ADVERTISEMENT

ಎಲ್ಲ ಧರ್ಮಗಳನ್ನು ಸಮಾನವಾಗಿ ಗೌರವಿಸಿ: ಎಚ್.ಡಿ.ದೇವೇಗೌಡ

ದೊಡ್ಡಬಳ್ಳಾಪುರದ 28ನೇ ಜಾಂಬೋರೇಟ್‍ನಲ್ಲಿ ಸರ್ವಧರ್ಮ ಪ್ರಾರ್ಥನೆ

​ಪ್ರಜಾವಾಣಿ ವಾರ್ತೆ
Published 1 ಜನವರಿ 2020, 13:53 IST
Last Updated 1 ಜನವರಿ 2020, 13:53 IST
28ನೇ ಜಾಂಬೋರೇಟ್‍ನಲ್ಲಿ ನಡೆದ ಸರ್ವಧರ್ಮ ಪ್ರಾರ್ಥನೆ ಕಾರ್ಯಕ್ರಮದಲ್ಲಿ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ, ಸುತ್ತೂರು ಮಠದ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮಿ ಭಾಗವಹಿಸಿದ್ದರು
28ನೇ ಜಾಂಬೋರೇಟ್‍ನಲ್ಲಿ ನಡೆದ ಸರ್ವಧರ್ಮ ಪ್ರಾರ್ಥನೆ ಕಾರ್ಯಕ್ರಮದಲ್ಲಿ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ, ಸುತ್ತೂರು ಮಠದ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮಿ ಭಾಗವಹಿಸಿದ್ದರು   

ದೊಡ್ಡಬಳ್ಳಾಪುರ: ಎಲ್ಲ ಧರ್ಮಗಳನ್ನು ಸಮಾನವಾಗಿ ಗೌರವಿಸಬೇಕಿರುವುದು ನಮ್ಮಲ್ಲೆರ ಹೊಣೆಗಾರಿಕೆ. ಕುವೆಂಪು ಅವರ ವಿಶ್ವ ಮಾನವ ಸಂದೇಶವನ್ನು ಎಲ್ಲೆಡೆ ಸಾರಬೇಕಾದ ಅನಿವಾರ್ಯತೆ ಇದೆ ಎಂದು ಜೆಡಿಎಸ್‌ ಪಕ್ಷದ ವರಿಷ್ಠ ಎಚ್.ಡಿ.ದೇವೇಗೌಡ ಹೇಳಿದರು.

ನಗರದ ಆನಿಬೆಸೆಂಟ್ ಪಾರ್ಕ್‍ನಲ್ಲಿ ನಡೆಯುತ್ತಿರುವ 28ನೇ ಜಾಂಬೋರೇಟ್‍ನಲ್ಲಿ ಬುಧವಾರ ನಡೆದ ಸರ್ವಧರ್ಮ ಪ್ರಾರ್ಥನೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

ರಾಜ್ಯದಲ್ಲಿ ಸ್ಕೌಟ್ಸ್ ಮತ್ತು ಗೈಡ್ಸ್‌ಗೆ 7 ಲಕ್ಷ ಮಂದಿ ಸೇರ್ಪಡೆಯಾಗಿರುವುದು ಅಭಿನಂದನೀಯ. ಕೊಂಡಜ್ಜಿ ಬಸಪ್ಪ ಅವರು ಸ್ಕೌಟ್ಸ್ ಮತ್ತು ಗೈಡ್ಸ್‌ಗೆ ನೀಡಿರುವ ಕೊಡುಗೆ ಅಪಾರವಾಗಿದೆ. ಅವರ ಮಕ್ಕಳು ಸೇವೆ ಸಲ್ಲಿಸುತ್ತಿರುವುದು ಶ್ಲಾಘನೀಯವಾಗಿದೆ. ಸ್ಕೌಟ್ಸ್ ಚಳವಳಿ ಇನ್ನೂ ಉನ್ನತ ಮಟ್ಟದಲ್ಲಿ ಬೆಳೆಯಬೇಕಿದೆ ಎಂದರು.

ADVERTISEMENT

ಸುತ್ತೂರು ಮಠದ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮೀಜಿ ಮಾತನಾಡಿ, ‘ನಮ್ಮ ಬದುಕಿನಲ್ಲಿ ಸೇವೆ ಎನ್ನುವ ಪದ ಅಡಕವಾಗಿರಬೇಕು. ಇಂತಹ ಸೇವಾ ಮನೋಭಾವ ರೂಢಿಸುವಲ್ಲಿ ಸ್ಕೌಟ್ಸ್ ಮತ್ತು ಗೈಡ್ಸ್‍ನ ಪಾತ್ರ ಮಹತ್ವದ್ದಾಗಿದೆ. ನಾವು ಮಾಡುವ ಪ್ರಾರ್ಥನೆಯಲ್ಲಿ ಲೋಕ ಕಲ್ಯಾಣದ ಆಶಯ ಇರಬೇಕು’ ಎಂದರು.

‘ದೇವನೊಬ್ಬ ನಾಮ ಹಲವು ಎಂಬಂತೆ ಭಗವಂತ ಒಬ್ಬನೇ. ಅವನನ್ನು ಹಲವಾರು ಹೆಸರುಗಳಿಂದ ಕರೆಯುತ್ತಾರೆ. ಎಲ್ಲರ ಪ್ರಾರ್ಥನೆಯೂ ಭಗವಂತನಿಗೆ ಸೇರುತ್ತವೆ. ಪ್ರತಿ ಕುಟುಂಬಗಳಲ್ಲಿ ಸಾಂಸ್ಕೃತಿಕ ಶ್ರೀಮಂತಿಕೆ ಬೆಳೆಯುವಲ್ಲಿ ಇಂತಹ ಕಾರ್ಯಕ್ರಮಗಳು ಇಂಬು ನೀಡುತ್ತವೆ’ ಎಂದರು.

ಸಾಹಿತಿ ಹಾಗೂ ಸ್ಕೌಟ್ಸ್ ಮತ್ತು ಗೈಡ್ಸ್‍ನ ಪ್ರಕಟಣಾ ಸಮಿತಿ ಅಧ್ಯಕ್ಷ ಡಾ.ಗೊ.ರು.ಚೆನ್ನಬಸಪ್ಪ ಮಾತನಾಡಿ, ಎಲ್ಲ ಧರ್ಮಗಳ ಆಶಯವೂ ಜಗತ್ತಿಗೆ ಒಳಿತನ್ನು ಬಯಸಿ, ಬದುಕಿನ ಮೌಲ್ಯಗಳನ್ನು ತಿಳಿಸುವುದೇ ಆಗಿದೆ. ಪ್ರಾರ್ಥನೆಯ ಮಹತ್ವವನ್ನು ಎಲ್ಲರೂ ಅರಿಯಬೇಕು. ಧರ್ಮ, ಜಾತೀಯತೆ ಮೊದಲಾದ ಕಾರಣಗಳಿಂದಾಗಿ ಸಮಾಜದಲ್ಲಿ ಉಂಟಾಗುವ ಅಪಾಯಕಾರಿ ಬೆಳವಣಿಗೆಗೆ ಕಡಿವಾಣ ಹಾಕಲು ಆಡಳಿತ ವ್ಯವಸ್ಥೆ ಹೆಚ್ಚಿನ ಗಮನ ಹರಿಸಬೇಕಿದೆ ಎಂದರು.

ಹಿಂದೂ, ಇಸ್ಲಾಂ, ಕ್ರೈಸ್ತ, ಬೌದ್ಧ, ಜೈನ ಧರ್ಮದಲ್ಲಿ ಅಡಕವಾಗಿರುವ ಶ್ಲೋಕಗಳನ್ನು, ಸಂದೇಶಗಳನ್ನು ಪಠಿಸಲಾಯಿತು.

ಸ್ಕೌಟ್ಸ್‌ ಮತ್ತು ಗೈಡ್ಸ್‌ ರಾಜ್ಯ ಮುಖ್ಯ ಆಯುಕ್ತ ಪಿ.ಜಿ.ಆರ್.ಸಿಂಧ್ಯ, ಶಾಸಕ ಯು.ಟಿ.ಖಾದರ್, ಬೀದರ್ ಶಾಹಿನ್ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಡಾ.ಅಬ್ದುಲ್ ಕದೀರ್, ಫಾದರ್ ಪೆಡ್ರಿ, ಮೌಲಾ ಖಲೀಂ ಉಲ್ಲಾ, ಶಾಸಕ ನಿಸರ್ಗ ನಾರಾಯಣಸ್ವಾಮಿ, ಜೆಡಿಎಸ್ ಜಿಲ್ಲಾ ಘಟಕದ ಅಧ್ಯಕ್ಷ ಬಿ.ಮುನೇಗೌಡ, ವಿಧಾನ ಪರಿಷತ್ ಸದಸ್ಯ ಮೋಹನ ಕೊಂಡಜ್ಜಿ, ಸ್ಕೌಟ್ಸ್ ಮತ್ತು ಗೈಡ್ಸ್ ರಾಜ್ಯ ಉಪಾಧ್ಯಕ್ಷ ಕೊಂಡಜ್ಜಿ ಷಣ್ಮುಖಪ್ಪ, ಮುಖ್ಯಸ್ಥ ಚಂದ್ರಶೇಖರ್ ಇದ್ದರು.

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.