ವಿಜಯಪುರ(ದೇವನಹಳ್ಳಿ): ಪುರಸಭೆಯ ನಿವೃತ್ತ ಪೌರಕಾರ್ಮಿಕ 75 ವರ್ಷ ವಯಸ್ಸಿನ ಉಪೇಂದ್ರ ಸ್ವಯಂ ಪ್ರೇರಿತರಾಗಿ ಪಟ್ಟಣದ ಮುಖ್ಯ ರಸ್ತೆಗಳಲ್ಲಿ ಬಿದ್ದಿರುವ ಗುಂಡಿಗಳನ್ನು ಮುಚ್ಚುವ ಕೆಲಸ ಮಾಡುತ್ತಿದ್ದಾರೆ.
ರಸ್ತೆ ಗುಂಡಿಗಳಿಂದ ಅಪಘಾತ ಸಂಭವಿಸಬಾರದು ಎಂಬ ಕಾಳಜಿಯಿಂದ ಚೀಲದೊಳಗೆ ಕಲ್ಲು, ಮಣ್ಣು ತುಂಬಿಕೊಂಡು ಸೈಕಲ್‍ನಲ್ಲಿ ತಂದು ರಸ್ತೆ ಗುಂಡಿಗಳಿಗೆ ಸುರಿಯುತ್ತಿದ್ದಾರೆ.
ಜಿಟಿ ಮಳೆ ಹಾಗೂ ರಸ್ತೆ ಕಾಮಗಾರಿಯಿಂದ ಪಟ್ಟಣದ ಮುಖ್ಯ ರಸ್ತೆಗಳಲ್ಲಿ ಗುಂಡಿಗಳು ಬಿದ್ದಿವೆ. ವಾಹನ ಸವಾರರ ಅಪಘಾತಕ್ಕೆ ಗುಂಡಿಗಳು ಕಾರಣವಾಗುತ್ತಿವೆ.
ಮಳೆ ಸುರಿದಾಗ ರಸ್ತೆ ಗುಂಡಿಗಳಲ್ಲಿ ನೀರು ಸಂಗ್ರಹ ಆಗುತ್ತಿರುವುದರಿಂದ ವಾಹನ ಸವಾರರು ಜೀವಭಯದಲ್ಲಿ ಸಂಚರಿಸಬೇಕಾದ ಪರಿಸ್ಥಿತಿ ಉಂಟಾಗಿದೆ.
ಮಂಗಳವಾರ ಪಟ್ಟಣದ ಮುಖ್ಯರಸ್ತೆಗಳಲ್ಲಿ ಬಿದ್ದಿರುವ ಗುಂಡಿಗಳನ್ನು ಮುಚ್ಚಿದ ಉಪೇಂದ್ರ ಅವರ ಕಾರ್ಯಕ್ಕೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಜೊತೆಗೆ ಪುರಸಭೆ ನಿರ್ಲಕ್ಷ್ಯಕ್ಕೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
‘ಮಳೆಯಿಂದ ರಸ್ತೆಗಳು ಕೆಸರುಗದ್ದೆಯಾಗಿದೆ. ಮುಖ್ಯ ರಸ್ತೆಗಳಲ್ಲಿ ದೊಡ್ಡ ಗುಂಡಿಗಳು ಬಿದ್ದಿರುವುದರಿಂದ ವಾಹನ ಸವಾರರ ಅಪಘಾತ ಹೆಚ್ಚಳವಾಗಿದೆ. ಸಂಬಂಧಪಟ್ಟ ಅಧಿಕಾರಿಗಳು, ಜನಪ್ರತಿನಿಧಿಗಳು ನಿರ್ಲಕ್ಷ್ಯ ತೋರಿರುವುದು ಬೇಸರದ ಸಂಗತಿ’ ಎಂದು ಉಪೇಂದ್ರ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.