಲಯ, ಕನಕದಾಸರ ದೇವಾಲಯ, ಅಶ್ವಥಕಟ್ಟೆ, ಸಾಧುಸಂತರ ಗುಹೆ ಮತ್ತು ಸಮಾಧಿಗಳಿವೆ ಎಂದರು.
ನೂರಾರು ವರ್ಷಗಳಿಂದ ವಾರದ ಪೂಜೆ ಮತ್ತು ವಾರ್ಷಿಕ ಕಡಲೆಕಾಯಿ ಪರಿಷೆ ನಡೆಸಿಕೊಂಡು ಬರುತ್ತಿರುವ ಸಾರ್ವಜನಿಕರಿಗಾಗಿ ಮೀಸಲು ಇರುವ ಜಾಗದಲ್ಲಿ ಅಕ್ರಮ ಕಟ್ಟಡ ನಿರ್ಮಾಣವೆಂದರೆ ಅಧಿಕಾರಿಗಳು ಏನು ಮಾಡುತ್ತಿದ್ದಾರೆ ಎಂದು ದೂರಿದರು.
ನಾಲ್ಕೈದು ಅಡಿ ಜಾಗ ಒತ್ತುವರಿ ಮಾಡಿ ಸೂರು ನಿರ್ಮಾಣ ಮಾಡುವ ಬಡವರ ಮನೆಯನ್ನು ಜೆಸಿಬಿ ಯಂತ್ರಗಳಿಂದ ನೆಲಸಮ ಮಾಡುವ ಅಧಿಕಾರಿಗಳು ಇಲ್ಲಿನ ಅಕ್ರಮ ಜಾಗದ ಬಗ್ಗೆ ಮೃದು ಧೋರಣೆ ತಾಳಿದ್ದಾರೆ ಎಂದರೆ ಹೇಗೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಬೆಸ್ತರ ಸಂಘ ಸಂಸ್ಥಾಪಕ ತಾಲ್ಲೂಕು ಘಟಕ ಅಧ್ಯಕ್ಷ ಆಂಜಿನಪ್ಪ ಮಾತನಾಡಿ, ‘ಪಾರಿವಾಳ ಗುಡ್ಡದ ಸುತ್ತಲಿನ ಸರ್ಕಾರಿ ಜಾಗ ವ್ಯವಸ್ಥಿತವಾಗಿ ಒತ್ತುವರಿಯಾಗುತ್ತಿದೆ. ಒತ್ತುವರಿದಾರರಿಗೆ ಅಧಿಕಾರಿಗಳು ಬೆಂಬಲ ನೀಡುತ್ತಿದ್ದಾರೆ’ ಎಂದು ಟೀಕಿಸಿದರು.
‘ಮೂರು ವರ್ಷಗಳ ಹಿಂದೆ ಇಡೀ ತಾಲ್ಲೂಕಿನಲ್ಲಿ ಒತ್ತುವರಿಯಾಗಿರುವ ಜಾಗವನ್ನು ಸರ್ವೇ ಮೂಲಕ ಗುರುತಿಸಲಾಗಿತ್ತು. ಆ ಸಂದರ್ಭದಲ್ಲಿ ಪಾರಿವಾಳ ಗುಡ್ಡದಲ್ಲಿ ಒತ್ತುವರಿಯಾಗಿರುವ ಜಾಗವನ್ನು ಗುರುತಿಸಿ ಕಲ್ಲುಗಳನ್ನು ನೆಡಲಾಗಿತ್ತು. ಈಗ ಅವು ಮಾಯವಾಗಿವೆ’ ಎಂದು ದೂರಿದರು.
‘ಅಧಿಕಾರಿಗಳು ಸರ್ಕಾರಿ ಸ್ವತ್ತು ಮತ್ತು ಸಾರ್ವಜನಿಕರಿಗೆ ಮೀಸಲಿರುವ ಜಾಗಗಳನ್ನು ಮೊದಲು ಉಳಿಸುವ ಪ್ರಾಮಾಣಿಕ ಪ್ರಯತ್ನ ಮಾಡಬೇಕು. ಕಡಲೆಕಾಯಿ ವಾರ್ಷಿಕ ಪರಿಷೆಗೆ ಕನಿಷ್ಠ 25 ರಿಂದ 30 ಸಾವಿರ ಭಕ್ತರು ಸೇರುತ್ತಾರೆ. ಪ್ರವಾಸಿಗರ ತಾಣವಾಗಿಯೂ ಗುರುತಿಸಿಕೊಂಡಿದೆ. ಜಾಗವನ್ನು ಹದ್ದುಬಸ್ತು ಮಾಡಿ ಕಂದಾಯ ಇಲಾಖೆಯಿಂದ ಮುಜರಾಯಿ ಇಲಾಖೆಗೆ ಹಸ್ತಾಂತರಿಸಬೇಕು’ ಎಂದು ಆಗ್ರಹಿಸಿದರು.
ಮುಖಂಡರಾದ ಮೋಟಪ್ಪ, ಮರಿಯಾಚಾರ್, ಎನ್. ಮುನಿರಾಜು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.